ಮಾರ್ಟಿನ್ ಸಿನಿಮಾ ಬಗ್ಗೆ ಕೆಟ್ಟದಾಗಿ ರಿವ್ಯೂವ್ ನೀಡಿದ ಯೂಟ್ಯೂಬರ್ ಬಂಧನ, ತಪ್ಪೊಪ್ಪಿಗೆ

| Published : Oct 16 2024, 01:32 AM IST / Updated: Oct 16 2024, 04:43 AM IST

ಸಾರಾಂಶ

ಮಾರ್ಟಿನ್ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀರಾ ಕೆಟ್ಟದಾಗಿ ಮಾತನಾಡಿ ವಿಡಿಯೋ ಪೋಸ್ಟ್ ಮಾಡಿದ್ದ ಯೂಟ್ಯೂಬರ್ ಸುಧಾಕರ ಗೌಡನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

 ಪೀಣ್ಯ ದಾಸರಹಳ್ಳಿ (ಬೆಂಗಳೂರು) : ನಟ ಧ್ರುವ ಸರ್ಜಾ ಅವರ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀರಾ ಕೆಟ್ಟದಾಗಿ ಮಾತನಾಡಿ ವಿಡಿಯೋ ಪೋಸ್ಟ್ ಮಾಡಿದ್ದ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ ಗೌಡನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಯೂಟ್ಯೂಬರ್, ಸೋಶಿಯಲ್ ಮಿಡಿಯಾ ಇನ್ಫ್ಲೂಯೆನ್ಸರ್ ಸ್ಟ್ರಾಂಗ್ ಸುಧಾಕರ್ ಚಿತ್ರದ ಬಗ್ಗೆ ತೀರಾ ಕೆಟ್ಟದಾಗಿ ರಿವ್ಯೂ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದರ ಬೆನ್ನಲ್ಲಿಯೇ ಪೊಲೀಸರಿಗೆ ಮಾರ್ಟಿನ್ ಚಿತ್ರದ ನಾಯಕ ಧ್ರುವ ಸರ್ಜಾ ಅವರ ಅಭಿಮಾನಿಗಳು ದೂರು ನೀಡಿದ್ದರು. ಇಷ್ಟೇ ಅಲ್ಲದೆ ಈ ಹಿಂದೆ ಯೂಟ್ಯೂಬರ್ ಸುಧಾಕರ್‌ ವಿರುದ್ಧ ಹಲ್ಲೆಗೆ ಸಂಬಂಧಪಟ್ಟಂತೆ ಕೇಸೊಂದರಲ್ಲಿ ವಾರೆಂಟ್ ಜಾರಿ ಆಗಿದ್ದರೂ ಠಾಣೆಗೆ ಹಾಜರಾಗಿರಲಿಲ್ಲ. ಇನ್ನು ಧ್ರುವ ಸರ್ಜಾ ಅಭಿಮಾನಿಗಳಿಂದ ದೂರು ಬಂದ ಬೆನ್ನಲ್ಲೇ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸುಧಾಕರ್‌ನನ್ನು ಬಂಧಿಸಿದರು.

ಸ್ಟ್ರಾಂಗ್ ಸುಧಾಕರ ಮಾಡಿದ ವಿಡಿಯೋದಲ್ಲಿ ‘ನಾನು ಜೀವನದಲ್ಲಿ ನೋಡಿದ ಅತ್ಯಂತ ಕೆಟ್ಟ ಸಿನಿಮಾ ಮಾರ್ಟಿನ್’ ಎಂದೆಲ್ಲಾ ಹೇಳಿಕೊಂಡಿದ್ದ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಎಲ್ಲರೂ ಕೆಜಿಎಫ್ ಸಿನಿಮಾ ಕಾಪಿ ಮಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮಾದರಿಯಲ್ಲಿಯೇ ಕಳಪೆಯಾಗಿ ಉಪೇಂದ್ರ ಅವರ ‘ಕಬ್ಜ’ ಸಿನಿಮಾ ಮಾಡಲಾಗಿದೆ. 

ಕಬ್ಜ ಸಿನಿಮಾದ ಮುಂದುವರಿದ ಕಳಪೆ ಭಾಗ ಎನ್ನುವ ರೀತಿಯಲ್ಲಿ ಮಾರ್ಟಿನ್ ಸಿನಿಮಾ ಮಾಡಲಾಗಿದೆ’ ಎಂದು ಸುಧಾಕರ್‌ ಮಾತನಾಡಿದ್ದ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೀಕ್ಷಣೆಗಳು, ಲೈಕ್ಸ್ ಹಾಗೂ ಕಾಮೆಂಟ್‌ಗಳು ಬಂದಿದ್ದವು.

ವಿಡಿಯೋ ಡಿಲೀಟ್‌ ಮಾಡಿಸಿದ ಪೊಲೀಸರು: ಪೊಲೀಸರು ಕೆಟ್ಟದಾಗಿ ರಿವ್ಯೂ ಮಾಡಿದ ವಿಡಿಯೋವನ್ನು ಸುಧಾಕರ್‌ನಿಂದ ಡಿಲೀಟ್ ಮಾಡಿಸಿದ್ದಾರೆ. ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ. ಇನ್ನು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟ್ರಾಂಗ್ ಸುಧಾಕರನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಕೋರ್ಟ್‌ನಲ್ಲಿ ಜಾಮೀನು ಪಡೆದು ಸುಧಾಕರ ಬಿಡುಗಡೆ ಆಗಿದ್ದಾನೆ.