ಷೇರ್‌ ಟ್ರೆಂಡಿಂಗ್‌ನಲ್ಲಿ ಅಧಿಕ ಲಾಭದಾಸೆ ತೋರಿಸಿ ಜನರಿಂದ ಹಣ ಪಡೆದು 1.5 ಕೋಟಿ ವಂಚನೆ

| Published : Oct 16 2024, 01:31 AM IST / Updated: Oct 16 2024, 04:49 AM IST

Money

ಸಾರಾಂಶ

ಷೇರ್‌ ಟ್ರೆಂಡಿಂಗ್‌ನಲ್ಲಿ ಅಧಿಕ ಲಾಭದಾಸೆ ತೋರಿಸಿ ಜನರಿಂದ ಹಣ ಪಡೆದು ವಂಚಿಸುವ ಜಾಲಕ್ಕೆ ಸಹಕರಿಸಿದ್ದ ಆರೋಪದ ಮೇರೆಗೆ ಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕ ಸೇರಿ 8 ಮಂದಿ ಸಿಸಿಬಿಯ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

 ಬೆಂಗಳೂರು : ಷೇರ್‌ ಟ್ರೆಂಡಿಂಗ್‌ನಲ್ಲಿ ಅಧಿಕ ಲಾಭದಾಸೆ ತೋರಿಸಿ ಜನರಿಂದ ಹಣ ಪಡೆದು ವಂಚಿಸುವ ಜಾಲಕ್ಕೆ ಸಹಕರಿಸಿದ್ದ ಆರೋಪದ ಮೇರೆಗೆ ಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕ ಸೇರಿ 8 ಮಂದಿ ಸಿಸಿಬಿಯ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಾಗರಬಾವಿ ಆಕ್ಸಿಸ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಕಿಶೋರ್ ಸಾಹು, ಸೇಲ್ಸ್ ಮ್ಯಾನೇಜರ್‌ ಮನೋಹರ್‌, ಸೇಲ್ಸ್ ಎಕ್ಸಿಕ್ಯುಟಿವ್‌ಗಳಾದ ಕಾರ್ತಿಕ್, ರಾಕೇಶ್, ಬ್ಯಾಂಕ್ ಖಾತೆದಾರರಾದ ಚಿಕ್ಕಮಗಳೂರು ಜಿಲ್ಲೆಯ ಲಕ್ಷ್ಮೀಕಾಂತ್, ರಘುರಾಜ್‌, ಕೆಂಗೇಗೌಡ ಹಾಗೂ ಸಿ.ಪಿ.ಮಾಲಾ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಮತ್ತಿಬ್ಬರು ಹಾಗೂ ಖಾತೆಯನ್ನು ತೆರೆಯಲು ಅಮಿಷವೊಡ್ಡಿದ ವ್ಯಕ್ತಿ ಸೇರಿ 9 ಮಂದಿ ತಲೆಮರೆಸಿಕೊಂಡಿದ್ದಾರೆ. ಈ ಆರೋಪಿಗಳು ಹೊರರಾಜ್ಯ ಹಾಗೂ ವಿದೇಶದಲ್ಲಿದ್ದು, ಅವರ ಪತ್ತೆಗೆ ತನಿಖೆ ಮುಂದುವರೆದಿದೆ.

ಕೆಲ ದಿನಗಳ ಹಿಂದೆ ಷೇರ್‌ ಟ್ರೆಂಡಿಂಗ್‌ನಲ್ಲಿ ದುಪ್ಪಟ್ಟು ಆದಾಯದ ಆಸೆ ತೋರಿಸಿ ಯಲಹಂಕದ ಉದ್ಯಮಿಯೊಬ್ಬರಿಗೆ 1.5 ಕೋಟಿ ಹಣ ಪಡೆದು ಸೈಬರ್ ವಂಚಕರು ಟೋಪಿ ಹಾಕಿದ್ದರು. ಈ ಕೃತ್ಯದ ತನಿಖೆಗಿಳಿದ ಸೈಬರ್ ಕ್ರೈಂ ಠಾಣೆ ಇನ್ಸ್‌ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡವು, ಹಣ ವರ್ಗಾಣೆಯಾಗಿದ್ದ ಬ್ಯಾಂಕ್ ಖಾತೆಗಳನ್ನು ಜಾಲಾಡಿದಾಗ ವಂಚನೆ ಜಾಲವು ಬಯಲಾಗಿದೆ.

ಅಧಿಕ ಆಸೆ ತೋರಿಸಿ ಹೂಡಿಕೆ: ಇದೇ ವರ್ಷದ ಮಾರ್ಚ್‌ನಲ್ಲಿ ಯಲಹಂಕದ ಉದ್ಯಮಿಗೆ ಸಾಮಾಜಿಕ ಜಾಲತಾಣದ ಮೂಲದ ಸೈಬರ್ ವಂಚಕರು ಗಾಳ ಹಾಕಿದ್ದಾರೆ. ತಮಗೆ ಷೇರ್ ಟ್ರೇಡಿಂಗ್‌ನಲ್ಲಿ ಅಧಿಕ ಲಾಭ ಗಳಿಸುವ ಷೇರು ಕೊಡಿಸುತ್ತೇವೆ ಎಂದು ಆರೋಪಿಗಳು ಆಫರ್ ಕೊಟ್ಟಿದ್ದರು. ಈ ಮಾತಿಗೆ ಮರುಳಾದ ಬಳಿಕ

 ‘ವಿಐಪಿ ಟ್ರೇಂಡಿಂಗ್’ ವಾಟ್ಸಾಪ್‌ ಗ್ರೂಪ್‌ಗೆ ದೂರುದಾರರನ್ನು ಉದ್ಯಮಿಯನ್ನು ಆರೋಪಿಗಳು ಸೇರಿಸಿದ್ದರು. ಅಲ್ಲಿ ಗುಂಪಿನಲ್ಲಿ ಮೆಸೇಜ್‌ನಲ್ಲಿ ಷೇರ್ ಟ್ರೆಡಿಂಗ್ ಬಗ್ಗೆ ತರಬೇತಿ ನೀಡಿ, ನಂತರ ವಿಐಪಿ ಟ್ರೆಡಿಂಗ್ ಅಕೌಂಟ್‌ನಲ್ಲಿ ಹಣವನ್ನು ಹೂಡಿದರೆ ಹತ್ತು ಪಟ್ಟು ಲಾಭ ಗಳಿಸಬಹುದು ಎಂದಿದ್ದರು.

ಇದಕ್ಕೆ ಒಪ್ಪಿ ದೂರುದಾರರು, ಮೊದಲು ವಿಐಪಿ ಟ್ರೆಡಿಂಗ್ ಅಕೌಂಟ್‌ಗೆ ಖಾತೆಗೆ 50 ಸಾವಿರ ರು. ಜಮಾ ಮಾಡಿದರು. ನಂತರ ಹೂಡಿಕೆ ಮಾಡಿದ ಹಣವು ದ್ವಿಗುಣವಾಗಿದೆ ಎಂದು ಅವರಿಗೆ ಮೆಸೇಜ್ ಬಂದಿತ್ತು. ಬಳಿಕ ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ವಾಟ್ಸಾಪ್‌ ಮೂಲಕ ಆರೋಪಿಗಳು ಪ್ರಚೋದಿಸಿದ್ದರು. ಈ ಆಮಿಷಕ್ಕೊಳಗಾದ ಅವರು, ವಿಐಪಿ ಟ್ರೆಡಿಂಗ್ ಖಾತೆಗೆ ಹಂತ ಹಂತವಾಗಿ 3 ತಿಂಗಳ ಅವಧಿಯಲ್ಲಿ 1.5 ಕೋಟಿ ರು. ಹಣವನ್ನು ಜಮೆ ಮಾಡಿದ್ದರು. ನಿಮಗೆ 28 ಕೋಟಿ ರು. ಲಾಭ ಬಂದಿದೆ ಎಂದು ವಾಟ್ಸಾಪ್‌ನಲ್ಲಿ ದೂರುದಾರಿಗೆ ಆರೋಪಿಗಳು ತೋರಿಸಿ, ಈ ಹಣವನ್ನು ಪಡೆಯಬೇಕಾದರೆ ಸರ್ವರ್ ಮ್ಯಾನೇಜ್‌ ಫೀಸ್‌ ಆದ 75 ಲಕ್ಷ ರು. ಹಣವನ್ನು ಸಂದಾಯ ಮಾಡಿದರೆ ಮಾತ್ರ 28 ಕೋಟಿ ರು. ಹಣ ಸಿಗಲಿದೆ ಎಂದಿದ್ದರು.

ವಂಚಕರ ಆಫರ್‌ ಮೇಲೆ ಶಂಕೆ: ಈ ಸೂಚನೆಗೆ ಬಗ್ಗೆ ಶಂಕೆಗೊಂಡ ಯಲಹಂಕದ ಉದ್ಯಮಿ, ಕೊನೆಗೆ ಜು.1ರಂದು ಸೈಬರ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡವು, ದೂರುದಾರರು ಹೂಡಿಕೆ ಮಾಡಿದ್ದ ವಿವಿಧ ಬ್ಯಾಂಕ್ ಖಾತೆಗಳ ವಿವರವನ್ನು ಪಡೆದು ಎನ್‌ಸಿಆರ್‌ಪಿ-1930 ಪೋರ್ಟಲ್‌ನಲ್ಲಿ ಪರಿಶೀಲಿಸಿತು.

ಆಗ ಆ ಖಾತೆಗಳ ಪೈಕಿ 2 ಖಾತೆಗಳು ನಾಗರಬಾವಿ ಆಕ್ಸಿಸ್ ಬ್ಯಾಂಕ್ ಖಾತೆಯದ್ದಾಗಿದ್ದವು. ಈ ಖಾತೆದಾರರ ಬಗ್ಗೆ ಪರಿಶೀಲಿಸಿದಾಗ ಅವರು ಚಿಕ್ಕಮಗಳೂರಿನವರು ಎಂಬುದು ಗೊತ್ತಾಯಿತು. ಈ ಬಗ್ಗೆ ಆಕ್ಸಿಸ್ ಬ್ಯಾಂಕ್‌ನ ಶಾಖೆಯ ವ್ಯವಸ್ಥಾಪಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಕರೆಂಟ್ ಅಕೌಂಟ್‌ದಾರರು ಬೆಂಗಳೂರಿನಲ್ಲಿ ವಾಸಿಸುವ ಬಗ್ಗೆಯಾಗಲಿ ಅಥವಾ ಬಿಸಿನೆಸ್‌ ಮಾಡುವ ಬಗ್ಗೆಯಾಗಲಿ ದಾಖಲೆಗಳನ್ನು ಸಲ್ಲಿಸದಿರುವುದು ಬಯಲಾಯಿತು.

ಈ ಖಾತೆಗಳ ಬಗ್ಗೆ ಮತ್ತಷ್ಟು ಮಾಹಿತಿ ಕೆದಕಿದಾಗ ಇದೇ ರೀತಿ ಆ ಬ್ಯಾಂಕ್‌ನಲ್ಲಿ ಇನ್ನೂ 4 ಖಾತೆಗಳು ತೆರೆದಿರುವುದು ಪತ್ತೆಯಾಯಿತು. ಈ 6 ಖಾತೆಗಳಿಗೆ ಒಟ್ಟು 97 ಕೋಟಿ ರು. ವಹಿವಾಟು ನಡೆದಿರುವ ಸಂಗತಿ ತಿಳಿಯಿತು. ಆಗ ಈ ಸೈಬರ್ ವಂಚನೆ ಜಾಲದಲ್ಲಿ ಆ ಬ್ಯಾಂಕ್‌ನ ವ್ಯವಸ್ಥಾಪಕ ಕಿಶೋರ್ ಸೇರಿ ನಾಲ್ವರು ಪಾಲ್ಗೊಂಡಿರುವುದು ಖಚಿತವಾಗಿ ಬಂಧಿಸಲಾಯಿತು. ಈ ಬ್ಯಾಂಕ್ ಸಿಬ್ಬಂದಿ ಮಾಹಿತಿ ಮೇರೆಗೆ ವಂಚನೆ ಕೃತ್ಯಕ್ಕೆ ನಕಲಿ ಖಾತೆ ತೆರೆದಿದ್ದ ಚಿಕ್ಕಮಗಳೂರು ಜಿಲ್ಲೆಯ ಮಾಲಾ ಸೇರಿ ನಾಲ್ವರನ್ನು ಬಂಧಿಸಲಾಯಿತು.

30000 ಕಮಿಷನ್ ಆಸೆ ತೋರಿಸಿ ಖಾತೆಗಳು ಸೃಷ್ಟಿ:  ಚಿಕ್ಕಮಗಳೂರಿನವರಿಗೆ ಖಾತೆಗೆ 25 ರಿಂದ 30000 ರು. ಕಮಿಷನ್ ಆಸೆ ತೋರಿಸಿ ಬ್ಯಾಂಕ್‌ನಲ್ಲಿ ಖಾತೆಯನ್ನು ಸೈಬರ್ ವಂಚನೆ ಜಾಲದ ಸದಸ್ಯರು ತೆರೆಸಿದ್ದರು. ಅಲ್ಲದೆ ಖಾತೆಯಲ್ಲಿ ಹೆಚ್ಚು ಹಣದ ವಹಿವಾಟು ಮಾಡಿದರೆ ಅದಕ್ಕನುಗುಣವಾಗಿ ಖಾತೆದಾರರಿಗೆ ಮತ್ತಷ್ಟು ಕಮಿಷನ್‌ ಸಿಗಲಿದೆ ಎಂದು ಅಮಿಷವೊಡ್ಡಿದ್ದರು.

ಬ್ಯಾಂಕ್ ಅಧಿಕಾರಿಗಳಿಗೆ ಹಣದಾಸೆ: ವಂಚನೆ ಕೃತ್ಯದ ಹಣ ವಹಿವಾಟಿಗೆ ಖಾತೆ ತೆರೆಯಲು ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ಕಿಶೋರ್ ಸಾಹು ಹಾಗೂ ಸೇಲ್ಸ್ ಮ್ಯಾನೇಜರ್‌ ಮನೋಹರ್‌, ಸೇಲ್ಸ್ ಎಕ್ಸ್‌ಕ್ಯುಟಿವ್‌ಗಳಾದ ಕಾರ್ತಿಕ್ ಹಾಗೂ ರಾಕೇಶ್‌ ಅವರಿಗೆ ಸೈಬರ್ ವಂಚನೆ ಜಾಲದ ಸದಸ್ಯರು ಹಣದಾಸೆ ತೋರಿಸಿ ಸಹಕಾರ ಪಡೆದಿದ್ದರು. ಈ ಬ್ಯಾಂಕ್ ಅಧಿಕಾರಿಗಳಿಗೆ ಒಂದು ಖಾತೆ ತೆರೆಯಲು 40 ರಿಂದ 50 ಸಾವಿರ ರು. ಹಣ ಕೊಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಖಾತೆದಾರರ ಪೂರ್ವಾಪರ ಪರಿಶೀಲಿಸದೆ ಖಾತೆಗಳನ್ನು ತೆರೆದಿದ್ದರು. ಚಿಕ್ಕಮಗಳೂರಿನಲ್ಲಿ ಆಕ್ಸಿಸ್ ಬ್ಯಾಂಕ್‌ ಶಾಖೆ ಇದ್ದರು ಆ ಜಿಲ್ಲೆಯವರು ನಾಗರಬಾವಿಯಲ್ಲಿ ಖಾತೆ ತೆರೆಯಲು ಕಾರಣ ಹುಡುಕಿದಾಗ ಇಡೀ ವಂಚನೆ ಜಾಲ ಬಯಲಾಯಿತು.

ದುಬೈನಲ್ಲಿ ಮಾಸ್ಟರ್ ಮೈಂಡ್?: ಈ ಸೈಬರ್ ವಂಚನೆ ಜಾಲದ ಮಾಸ್ಟರ್ ಮೈಂಡ್ ಬೆಂಗಳೂರು ಮೂಲದವನಾಗಿದ್ದು, ದುಬೈನಲ್ಲಿ ಆತ ನೆಲೆಸಿದ್ದಾನೆ. ಈತನ ಪತ್ತೆಗೆ ಕೇಂದ್ರ ತನಿಖಾ ಸಂಸ್ತೆಗಳ ಸಹಕಾರ ಪಡೆದು ಬಂಧಿಸಲು ತನಿಖೆ ನಡೆಸಲಾಗುತ್ತಿದೆ.

254 ವಂಚನೆ ಪ್ರಕರಣಗಳು ಬೆಳಕಿಗೆ: ಚಿಕ್ಕಮಗಳೂರಿನ ಗ್ಯಾಂಗ್‌ನ 6 ಖಾತೆಗಳನ್ನು ಎನ್‌ಸಿಆರ್‌ಪಿ-1930 ಪೋರ್ಟಲ್‌ನಲ್ಲಿ ಪರಿಶೀಲಿಸಿದಾಗ ದೇಶಾದ್ಯಂತ ಒಟ್ಟು 254 ಪ್ರಕರಣಗಳು ದಾಖಲಾಗಿರುವುದು ಗೊತ್ತಾಯಿತು. ಈ ಖಾತೆಗಳಲ್ಲಿ 97 ಕೋಟಿ ರು. ವಹಿವಾಟು ನಡೆದಿದೆ.