ಜಪ್ತಿ ವಸ್ತುಗಳನ್ನು ಮಾಲೀಕರಿಗೆ ನೀಡಲು ವಿಚಾರಣಾ ನ್ಯಾಯಾಲಯ ಮತ್ತು ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿ

| Published : Oct 16 2024, 01:31 AM IST / Updated: Oct 16 2024, 04:45 AM IST

ಜಪ್ತಿ ವಸ್ತುಗಳನ್ನು ಮಾಲೀಕರಿಗೆ ನೀಡಲು ವಿಚಾರಣಾ ನ್ಯಾಯಾಲಯ ಮತ್ತು ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿ
Share this Article
  • FB
  • TW
  • Linkdin
  • Email

ಸಾರಾಂಶ

ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಸ್ತುಗಳನ್ನು ಅವುಗಳ ಮೂಲ ಮಾಲೀಕರಿಗೆ ಬಿಡುಗಡೆ ಮಾಡುವ ವಿಚಾರಣಾ ನ್ಯಾಯಾಲಯ ಮತ್ತು ಪೊಲೀಸರು ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ಹೈಕೋರ್ಟ್‌ ರೂಪಿಸಿದೆ.

 ಬೆಂಗಳೂರು ": ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಸ್ತುಗಳನ್ನು ಅವುಗಳ ಮೂಲ ಮಾಲೀಕರಿಗೆ ಬಿಡುಗಡೆ ಮಾಡುವ ವಿಚಾರಣಾ ನ್ಯಾಯಾಲಯ ಮತ್ತು ಪೊಲೀಸರು ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ಹೈಕೋರ್ಟ್‌ ರೂಪಿಸಿದೆ.

ತನಿಖಾಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳನ್ನು ನ್ಯಾಯಾಲಯ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಪ್ರತಿಯೊಂದು ವಸ್ತು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಈ ಎಲ್ಲ ವಸ್ತುಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ವೈಯಕ್ತಿಕವಾಗಿ ಪರಿಶೀಲಿಸಬೇಕು ಎಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ರೂಪಿಸಿ ಹೈಕೋರ್ಟ್‌ ಆದೇಶಿಸಿದೆ.

ತಮ್ಮ ಒಡೆತನದ ಮಳಿಗೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣವನ್ನು ಬಿಡುಗಡೆ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಶಾಲ್ ಖಟ್ವಾನಿ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ, ಈ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಲ್ಲದೆ, ಅಪರಾಧ ಪ್ರಕರಣದಲ್ಲಿ ಜಪ್ತಿ ಮಾಡಿದ ವಿದ್ಯುನ್ಮಾನ ಉಪಕರಣಗಳು, ಡಿಜಿಟಲ್ ಸಾಧನಗಳು, ವೈದ್ಯಕೀಯ ಮಾದರಿಗಳು, ಆಹಾರ ಪದಾರ್ಥಗಳು, ಪೆಟ್ರೋಲಿಯಂ ಉತ್ಪನ್ನಗಳು, ಶೀಘ್ರದಲ್ಲಿ ಹಾಳಾಗುವಂತಹ ವಸ್ತುಗಳು, ಚಿನ್ನ ಮತ್ತು ಬೆಳ್ಳಿಯಂತಹ ಬೆಲೆ ಬಾಳುವಂತಹ ವಸ್ತುಗಳನ್ನು ಅವುಗಳ ಮಾಲೀಕರ ಸುಪರ್ದಿಗೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ನಿಯಮ ರೂಪಿಸಬೇಕು. ಅಲ್ಲಿಯವರೆಗೂ ಈ ಮಾರ್ಗಸೂಚಿಗಳು ಅನ್ವಯವಾಗಲಿವೆ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಹಾಗೆಯೇ, ಪ್ರಕರಣದಲ್ಲಿ ಅರ್ಜಿದಾರರಿಂದ 40 ಲಕ್ಷ ರು. ಮೊತ್ತಕ್ಕೆ ಬಾಂಡ್ ಪಡೆದು ಅವರಿಗೆ ಸೇರಿದ ಎನ್ನಲಾದ ಎಲ್ಲ ವಸ್ತುಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಸೂಚಿಸಿದೆ.

ಮಾರ್ಗಸೂಚಿಗಳು: ಜಪ್ತಿಯಾದ ವಸ್ತುಗಳು ನ್ಯಾಯಾಲಯ ಬಿಡುಗಡೆಗೆ ಸೂಚನೆ ನೀಡಿದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಪ್ರತಿಯೊಂದು ವಸ್ತು ಇರುವುದನ್ನು ತನಿಖಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಮಹಜರ್ ಮಾಡಿ ವಶಪಡಿಸಿಕೊಂಡಿರುವ ಎಲ್ಲ ವಸ್ತುಗಳು ಬಿಡುಗಡೆ ವೇಳೆ ಹೊಂದಾಣಿಕೆಯಾಗಬೇಕು. ಮಹಜರ್ ಸಂದರ್ಭದಲ್ಲಿ ದಾಖಲೆಗಳಲ್ಲಿ ಕ್ರಮ ಸಂಖ್ಯೆ ನೀಡಬೇಕು. ಆ ವಸ್ತುಗಳ ತಯಾರಿಕೆ ಮಾಡಿದವರ ಹೆಸರು ಅವುಗಳ ವಿಶಿಷ್ಟ ಗುರುತುಗಳು, ವಿಶಿಷ್ಟ ಸಂಖ್ಯೆ ಸೇರಿಸಬೇಕು. ವಿಚಾರಣೆ ಸಂದರ್ಭದಲ್ಲಿ ಎಲ್ಲ ವಸ್ತುಗಳನ್ನು ಸ್ಪಷ್ಟವಾಗಿ ಗುರುತಿಸಬೇಕು.

ಮಹಜರ್‌ನಲ್ಲಿ ವಶಪಡಿಸಿಕೊಂಡ ಆಸ್ತಿಯ ಅಂದಾಜು ಮೌಲ್ಯ(ನೊಂದಾಯಿತ ಮೌಲ್ಯಮಾಪಕರಿಂದ ಪಡೆದ ಮೌಲ್ಯಮಾಪನದ ಅಂದಾಜು) ಉಲ್ಲೇಖಿಸಬೇಕು. ಈ ಅಂಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಿಳಿಸಬೇಕು. ಎಲ್ಲ ವಸ್ತುಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ವೈಯಕ್ತಿಕವಾಗಿ ಪರಿಶೀಲಿಸಿ ಅದರ ಅಂದಾಜು ಮೊತ್ತ ಹೊಲಿಕೆಯಾಗುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ವಶಪಡಿಸಿಕೊಳ್ಳುವ ಮತ್ತು ಬಿಡುಗಡೆ ಸಂದರ್ಭದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಂಡು ಮಾಲೀಕರ ಸಹಿಯನ್ನು ಪಡೆದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ವಶಪಡಿಸಿಕೊಂಡ ವಸ್ತುಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಬೇಕು. ಅದರ ಮೌಲ್ಯಕ್ಕೆ ಸಂಬಂಧಿಸಿದಂತೆ ಬಾಂಡ್/ ಬ್ಯಾಂಕ್ ಗ್ಯಾರಂಟಿಗಳನ್ನು ಪಡೆದುಕೊಳ್ಳಬೇಕು. ತನಿಖಾಧಿಕಾರಿಗಳು ಸೂಕ್ತ ಕಾರಣ ನೀಡದೆ ವಶಪಡಿಸಿಕೊಂಡ ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಳಿಸಿಕೊಳ್ಳಬಾರದು ಎಂಬುದು ಸೇರಿದಂತೆ ಇನ್ನಿತರ ಮಾರ್ಗಸೂಚಿಗಳನ್ನು ಹೈಕೋರ್ಟ್‌ ರೂಪಿಸಿದೆ.