ಚಿತ್ರದಲ್ಲಿ ದರ್ಶನ್ ಕ್ಯಾರೆಕ್ಟರ್ ಹೆಸರೇ ಡೆವಿಲ್: ಮಿಲನ ಪ್ರಕಾಶ್‌

| N/A | Published : Aug 01 2025, 12:04 PM IST

Milana Prakash
ಚಿತ್ರದಲ್ಲಿ ದರ್ಶನ್ ಕ್ಯಾರೆಕ್ಟರ್ ಹೆಸರೇ ಡೆವಿಲ್: ಮಿಲನ ಪ್ರಕಾಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಚಿತ್ರರಂಗದ ಬಹು ನಿರೀಕ್ಷೆಯ ದರ್ಶನ್‌ ನಟನೆಯ ‘ದಿ ಡೆವಿಲ್’ ಚಿತ್ರದ ಶೂಟಿಂಗ್‌ ಮುಗಿದ್ದು, ಈ ಚಿತ್ರದ ಕುರಿತು ಮೊದಲ ಬಾರಿಗೆ ನಿರ್ದೇಶಕ ಮಿಲನ ಪ್ರಕಾಶ್ ಮಾತನಾಡಿದ್ದಾರೆ.

ಆರ್‌. ಕೇಶವಮೂರ್ತಿ

‘ದಿ ಡೆವಿಲ್’ ಸಿನಿಮಾ ಈಗ ಯಾವ ಹಂತದಲ್ಲಿದೆ, ಏನೇನು ಕೆಲಸಗಳು ಆಗಿವೆ?

ಈಗ ಸಿಜಿ ವರ್ಕ್‌ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಈ ಕೆಲಸ ಮಾಡುತ್ತಿದ್ದೇವೆ. ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ, ಡಬ್ಬಿಂಗ್‌ ಕೂಡ ಮುಕ್ತಾಯ ಆಗಿದೆ.

ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆಯೇ?

ಅಕ್ಟೋಬರ್‌ ತಿಂಗಳಲ್ಲಿ ಬರುತ್ತೇವೆ ಅಂತ ನಾವು ಅಧಿಕೃಕತವಾಗಿ ಎಲ್ಲೂ ಹೇಳಿಲ್ಲ. ಇನ್ನೂ ಎರಡು ಅಥವಾ ಮೂರು ವಾರದಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದ್ದೇವೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದ ಮೇಲೆ ಡೇಟ್‌ ಅನೌನ್ಸ್‌ ಮಾಡುತ್ತೇವೆ.

ಸಿನಿಮಾ ಹೇಗೆ ಬಂದಿದೆ, ಶೂಟಿಂಗ್‌ ಜರ್ನಿ ಹೇಗಿತ್ತು?

ನಿರ್ದೇಶಕ, ನಿರ್ಮಾಪಕನಾಗಿ ನನಗೆ ತುಂಬಾ ತೃಪ್ತಿ ಕೊಡುವಂತೆ ಸಿನಿಮಾ ಬಂದಿದೆ. ಅದರಲ್ಲಿ ಎರಡು ಮಾತಿಲ್ಲ. ಇದೇ ಖುಷಿಯನ್ನು ಸಿನಿಮಾ ನೋಡುವವರಿಗೂ ಕೊಡಲಿದೆ. ಪ್ಲಾನ್‌ ಪ್ರಕಾರ ನಾವು ಅಂದುಕೊಂಡ ದಿನಗಳಲ್ಲಿ ಶೂಟಿಂಗ್‌ ಮುಗಿಸಿದ್ದೇವೆ. ನಮ್ಮ ಚಿತ್ರದ ನಾಯಕ ದರ್ಶನ್‌ ಅವರು ತುಂಬಾ ಸ್ಟ್ರಾಂಗ್‌ ಆಗಿ ಸಪೋರ್ಟ್‌ ಮಾಡಿದ್ದರು. ಯಾವುದೇ ಸಮಸ್ಯೆಗಳು ಆಗದಂತೆ ಚಿತ್ರೀಕರಣ ಮುಗಿಸಿಕೊಂಡಿದ್ದೇವೆ.

‘ದಿ ಡೆವಿಲ್‌’ ಚಿತ್ರದ ಬಗ್ಗೆ ಒಂದು ಸಾಲಿನಲ್ಲಿ ಹೇಳುವುದಾದರೆ?

ಇದು ಪಕ್ಕಾ ಮಾಸ್‌ ಹಾಗೂ ಎಂಟರ್‌ಟೇನ್‌ಮೆಂಟ್‌ ಸಿನಿಮಾ. ಎಲ್ಲಾ ವರ್ಗದ ಪ್ರೇಕ್ಷಕರಿಗೆ ತಲುಪುವ ಕತೆ ಈ ಚಿತ್ರದಲ್ಲಿದೆ. ಚಿತ್ರದಲ್ಲಿ ನಾಯಕ ದರ್ಶನ್‌ ಅವರ ಹೆಸರೇ ಡೆವಿಲ್‌.

‘ದಿ ಡೆವಿಲ್‌’ ನಿಮಗೆ ಹೊಸ ಜಾನರ್‌ ಅಲ್ವಾ?

ನನ್ನ ಹಿಂದಿನ ಚಿತ್ರಗಳಿಗೂ ಇದಕ್ಕೂ ಸಂಬಂಧವಿಲ್ಲ. ಹಾಗಂತ ನಾನು ಆ್ಯಕ್ಷನ್‌ ಸಿನಿಮಾ ಮಾಡಿಲ್ಲ ಅಂತಲ್ಲ. ಮಾಡಿದ್ದೇನೆ. ಆದರೆ, ‘ದಿ ಡೆವಿಲ್‌’ ಬೇರೆ ರೀತಿಯ ಜಾನರ್‌ ಸಿನಿಮಾ. ಸ್ಕ್ರಿಪ್ಟ್‌ ಬರೆಯುವಾಗಲೇ ಇದು ನನಗೆ ಬೇರೆ ರೀತಿಯ ಸಿನಿಮಾ ಅನಿಸಿತು.

ಚಿತ್ರದ ಕತೆ ಮೂರು ಇಂಗ್ಲಿಷ್‌ ಕಾದಂಬರಿಗಳ ಸ್ಪೂರ್ತಿಯಿಂದ ಹುಟ್ಟಿಕೊಂಡಿದೆ ಅನ್ನೋ ಸುದ್ದಿ ಇದಿಯಲ್ಲ?

ಖಂಡಿತಾ ಇಲ್ಲ. ಇದು ಪಕ್ಕಾ ಸ್ವಮೇಕ್‌ ಕತೆ. ಸ್ಕ್ರೀನ್‌ ಪ್ಲೇ ಹಾಗೂ ಕ್ಯಾರೆಕ್ಟರ್‌ಗಳ ಡಿಸೈನ್‌ ಅಪ್ರೋಚ್‌ ಹೊಸದಾಗಿದೆ.

ದರ್ಶನ್‌ ಜತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು? ಒತ್ತಡದಲ್ಲಿ ಸಿನಿಮಾ ಮಾಡಿದ್ದೀರಾ?

ದರ್ಶನ್‌ ಅವರು ನೂರಕ್ಕೆ ನೂರು ಭಾಗ ಡೈರೆಕ್ಟರ್‌ ಆ್ಯಕ್ಟರ್‌. ಸ್ಕ್ರಿಪ್ಟ್‌ಗೆ ಏನು ಬೇಕೋ ಅದನ್ನು ಕೊಡುತ್ತಾರೆ. ನಿರ್ದೇಶಕನಾಗಿ ಕಲಾವಿದರಿಂದ ನನ್ನ ಕತೆಗೆ ಏನು ಬೇಕೋ ಅದನ್ನು ತೆಗೆದುಕೊಂಡಿದ್ದೇನೆ. ಉಳಿದ ವಿಚಾರಗಳಿಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನೀವು ಕೇಳುವಂತಹ ಯಾವುದೇ ಒತ್ತಡಗಳನ್ನು ಹೊತ್ತುಕೊಂಡು ಸಿನಿಮಾ ಮಾಡಿಲ್ಲ. ಎಂದಿನಂತೆ ನನ್ನ ಪ್ಲಾನ್‌ ಪ್ರಕಾರ ಸಿನಿಮಾ ಮಾಡಿದ್ದೇನೆ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಗುರಿ.

‘ತಾರಕ್‌ ’ ದರ್ಶನ್‌ ಹಾಗೂ ‘ದಿ ಡೆವಿಲ್‌’ ದರ್ಶನ್‌... ಈ ಇಬ್ಬರಲ್ಲಿ ನಿಮಗೆ ಕಂಡ ವ್ಯತ್ಯಾಸಗಳೇನು?

ಇಬ್ಬರೂ ಒಬ್ಬರೇ. ಅದೇ ದರ್ಶನ್‌. ನನಗೆ ಬೇರೆ ರೀತಿಯ ವ್ಯತ್ಯಾಸ ಕಂಡಿಲ್ಲ. ನನಗೆ ಅದೇ ಡಾರ್ಲಿಂಗ್‌ ದರ್ಶನ್‌. ಅವರ ಜತೆಗೆ ಕೆಲಸ ಮಾಡುವುದಕ್ಕೆ ತುಂಬಾ ಖುಷಿ. ತುಂಬಾ ಗಟ್ಟಿಯಾಗಿ ನನ್ನ ಮತ್ತು ಚಿತ್ರದ ಜೊತೆಗೆ ನಿಂತುಕೊಂಡರು. ಹೀಗಾಗಿ ‘ತಾರಕ್‌’ ಚಿತ್ರದಲ್ಲಿ ಕಂಡ ಅದೇ ದರ್ಶನ್‌ ಕಂಡರು. ಪ್ರೀತಿ, ಸಿನಿಮಾ ಮೇಲಿನ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ.

Read more Articles on