‘ನನಗೆ ದೆವ್ವದ ಬಗ್ಗೆ ನಂಬಿಕೆ ಇಲ್ಲ. ನನಗೆ ಜೀವನ ಕೊಟ್ಟ ಚಿತ್ರರಂಗಕ್ಕೆ ನನ್ನಿಂದಾದಷ್ಟು ಸೇವೆ ಸಲ್ಲಿಸಬೇಕು ಎಂಬುದಿತ್ತು. ಹೀಗಾಗಿ ಗೋಷ್ಟ್‌ ದಿ ದೆವ್ವ ಕಿರುಚಿತ್ರ ನಿರ್ಮಾಣಕ್ಕೆ ಮುಂದಾದೆ’

ಸಿನಿವಾರ್ತೆ : ‘ನನಗೆ ದೆವ್ವದ ಬಗ್ಗೆ ನಂಬಿಕೆ ಇಲ್ಲ. ನನಗೆ ಜೀವನ ಕೊಟ್ಟ ಚಿತ್ರರಂಗಕ್ಕೆ ನನ್ನಿಂದಾದಷ್ಟು ಸೇವೆ ಸಲ್ಲಿಸಬೇಕು ಎಂಬುದಿತ್ತು. ಹೀಗಾಗಿ ಗೋಷ್ಟ್‌ ದಿ ದೆವ್ವ ಕಿರುಚಿತ್ರ ನಿರ್ಮಾಣಕ್ಕೆ ಮುಂದಾದೆ’ ಎಂದು ನಟಿ ಸುಧಾರಾಣಿ ಹೇಳಿದ್ದಾರೆ.

‘ಘೋಷ್ಟ್ ದಿ ದೆವ್ವ’ ಎಂಬ ಥ್ರಿಲ್ಲರ್‌ ಶಾರ್ಟ್‌ ಮೂವಿಯನ್ನು ಅನ್ನು ಸುಧಾರಾಣಿ ನಿರ್ಮಿಸಿದ್ದಾರೆ. ಮುಖ್ಯಪಾತ್ರದಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಅನಾವರಣವಾಯ್ತು.

ಈ ವೇಳೆ ಮಾತನಾಡಿದ ಸುಧಾರಾಣಿ, ‘ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಿರ್ದೇಶಕರೇ ಈ ಕಿರುಚಿತ್ರ ನಿರ್ದೇಶಿಸಿದ್ದಾರೆ. ಒಮ್ಮೆ ಸೆಟ್‌ನಲ್ಲಿದ್ದಾಗ ಅವರು ಈ ಕಿರುಚಿತ್ರದ ಕಥೆ ಹೇಳಿದ್ದರು. ನನಗೆ ಬಹಳ ಇಷ್ಟವಾಗಿ ಬಂಡವಾಳ ಹೂಡಲು ಮುಂದಾದೆ. ಇದರಲ್ಲಿ ಮೂಢನಂಬಿಕೆ ವಿರುದ್ಧದ ಸಂದೇಶವೂ ಇದೆ. ಸಿನಿಮಾ ಆಗಲಿ, ಕಿರುಚಿತ್ರವಾಗಲಿ ಅದರಲ್ಲಿ ಒಂದು ಎಮೋಶನ್‌ ಅನ್ನು ಟ್ರಿಗರ್‌ ಮಾಡುವ ಅಂಶಗಳಿರಬೇಕು. ನಮ್ಮ ಈ ಕಿರುಚಿತ್ರ ಭಯವನ್ನು ಉದ್ದೀಪಿಸುತ್ತದೆ’ ಎಂದಿದ್ದಾರೆ.

ನಿರ್ದೇಶಕ ಸುದೇಶ್‌ ಕೆ ರಾವ್‌ ಮಾತನಾಡಿ, ‘ನನ್ನ ಪ್ರಕಾರ ಈ ಪ್ರಕೃತಿಯಲ್ಲಿ ನೆಗೆಟಿವಿಟಿ ಅನ್ನೋದೆ ಇಲ್ಲ. ಅದಿರುವುದು ಮನುಷ್ಯನ ಮನಸ್ಸಿನಲ್ಲಿ ಮಾತ್ರ. ನಾವೇ ನಿರ್ಮಿಸಿಕೊಂಡ ಇಮೇಜ್ ಪ್ರಕಾರ ದೇವರನ್ನು ಪಾಸಿಟಿವ್ ಅಂತಲೂ ದೆವ್ವವನ್ನು ನೆಗೆಟಿವ್‌ ಅಂತಲೂ ನೋಡುತ್ತೇವೆ. ಈ ಪ್ರಕಾರ ನೆಗೆಟಿವ್ ಆಗಿರುವ ದೆವ್ವ ಅನ್ನೋದೆಲ್ಲ ಇಲ್ಲ ಅನ್ನೋದನ್ನು ಈ ಕಿರುಚಿತ್ರದಲ್ಲಿ ಹೇಳಹೊರಟಿದ್ದೇವೆ’ ಎಂದರು.

ಈ ಕಿರುಚಿತ್ರದಲ್ಲಿ ಎರಡೇ ಪಾತ್ರಗಳಿದ್ದು, ಒಂದನ್ನು ಸುಧಾರಾಣಿ ನಿರ್ವಹಿಸಿದರೆ ಇನ್ನೊಂದರಲ್ಲಿ ನಿರ್ದೇಶಕ ಸುದೇಶ್ ನಟಿಸಿದ್ದಾರೆ.

ಕಮಲ್‌ ವಿವಾದದ ಬಗ್ಗೆ ತಿಳಿದಿಲ್ಲ: ಸುಧಾರಾಣಿ

‘ನಮ್ಮ ಕನ್ನಡ ಭಾಷೆ, ಕರ್ನಾಟಕದ ಬಗ್ಗೆ ಯಾರೇ ತಪ್ಪಾಗಿ ಮಾತನಾಡಿದರೂ ಅದನ್ನು ಒಪ್ಪಲಾಗದು. ನಾವೆಲ್ಲ ಭಾಷೆಯ ಪರವಾಗಿ ನಿಲ್ಲಬೇಕು. ಆದರೆ ಸದ್ಯ ಎದ್ದಿರುವ ವಿವಾದದ ಬಗ್ಗೆ ನನಗೆ ಪೂರ್ತಿ ವಿವರ ಗೊತ್ತಿಲ್ಲ. ಗೊತ್ತಿಲ್ಲದೆ ಪ್ರತಿಕ್ರಿಯೆ ನೀಡಲಾಗದು. ಆದರೆ ಕನ್ನಡ ಭಾಷೆಯ ಪ್ರಾಚೀನತೆ ಕುರಿತ ಸರಿಯಾದ ಮಾಹಿತಿಯನ್ನು ಕಮಲ್‌ ಅವರಿಗೆ ನೀಡಿ ಈ ಬಗ್ಗೆ ತಿಳಿಹೇಳುವುದು ಉತ್ತಮ’ ಎಂದು ಸುಧಾರಾಣಿ ಹೇಳಿದ್ದಾರೆ.