ಜೋಗಿ

ಕೆ.ಎಂ. ಚೈತನ್ಯ ನಿರ್ದೇಶನದ, ಪದ್ಮಾವತಿ ಮತ್ತು ಶ್ರೇಯಸ್‌ ಜಯರಾಮ್‌ ನಿರ್ಮಾಣದ, ವಿನೋದ್‌ ಪ್ರಭಾಕರ್‌ ನಾಯಕನಾಗಿ ನಟಿಸಿರುವ ‘ಬಲರಾಮನ ದಿನಗಳು’ ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ತಮ್ಮ ಬಹುನಿರೀಕ್ಷೆಯ ಸಿನಿಮಾ ಕುರಿತು ವಿನೋದ್ ಪ್ರಭಾಕರ್‌ ಜೊತೆ ಮಾತುಕತೆ.

ಬಲರಾಮನ ದಿನಗಳು ಚಿತ್ರದ ಪಾತ್ರ ಎಷ್ಟು ಎಕ್ಸೈಟಿಂಗ್ ಆಗಿದೆ?

ಪ್ರತೀ ಸಿನಿಮಾನೂ ನನಗೆ ಎಕ್ಸೈಟಿಂಗ್ ಅನ್ನಿಸುತ್ತದೆ. ನಾನು ಒಮ್ಮೆಗೆ ಒಂದು ಚಿತ್ರ ಮಾತ್ರ ಒಪ್ಪಿಕೊಳ್ಳುತ್ತೇನೆ. ಆ ಪಾತ್ರಕ್ಕೆ ತಕ್ಕಂತೆ ಸಿದ್ಧನಾಗುತ್ತೇನೆ. ಒಂದಿಷ್ಟು ದಿನ ಆ ಪಾತ್ರವೇ ಆಗಿ ಜೀವಿಸುತ್ತೇನೆ. ‘ಮಾದೇವ’ ಚಿತ್ರದಲ್ಲಿ ಕೂಡ ಪರಕಾಯ ಪ್ರವೇಶ ಮಾಡಿ ನಟಿಸಿದ್ದಕ್ಕೆ ತುಂಬಾ ಅದ್ಭುತವಾಗಿ ಮೂಡಿಬಂದಿತ್ತು. ಈ ಸಲ ಕೂಡ ಬಲರಾಮ ಪಾತ್ರದಲ್ಲಿ ಜೀವಿಸಿದ್ದೇನೆ. ಇಷ್ಟಾದರೂ ಪ್ರತೀ ಸಿನಿಮಾ ಬರುವಾಗಲೂ ನನಗೆ ಭಯ ಇರುತ್ತದೆ. ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಇರುತ್ತದೆ. ಈಗಾಗಲೇ ಸಿನಿಮಾ ನೋಡಿದವರು ಈ ಸಿನಿಮಾದಲ್ಲಿ ವಿನೋದ್‌ ಪ್ರಭಾಕರ್‌ ಕಾಣಿಸಿಲ್ಲ, ಬಲರಾಮನೇ ಕಾಣಿಸಿಕೊಳ್ಳುತ್ತಾನೆ ಅಂತ ಹೇಳಿದ್ದಾರೆ. ಹಾಗಾಗಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇನೆ.

ಮಾದೇವ ಬಳಿಕ ಬರುತ್ತಿರುವ ಸಿನಿಮಾ ಇದು, ಈ ಸಿನಿಮಾ ಎಷ್ಟು ಭಿನ್ನ?


‘ಮಾದೇವ ಗೆದ್ದಿದ್ದರಿಂದ’ ಮತ್ತು ಅದರಿಂದ ತುಂಬಾ ಫ್ಯಾಮಿಲಿ ಆಡಿಯೆನ್ಸ್ ನನಗೆ ಕನೆಕ್ಟ್ ಆಗಿದ್ದಾರೆ. 2025ರಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಮೊದಲ ಸಿನಿಮಾ ಅದು. ಅಲ್ಲಿಂದ ನನಗೆ ಜವಾಬ್ದಾರಿ ಹೆಚ್ಚಾಗಿದೆ. ಆ ಪ್ರೇಕ್ಷಕರನ್ನು ಬಲರಾಮನ ದಿನಗಳಿಗೂ ಕರೆತರಬೇಕು ಎಂಬ ಜವಾಬ್ದಾರಿ ಇತ್ತು. ಹಾಗಾಗಿ ಇದೊಂದು ಆ್ಯಕ್ಷನ್‌ ಚಿತ್ರ ಆಗಿದ್ದರೂ ಅಂಡರ್‌ವರ್ಲ್ಡ್‌ ಕತೆಯಾಧರಿತ ಸಿನಿಮಾ ಆಗಿದ್ದರೂ ಎಲ್ಲೂ ರಕ್ತಪಾತವಿಲ್ಲ. ಕೆಟ್ಟ ಪದಬಳಕೆ ಇಲ್ಲ. ಅಶ್ಲೀಲತೆ ಇಲ್ಲ. ಅಂಡರ್‌ವರ್ಲ್ಡ್‌ ಕತೆಯನ್ನು ಸೂಕ್ಷ್ಮವಾಗಿ, ಜವಾಬ್ದಾರಿಯುತವಾಗಿ ನಿರ್ದೇಶಕ ಕೆ.ಎಂ. ಚೈತನ್ಯ ನಿಭಾಯಿಸಿದ್ದಾರೆ. ಇದೊಂದು ಕಲ್ಟ್‌ ಕ್ಲಾಸಿಕ್‌ ಸಿನಿಮಾ ಆಗುವ ಭರವಸೆ ಇದೆ.

ಈ ಸಿನಿಮಾ ರೂಪುಗೊಂಡ ಬಗೆ ಹೇಗೆ?

ನನ್ನ ಕರಿಯರ್‌ನಲ್ಲೇ ಬಿಗ್ಗೆಸ್ಟ್‌ ಬಜೆಟ್‌ ಸಿನಿಮಾ ಇದು. ಹತ್ತಿರಹತ್ತಿರ 13ರಿಂದ 14 ಕೋಟಿ ರೂಪಾಯಿ ಖರ್ಚಾಗಿದೆ. ಅಂದಹಾಗೆ ಇದು ‘ಮಾದೇವ’ಗಿಂತ ಮೊದಲು ರೆಡಿಯಾಗಿದ್ದ ಸಿನಿಮಾ. ಆಗಲೇ ಅವರು ದೊಡ್ಡ ಬಜೆಟ್‌ನಲ್ಲಿ ಮಾಡುತ್ತೇನೆ ಅಂತ ಹೇಳಿದ್ದರು. ಆದರೆ ನಾನು ನಿರ್ಮಾಪಕರಿಗೆ ಏಳು ಕೋಟಿ ರೂಪಾಯಿ ದಾಟಬೇಡಿ, ಅಷ್ಟು ಮಾರ್ಕೆಟ್‌ ನನಗಿದೆ ಅಂತ ಹೇಳಿದ್ದೆ. ಆದರೆ ನಿರ್ಮಾಪಕರಾದ ಶ್ರೇಯಸ್‌ ಮತ್ತು ಪದ್ಮಾವತಿ ಅವರು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ ಅಂತ ಅದ್ದೂರಿಯಾಗಿ ಸಿನಿಮಾ ಮಾಡಿದ್ದಾರೆ. ನನ್ನ ಈ ಹಿಂದಿನ ‘ಮಾದೇವ’ ಸಿನಿಮಾ ಚೆನ್ನಾಗಿ ಆಗಿರುವುದರಿಂದ, ಆ ಸಿನಿಮಾ ಸುಮಾರು 10 ರಿಂದ 11 ಕೋಟಿ ಬಿಸಿನೆಸ್ ಆಗಿರುವುದರಿಂದ ಈ ಸಿನಿಮಾ ಕೂಡ ಶೇ.60ರಷ್ಟು ಸೇಫ್‌ ಆಗಿದೆ.

ಮಾದೇವಗಿಂತ ನಂತರ ಈ ಸಿನಿಮಾ ಬಂದಿದ್ದರೆ ಒಪ್ಪಿಕೊಳ್ಳುತ್ತಿದ್ರಾ?

ಖಂಡಿತಾ. ಇನ್ನೂ ಧೈರ್ಯ ಬರುತ್ತಿತ್ತು. ಈ ಸಿನಿಮಾ ಇನ್ನಷ್ಟು ಚೆನ್ನಾಗಿ ಮಾಡಬಹುದು ಎಂಬ ಭಾವ ಇರುತ್ತಿತ್ತು. ಅನುಭವದ ಮಾತು ಹೇಳುತ್ತಿದ್ದೆ. ನಾನು ‘ಮಾದೇವ’ ಚಿತ್ರವನ್ನು 200- 250 ಸಲ ನೋಡಿದ್ದೆ. ಅದರಲ್ಲಿ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡಿದ್ದೆ. ಪ್ರತೀ ಫ್ರೇಮ್‌ಗೂ ವರ್ಕ್‌ ಮಾಡಿದ್ದೆವು. ಆದರೆ ಈ ಚಿತ್ರವನ್ನು ನಾನು ಸಲವೂ ಪೂರ್ತಿಯಾಗಿ ನೋಡಿಲ್ಲ. 6 ತಿಂಗಳ ಹಿಂದೆ ಒಮ್ಮೆ ನೋಡಿದ್ದೆನಷ್ಟೇ. ನನಗೆ ನಿರ್ದೇಶಕ ಕೆ.ಎಂ. ಚೈತನ್ಯ ಅವರ ಮೇಲೆ ಅಷ್ಟು ನಂಬಿಕೆ. ಅಪಾರ ಗೌರವ.

ನಿಮ್ಮ ಕೆಲಸದ ರೀತಿ ಹೇಗಿರುತ್ತದೆ?

ಈ ಸಿನಿಮಾ ಅಂತಲ್ಲ, ನಾನು ಪ್ರತೀ ಸಿನಿಮಾಗೂ ಹಾರ್ಡ್ ವರ್ಕ್ ಮಾಡುತ್ತೇನೆ. ಹಗಲು, ರಾತ್ರಿ ಕೆಲಸ ಮಾಡುತ್ತೇನೆ. ಪ್ರತೀ ಡೈಲಾಗ್ ಓದುತ್ತೇನೆ. ರಂಗಭೂಮಿ ಕಲಾವಿದನ ಥರ ಬರುತ್ತೇನೆ. ಎದುರಿನವರು ಏನು ಮಾತನಾಡುತ್ತಾರೆ ಎಂದು ಓದಿ ತಿಳಿದು ಅರ್ಥ ಮಾಡಿಕೊಂಡು ತಯಾರಾಗಿ ಬರುತ್ತೇನೆ. ಜೊತೆಗೆ ಸೆಟ್‌ನಲ್ಲೂ ರಿಹರ್ಸಲ್ ಮಾಡುತ್ತೇವೆ. ಅಷ್ಟು ಶ್ರಮ ಹಾಕುತ್ತೇನೆ. ಯಾಕೆಂದರೆ ಸಿನಿಮಾ ನನ್ನ ಕುಟುಂಬ.

ಉದ್ಯಮದ ಕುರಿತು ಇಷ್ಟೆಲ್ಲಾ ತಿಳುವಳಿಕೆ ಹೇಗೆ ಬಂದಿತು?

ತಂದೆಯವರಿಂದ ಬಂದಿದ್ದು. ಅವರು ನಿರ್ಮಾಪಕರ ಪರವಾಗಿ ಕೆಲಸ ಮಾಡುತ್ತಿದ್ದರು. ಅವರು ಅಂತಲ್ಲ, ಆಕಾಲದ ಎಲ್ಲಾ ನಟರೂ ಹಾಗೇ ಇದ್ದರು. ಅಣ್ಣಾವ್ರು, ಶಂಕರ್‌ನಾಗ್‌, ವಿಷ್ಣುವರ್ಧನ್‌, ಅನಂತ್‌ನಾಗ್‌, ತೂಗುದೀಪ ಶ್ರೀನಿವಾಸ್‌, ಸುಧೀರ್, ಮುಸುರಿ, ಸುಂದರಕೃಷ್ಣ ಅರಸ್‌ ಎಲ್ಲರನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಆ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ. ಅವರೆಲ್ಲರೂ ಇಡೀ ತಂಡವನ್ನು ಕುಟುಂಬದಂತೆ ನೋಡಿಕೊಳ್ಳುತ್ತಿದ್ದರು. ನನಗೂ ನಾನು ಕೆಲಸ ಮಾಡುವ ಚಿತ್ರತಂಡದ ಪ್ರತಿಯೊಬ್ಬರ ಹೆಸರು ಗೊತ್ತಿರುತ್ತದೆ. ಸಿನಿಮಾ ಅನ್ನುವುದು ಫ್ಯಾಮಿಲಿ. ಪ್ರತಿಯೊಬ್ಬರೂ ಅದೇ ಭಾವನೆಯಿಂದ ಕೆಲಸ ಮಾಡಿದರೆ ಮಾತ್ರ ಒಳ್ಳೆಯ ಸಿನಿಮಾ ಆಗುವುದು. ಅಲ್ಲದೇ, ನನ್ನ ಕೆಲಸ ಏನು ಅನ್ನುವ ಅರಿವು ನನಗಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ನಿರ್ಮಾಪಕರು ಇವತ್ತು ಒಂದು ಸಿನಿಮಾದಿಂದ ಒಂದು ರೂಪಾಯಿ ಲಾಭ ವಾಪಸ್ ತೆಗೆದುಕೊಂಡು ಹೋದರೂ ಅವರು ಮತ್ತೆ ಸಿನಿಮಾ ಮಾಡುತ್ತಾರೆ. ಅದರಿಂದ ಸಿನಿಮಾ ರಂಗಕ್ಕೆ ಒಳ್ಳೆಯದಾಗುತ್ತದೆ.

ಮಾದೇವ ಚಿತ್ರದಿಂದ ಎಷ್ಟೋ ಮಂದಿ ಚಿತ್ರಮಂದಿರ ಮಾಲೀಕರು ಚಿತ್ರಮಂದಿರ ಮತ್ತೆ ತೆರೆಯುವಂತಾಯಿತು ಅಂತ ಹೇಳಿದ್ದಾರೆ. ಆ ಸಂತೋಷಕ್ಕಾಗಿ ನಾನು ದುಡಿಯುತ್ತೇನೆ.

ನಿಮ್ಮ ಪಾಲಿಗೆ ಸ್ಕ್ರಿಪ್ಟ್‌ ಏನು?

ಸ್ಕ್ರಿಪ್ಟ್‌ ನನಗೆ ಹೀರೋ. ನಟರಿಗೋಸ್ಕರ ಸ್ಕ್ರಿಪ್ಟ್‌ ಅಲ್ಲ, ಸ್ಕ್ರಿಪ್ಟ್‌ಗಾಗಿ ನಟರು. ಸ್ಕ್ರಿಪ್ಟ್‌ ಏನು ಬೇಡುತ್ತದೆಯೋ ಅದನ್ನು ನಾವು ಕೊಡಬೇಕು. ‘ಮಾದೇವ’ ಚಿತ್ರದ ಎಡಿಟಿಂಗ್‌ನಲ್ಲಿ ನಾನೇ ಕೂತಿದ್ದೆ. ಅದರ ಇಂಟರ್‌ವಲ್‌ನಲ್ಲಿ ಮಾದೇವ ಪಾತ್ರಕ್ಕೆ ಒಂದೂವರೆ ಪೇಜ್‌ ಡೈಲಾಗ್‌ ಇತ್ತು. ನಾನು ಅದನ್ನು ನೋಡಿ, ಮಾದೇವ ಪಾತ್ರ ಕಡಿಮೆ ಮಾಡಿದಷ್ಟೂ ಆ ಪಾತ್ರಕ್ಕೆ ಒಳ್ಳೆಯದು, ಹಾಗಾಗಿ ತೆಗೆಯಿರಿ ಎಂದು ನಿರ್ದೇಶಕರಿಗೆ ಹೇಳಿದ್ದೆ. ತಂದೆಯವರು ನನ್ನನ್ನು ಮೊದಲ ದಿನಗಳಲ್ಲೇ ಎಡಿಟಿಂಗ್ ನೋಡಲು ಕೂರಿಸಿದ್ದರು. ಹಾಗಾಗಿ ಎಡಿಟಿಂಗ್‌ ಮೇಲೆ ನನಗೆ ಪ್ರೀತಿ ಜಾಸ್ತಿ. ಬಲರಾಮನ ದಿನಗಳ ಚಿತ್ರದಲ್ಲಿಯೂ ಹಲವು ಫೈಟ್, ಸೀನ್ ಎಡಿಟ್ ಮಾಡಿಕೊಟ್ಟಿದ್ದೇನೆ. ಹಾಗಾಗಿಯೇ ಚೈತನ್ಯ ಸರ್ ಮೊನ್ನೆ ಸಂದರ್ಶನದಲ್ಲಿ, ವಿನೋದ್‌ ಪ್ರಭಾಕರ್‌ ಒಬ್ಬ ಡೈರೆಕ್ಟರ್‌ ಮೆಟೀರಿಯಲ್ ಅಂತ ಹೇಳಿದರು. ‘ವಿನೋದ್‌ ಅವರು ಅವರ ಪಾತ್ರ ಜಾಸ್ತಿ ಮಾಡಿ ಎಂದು ಕೇಳುವುದಿಲ್ಲ, ಆಕಡೆ ಪಾತ್ರ ಜಾಸ್ತಿ ಮಾಡಿ, ಈ ಡೈಲಾಗ್ ಅವರಿಗೆ ಕೊಡಿ ಸ್ಕ್ರಿಪ್ಟ್‌ಗೆ ಚೆನ್ನಾಗಿ ಆಗುತ್ತೆ ಅಂತ ಹೇಳುತ್ತಾರೆ. ಅಂಥಾ ಮನಸ್ಥಿತಿ ಇರುವುದು ಬಹಳ ಕಡಿಮೆ’ ಎಂದು ಹೇಳಿದ್ದಾರೆ. ಹೊಗಳಿದ್ದು ಅವರ ದೊಡ್ಡ ಗುಣ, ಆದರೆ ನನಗೆ ಆ ಥರ ವರ್ಕ್ ಮಾಡುವುದು ಇಷ್ಟ.

ನೀವು ನಿರ್ದೇಶಕರಾಗುವ ದಿನ ದೂರವಿಲ್ಲ ಅನ್ನಿಸುತ್ತದೆ..

ಸಿನಿಮಾ ಪ್ರೀತಿ ನನ್ನ ರಕ್ತದಲ್ಲಿಯೇ ಬಂದಿದೆ. ತಾಂತ್ರಿಕವಾಗಿ ಕೆಲಸ ಮಾಡುವುದು ನನಗಿಷ್ಟ. ತಂದೆಯವರ ಜೊತೆ ಬಹಳಷ್ಟು ಸಿನಿಮಾಗಳ ಎಡಿಟಿಂಗ್‌ ಕೆಲಸ ತಿಳಿದುಕೊಂಡಿದ್ದೇನೆ.

ಹೇಗಿದೆ ಪ್ರತಿಕ್ರಿಯೆ?

ಎಲ್ಲಾ ಕಡೆ ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಇನ್ನು ಜನ ಸಿನಿಮಾ ನೋಡಿ ನಿರ್ಧಾರ ಮಾಡಬೇಕು. ಈ ಸಲ ಇಂಡಸ್ಟ್ರಿ ಮಂದಿ ಬಹಳ ಸಪೋರ್ಟ್ ಮಾಡುತ್ತಿದ್ದಾರೆ. ಅವರವರ ಸೋಷಿಯಲ್ ಮೀಡಿಯಾಗಳಲ್ಲಿ ಸಿನಿಮಾ ಕುರಿತು ಹಂಚಿಕೊಂಡಿದ್ದಾರೆ. ಶುಭ ಹಾರೈಕೆ ಕಳುಹಿಸಿದ್ದಾರೆ. ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆಂಬ ಭರವಸೆ ಇದೆ.