ನಟ ವಿನೋದ್ ಪ್ರಭಾಕರ್ ಈಗ ಟೈಗರ್ ವಿನೋದ್ ಪ್ರಭಾಕರ್ ಆಗಿದ್ದಾರೆ. ಅಪ್ಪನ ಸಾಧನೆಯ ಬಿರುದು ಮಗನ ಮುಡುಗೇರಿದ ಸಂದರ್ಭದಲ್ಲೇ ಟೈಗರ್ ವಿನೋದ್ ನಟನೆಯ 25ನೇ ಚಿತ್ರದ ಶೀರ್ಷಿಕೆ ಕೂಡ ಬಿಡುಗಡೆ ಆಗಿದೆ.
- ವಿನೋದ್ ಪ್ರಭಾಕರ್‌ಗೆ ಟೈಗರ್ ಬಿರುದು ಕನ್ನಡಪ್ರಭ ಸಿನಿವಾರ್ತೆವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ ‘ಬಲರಾಮ’. ಈ ಚಿತ್ರದ ಶೀರ್ಷಿಕೆ ಬಿಡುಗಡೆ ಜೊತೆಗೆ ವಿನೋದ್ ಪ್ರಭಾಕರ್ ಅವರಿಗೆ ‘ಟೈಗರ್’ ಎನ್ನುವ ಬಿರುದು ಪ್ರದಾನ, ಪದ್ಮಾವತಿ ಫಿಲಂಸ್ ನಿರ್ಮಾಣ ಸಂಸ್ಥೆ ಆರಂಭ..ಇವಿಷ್ಟು ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ಚಿತ್ರತಂಡಕ್ಕೆ ಶುಭಕೋರಿದರು. ‘ಶ್ರೇಯಸ್ ತಮ್ಮ ತಾಯಿಯ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಶುರು ಮಾಡಿ, ಅದರ ಮೊದಲ ಹೆಜ್ಜೆಯಾಗಿ ಬಲರಾಮನ ದಿನಗಳು ಚಿತ್ರ ನಿರ್ಮಿಸುತ್ತಿದ್ದಾರೆ. ಈ ಮೂಲಕ ಶ್ರೇಯಸ್‍ಗೆ ಚಿತ್ರ ನಿರ್ಮಾಣದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಯಶಸ್ಸು ಸಿಗಲಿ’ ಎಂದು ಸಚಿವ ಪರಮೇಶ್ವರ್ ಹಾರೈಸಿದರು.ವಿನೋದ್ ಪ್ರಭಾಕರ್ ಮಾತನಾಡಿ, ‘ನನ್ನ ತಂದೆ ಸಾಧನೆಗೆ ದಕ್ಕಿರುವ ಟೈಗರ್ ಬಿರುದನ್ನು ಈಗ ನನಗೆ ನೀಡಿದ್ದಾರೆ. ಇದು ಜವಾಬ್ದಾರಿ ಹೆಚ್ಚಿಸಿದೆ. ಚೈತನ್ಯ ಅವರ ಆ ದಿನಗಳು ಚಿತ್ರ ನೋಡಿದಾಗಿನಿಂದ ನಾನು ಅವರ ಅಭಿಮಾನಿ. ಅವರ ಜತೆಗೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಅವರು ಸೃಷ್ಟಿಸಿರುವ ಬಲರಾಮನ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ’ ಎಂದು ಹೇಳಿದರು.ಕೆ ಎಂ ಚೈತನ್ಯ ಮಾತನಾಡಿ, ‘ಈ ಚಿತ್ರ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಶ್ರೇಯಸ್. ಭೂಗತಲೋಕದ ಬಗ್ಗೆ ಸಾಕಷ್ಟು ಕತೆಗಳನ್ನು ಮಾಡಿದ್ದೆ. ಅದರಲ್ಲಿ ಯಾವ ಕತೆ ಮಾಡಬೇಕು ಅಂತ ಹೇಳಿದ್ದು ಶ್ರೇಯಸ್. ಬಹಳ ವರ್ಷಗಳಿಂದ ವಿನೋದ್ ಪ್ರಭಾಕರ್ ಜತೆಗೆ ಚಿತ್ರ ಮಾಡುವ ಆಸೆ ಈಗ ಈಡೇರುತ್ತಿದೆ. ಇದು ಭೂಗತಲೋಕದ ಸಿನಿಮಾ. ಸಮಾಜ, ರಾಜಕೀಯ ಆಯಾಮಗಳು ಇರುತ್ತವೆ. ನಿಜ ಜೀವನದ ಕತೆ ಆಧರಿಸಿದ ಕಾಲ್ಪನಿಕ ಚಿತ್ರ’ ಎಂದರು.