ಸಾರಾಂಶ
ತೆಲುಗಿನಿಂದ ಡಬ್ಬಾಗಿರುವ ಮಿರಾಯ್ ಸಿನಿಮಾ ಹೇಗಿದೆ?
ಚಿತ್ರ : ಮಿರಾಯ್
ನಿರ್ದೇಶನ: ಕಾರ್ತಿಕ್ ಘಟ್ಟಮನೇನಿ
ತಾರಾಗಣ: ತೇಜ ಸಜ್ಜಾ, ಮಂಚು ಮನೋಜ್, ಶ್ರಿಯಾ ಶರಣ್, ಜಗಪತಿ ಬಾಬು, ಗೆಟಪ್ ಶ್ರೀನು, ರಿತಿಕಾ ನಾಯಕ್, ಜಯರಾಮ್ರೇಟಿಂಗ್ : 3.5ಆರ್.ಕೇಶವಮೂರ್ತಿ
ದುಷ್ಟ ಶಕ್ತಿಗಳ ವಿರುದ್ಧ ದೈವ ಶಕ್ತಿಗಳು ಗೆಲ್ಲುವ ಕತೆ ಎಂದು ‘ಮಿರಾಯ್’ ಚಿತ್ರದ ಕುರಿತು ಒಂದು ಸಾಲಿನಲ್ಲಿ ಕತೆ ಹೇಳಿದರೂ ಅದಕ್ಕೂ ಮೀರಿದ ವಿಚಾರಗಳು ಚಿತ್ರದಲ್ಲಿವೆ. ಕಳಿಂಗ ಯುದ್ಧ, ಯುದ್ಧದಿಂದ ಆದ ವಿದ್ವಾಂಸ, ಸಾಮ್ರಾಟ್ ಅಶೋಕನ ಪಶ್ಚತಾಪ, ದೈವ ಶಕ್ತಿಯನ್ನು ಒಳಗೊಂಡಿರುವ ಒಂಭತ್ತು ಗ್ರಂಥಗಳು, ದೇವರುಗಳೇ ಇಲ್ಲದಿರುವ ಪ್ರಪಂಚ ಸೃಷ್ಟಿಸುತ್ತೇನೆ ಎಂದು ಹೊರಟ ವ್ಯಕ್ತಿ, ಆತನ ವಿರುದ್ಧ ನಿಲ್ಲುವ ಅನಾಥ ಹುಡುಗ... ಇವಿಷ್ಟು ಅಂಶಗಳನ್ನು ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಅವರು ತುಂಬಾ ಚೆನ್ನಾಗಿ ಚಿತ್ರಕಥೆಯಾಗಿಸುವಲ್ಲಿ ಶ್ರಮಿಸಿದ್ದಾರೆ.ಎಲ್ಲೂ ಬೋರ್ ಆಗದಂತೆ, ಅತೀ ಎನಿಸದಂತೆ ಅದ್ಭುತವಾದ ದೃಶ್ಯಗಳು, ತಾಂತ್ರಿಕತೆ ನೈಪುಣ್ಯತೆಯಿಂದ ಕೂಡಿರುವ ‘ಮಿರಾಯ್’ ಚಿತ್ರದಲ್ಲಿ ನಾಯಕ ತೇಜ ಸಜ್ಜಾ, ಖಳನಾಯಕನಾಗಿ ಮಂಚು ಮನೋಜ್ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸೈನ್ಸು, ಇತಿಹಾಸ ಮತ್ತು ದೇವರು ಈ ಮೂರನ್ನು ಅದ್ಭುತವಾಗಿ ಬ್ಲೆಂಡ್ ಮಾಡಿಕೊಂಡು ಥ್ರಿಲ್ಲರ್ ಆ್ಯಕ್ಷನ್ ಸಿನಿಮಾ ಆಗಿ ಮೂಡಿಬಂದಿರುವ ‘ಮಿರಾಯ್’ ಕನ್ನಡದ ಸಾಹಿತಿ ಡಾ ಕೆ ಗಣೇಶಯ್ಯ ಅವರ ಕಾದಂಬರಿಗಳ ರೋಚಕತೆಯನ್ನು ನೆನಪಿಸುತ್ತದೆ.
ಇತಿಹಾಸದ ಅಚ್ಚರಿಗಳನ್ನು ದೈವತ್ವದ ನೆರಳಿನಲ್ಲಿ ಮೂಡಿಸಿರುವ ತೆಲುಗಿನ ‘ಮಿರಾಯ್’ ಚಿತ್ರದ ಕನ್ನಡ ಡಬ್ಬಿಂಗ್ ಕೆಲಸವನ್ನು ವರದರಾಜ್ ಚಿಕ್ಕಬಳ್ಳಾಪುರ ಅವರು ಮೂಲಕ್ಕೆ ದಕ್ಕೆಯಾಗದಂತೆ, ಇಲ್ಲಿನ ಭಾಷೆಗೂ ಅಪಚಾರವಾಗದಂತೆ ತುಂಬಾ ಎಚ್ಚರಿಕೆ ಮತ್ತು ಆಸಕ್ತಿಯಿಂದ ಮಾಡಿದ್ದಾರೆ. ಇಷ್ಟೆಲ್ಲ ಒಳ್ಳೆಯ ಅಂಶಗಳ ನಡುವೆಯೂ ಕತೆಯನ್ನು ಅಗತ್ಯಕ್ಕಿಂತ ತಸು ಹೆಚ್ಚೇ ಎಳೆದಾಡಿದ್ದಾರೆ ಅನಿಸುತ್ತದೆ. ನಿರೂಪಣೆಯಲ್ಲಿ ಇನ್ನೊಂಚೂರು ಸ್ಪೀಡು, ಎಡಿಟಿಂಗ್ ವಿಚಾರದಲ್ಲಿ ಚೌಕಾಸಿ ತೋರಿಸದೆ ಇರಬೇಕಿತ್ತು ಅನಿಸುತ್ತದೆ. ಉಳಿದಂತೆ ದೊಡ್ಡ ಪರದೆಯಲ್ಲಿ ನೋಡಲು ಹೇಳಿ ಮಾಡಿಸಿದ ಸಿನಿಮಾ ಇದು.