ಸೋಷಿಯಲ್‌ ಮೀಡಿಯಾದಲ್ಲಿ ಹೈಫ್‌ ಕ್ರಿಯೇಟ್ ಮಾಡಿದ್ದ ಕರಿಮಣಿ ಮಾಲೀಕ ನೀನಲ್ಲ ಸಾಳು ಇದೀಗ ಸಿನಿಮಾವಾಗುತ್ತಿದೆ.

 ಸಿನಿವಾರ್ತೆ

ದಶಕಗಳ ಹಿಂದೆ ಉಪೇಂದ್ರ ನಟಸಿದ್ದ ‘ಏನಿಲ್ಲ ಏನಿಲ್ಲ’ ಹಾಡಿನ ‘ಕರಿಮಣಿ ಮಾಲೀಕ ನೀನಲ್ಲ’ ಸಾಲು ಇತ್ತೀಚೆಗೆ ಸೋಷಿಯಲ್‍ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ ಆಗಿತ್ತು. ಇದೀಗ ಅದೇ ಹೆಸರಿನ ಸಿನಿಮಾ ಘೋಷಣೆಯಾಗಿದೆ.

ಚಂದ್ರು ಓಬಯ್ಯ ಇದರ ನಿರ್ದೇಶಕ, ನಿರ್ಮಾಪಕ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಗೀತ ಎಲ್ಲವೂ ಇವರದೇ. ಇನ್ನೂ ಹೀರೋ ಸಿಕ್ಕಿಲ್ಲ. ಮೇ ತಿಂಗಳ ಹೊತ್ತಿಗೆ ಹೀರೋನನ್ನು ಹುಡುಕಿ, ಸಿನಿಮಾದ ಚಿತ್ರೀಕರಣವನ್ನೂ ಆರಂಭಿಸುವುದಾಗಿ ಚಂದ್ರು ತಿಳಿಸಿದ್ದಾರೆ.ಮಾರ್ಸ್ ಮ್ಯೂಸಿಕ್‍ ಅಡ್ಡಾದ ಲೋಕೇಶ್‍ ಶೀರ್ಷಿಕೆ ಅನಾವರಣ ಮಾಡಿದರು.

ಈ ವೇಳೆ ಸಿನಿಮಾ ಬಗ್ಗೆ ಮಾತನಾಡಿದ ಚಂದ್ರು, ‘ಜನಪ್ರಿಯತೆಯ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿಲ್ಲ. ಹೂ ಮಾರುವ ಹುಡುಗಿ ಮತ್ತು ಎಳನೀರು ಮಾರುವ ಹುಡುಗನ ಪ್ರೇಮಕಥೆ ಚಿತ್ರದಲ್ಲಿದೆ. ಇದರಲ್ಲಿ ಕರಿಮಣಿ ಮಾಲೀಕ ಯಾರು ಎಂಬುದನ್ನು ತೆರೆಯ ಮೇಲೇ ನೋಡಬೇಕು. 50 ಲಕ್ಷ ರು. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ’ ಎಂದರು.ನಾಯಕಿ ರಮಿಕಾ ಸುತಾರ್‌, ನಟಿ ಮೀನಾ ಕಿರಣ್‍ ಸುದ್ದಿಗೋಷ್ಠಿಯಲ್ಲಿದ್ದರು.