ಅದ್ದೂರಿ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಯಶ್‌ ನಿರ್ಮಾಪಕ

| Published : Apr 13 2024, 01:00 AM IST / Updated: Apr 13 2024, 06:33 AM IST

ಅದ್ದೂರಿ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಯಶ್‌ ನಿರ್ಮಾಪಕ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಿವುಡ್‌ನ ಅದ್ದೂರಿ ಬಜೆಟ್‌ ಚಿತ್ರ ರಾಮಾಯಣವನ್ನು ರಾಕಿಂಗ್‌ ಸ್ಟಾರ್‌ ಯಶ್‌ ನಿರ್ಮಾಣ ಮಾಡುತ್ತಿದ್ದಾರೆ.

 ಸಿನಿವಾರ್ತೆ

ರಾಕಿಂಗ್‌ ಸ್ಟಾರ್‌ ಯಶ್‌ ಇದೀಗ ಬಾಲಿವುಡ್‌ಗೆ ಅದ್ದೂರಿ ಎಂಟ್ರಿ ಕೊಟ್ಟಿದ್ದಾರೆ. ಅದೂ ನಿರ್ಮಾಪಕನಾಗಿ. ಬಾಲಿವುಡ್‌ನ ಸ್ಟಾರ್‌ ನಿರ್ದೇಶಕ ನಿತೇಶ್‌ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾವನ್ನು ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೋ ಜಂಟಿಯಾಗಿ ನಿರ್ಮಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಶ್‌, ‘ರಾಮಾಯಣ ನಮ್ಮ ದೇಶದ ಶ್ರೀಸಾಮಾನ್ಯನ ನರನಾಡಿಗಳಲ್ಲಿ ಬೆರೆತು ಹೋಗಿದೆ. ಆದರೆ ಪ್ರತೀ ಸಲ ಕೇಳುವಾಗಲೂ ಈ ಕಥೆ ನಮಗೆ ಹೊಸ ಕತೆಯಂತೆ ಭಾಸವಾಗುತ್ತದೆ. ಮೂಲದಲ್ಲಿ ಇದು ಆದರ್ಶದ, ಮಾನವೀಯ ಮೌಲ್ಯವನ್ನು ಹೇಳುವ ಕಥನ. ಇಂಥಾ ದೇಶ, ಕಾಲಗಳನ್ನು ಮೀರಿದ ಕಥಾನಕವನ್ನು ಅದ್ಭುತವಾಗಿ ಬೆಳ್ಳಿತೆರೆಗೆ ತರುವ ಕನಸಿಗೆ ನಾನೂ ಕೈ ಜೋಡಿಸುತ್ತಿದ್ದೇನೆ’ ಎಂದಿದ್ದಾರೆ.‘ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದಕ್ಕೆ ತಕ್ಕಂತೆ ಒಮ್ಮೆ ಸಿನಿಮಾ ಕುರಿತು ಚರ್ಚಿಸುತ್ತಿದ್ದಾಗ ರಾಮಾಯಣದ ವಿಚಾರ ಬಂತು. ಹೀಗೆ ರಾಮಾಯಣದ ಜಗತ್ತನ್ನು ಪ್ರವೇಶಿಸಿದೆ. ಸದ್ಯ ನಮ್ಮ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ನಮ್ಮ ನೆಲದ ಕಥೆಯ ಅತ್ಯುತ್ತಮ ಅನುಭವನ್ನು ಈ ಮೂಲಕ ಜಗತ್ತಿನ ಮುಂದಿಡಲು ಕಾತರರಾಗಿದ್ದೇವೆ’ ಎಂದೂ ಯಶ್‌ ಹೇಳಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ಯಶ್‌ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ಪಾತ್ರದ ಸಂಭಾವನೆಯನ್ನೇ ಯಶ್ ಚಿತ್ರದ ನಿರ್ಮಾಣಕ್ಕೆ ವಿನಿಯೋಗಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ರಣಬೀರ್‌ ಕಪೂರ್‌ ರಾಮನ ಪಾತ್ರ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ. ಏ.17ರಂದು ರಾಮನವಮಿಯ ದಿನ ಅಧಿಕೃತ ಘೋಷಣೆಯಾಗಲಿದೆ.