ರಂಗಸ್ಥಳ ಚಿತ್ರದ ಶೀರ್ಷಿಕೆ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆ ಆಯಿತು. ಈ ಚಿತ್ರದ ಮೂಲಕ 18 ವರ್ಷಗಳ ನಂತರ ಮಲಯಾಳಂ ನಟ ಕನ್ನಡಕ್ಕೆಬಂದಿದ್ದಾರೆ.

 ಸಿನಿವಾರ್ತೆ

ಡಾ ರೇವಣ್ಣ ನಿರ್ಮಾಣದ, ಈಶ್ವರ್‌ ನಿತಿನ್‌ ನಿರ್ದೇಶನದ, ವಿಲೋಕ್‌ ರಾಜ್‌ ಹಾಗೂ ಶಿಲ್ಪಾ ಕಾಮತ್‌ ನಟನೆಯ ‘ರಂಗಸ್ಥಳ’ ಚಿತ್ರದ ಶೀರ್ಷಿಕೆ ಪೋಸ್ಟರ್‌ ಬಿಡುಗಡೆ ಆಗಿದೆ. ಈ ಚಿತ್ರದ ಮೂಲಕ ಮಲಯಾಳಂ ನಟ ಮನೋಜ್‌ ಕೆ ಜಯನ್‌ 18 ವರ್ಷಗಳ ಬಳಿಕ ಕನ್ನಡಕ್ಕೆ ಬಂದಿದ್ದಾರೆ. ಅವರು 2005ರಲ್ಲಿ ಕನ್ನಡದ ‘ಉಗ್ರ ನರಸಿಂಹ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ‘ರಂಗಸ್ಥಳ’ ಚಿತ್ರದಲ್ಲಿ ವಿಲನ್‌ ಆಗಿ ನಟಿಸುತ್ತಿದ್ದಾರೆ.

ಮನೋಜ್‌, ‘ಕನ್ನಡ ಚಿತ್ರದಲ್ಲಿ ಮಲಯಾಳಂ ವ್ಯಕ್ತಿಯ ಪಾತ್ರವನ್ನೇ ಮಾಡುತ್ತಿದ್ದೇನೆ. ನನ್ನ ಪಾತ್ರ ಕತೆಗೆ ಪೂರಕವಾಗಿದೆ. ಕನ್ನಡ ಭಾಷೆಗೆ ದೈವಿಕ ಶಕ್ತಿ ಇದೆ. ನಾನು ಆ ಶಕ್ತಿಯನ್ನು ಕಂಡುಕೊಂಡಿದ್ದು ಡಾ ರಾಜ್‌ಕುಮಾರ್‌ ಅವರಲ್ಲಿ. ತಮ್ಮ ಚಿತ್ರಗಳಲ್ಲಿ ತಾವೇ ಹಾಡುತ್ತಾ, ಅಭಿನಯಿಸುತ್ತಿದ್ದ ಡಾ ರಾಜ್‌ಕುಮಾರ್‌ ಎಂದರೆ ನನಗೆ ಪ್ರಾಣ’ ಎಂದರು.

ಡಾ ರೇವಣ್ಣ, ‘ಈ ಚಿತ್ರದಿಂದ ಹಾಕಿದ ಹಣ ಬಂದರೆ ಸಾಕು. ನಮ್ಮ ಸಂಸ್ಥೆಯಿಂದ ಮುಂದೆಯೂ ಹೊಸಬರಿಗೆ ಅವಕಾಶ ಕೊಡುವ ಉದ್ದೇಶವಿದೆ’ ಎಂದರು. ಈಶ್ವರ್ ನಿತಿನ್‌, ‘ಇದು ನಮ್ಮ ಪುತ್ತೂರು ಭಾಗದ ಸುತ್ತ ಸಾಗುವ ಕತೆ. ಚಿತ್ರದಲ್ಲಿ ನಾಯಕ ಯಕ್ಷಗಾನ ಕಲಾವಿದ ಹಾಗೂ ನಾಯಕಿ ವೈಲ್ಡ್‌ಲೈಫ್‌ ಫೋಟೋಗ್ರಾಫರ್‌ ಆಗಿರುತ್ತಾರೆ. ವಿಶಿಷ್ಟ ಕತೆಯ ಚಿತ್ರ’ ಎಂದರು.