ಹೊಸದಾಗಿ ನೀಡುವ ಎಚ್‌1ಬಿ ವೀಸಾಗಳ ಮೇಲೆ 90 ಲಕ್ಷ ರು. ಶುಲ್ಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ನಿರ್ಧಾರ ವಿರುದ್ಧ ಅಮೆರಿಕದ 20 ರಾಜ್ಯಗಳು ಕಾನೂನು ಹೋರಾಟಕ್ಕೆ ಮುಂದಾಗಿವೆ. ಟ್ರಂಪ್‌ ಅವರ ಈ ನಿರ್ಧಾರದಿಂದ ಆರೋಗ್ಯ, ಶಿಕ್ಷಣ ಮತ್ತು ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಸೃಷ್ಟಿಸಲಿದೆ ಎಂದು ಅವು ತಮ್ಮ ದಾವೆಯಲ್ಲಿ ಎಚ್ಚರಿಸಿವೆ.

- ಈ ನಡೆಯಿಂದ ದೇಶದ ಆರ್ಥಿಕತೆಗೆ ಹೊಡೆತ ಆರೋಪ

- ಮೆಸಾಚುಸೆಟ್ಸ್‌ ಕೋರ್ಟಲ್ಲಿ ಇದೀಗ ಮೊಕದ್ದಮೆ ದಾಖಲು

ನ್ಯೂಯಾರ್ಕ್‌/ವಾಷಿಂಗ್ಟನ್‌:

ಹೊಸದಾಗಿ ನೀಡುವ ಎಚ್‌1ಬಿ ವೀಸಾಗಳ ಮೇಲೆ 90 ಲಕ್ಷ ರು. ಶುಲ್ಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ನಿರ್ಧಾರ ವಿರುದ್ಧ ಅಮೆರಿಕದ 20 ರಾಜ್ಯಗಳು ಕಾನೂನು ಹೋರಾಟಕ್ಕೆ ಮುಂದಾಗಿವೆ. ಟ್ರಂಪ್‌ ಅವರ ಈ ನಿರ್ಧಾರದಿಂದ ಆರೋಗ್ಯ, ಶಿಕ್ಷಣ ಮತ್ತು ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಸೃಷ್ಟಿಸಲಿದೆ ಎಂದು ಅವು ತಮ್ಮ ದಾವೆಯಲ್ಲಿ ಎಚ್ಚರಿಸಿವೆ.

ಮೆಸಾಚುಸೆಟ್ಸ್‌ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಬಂಧ ಮೊಕದ್ದಮೆ ದಾಖಲಿಸಿರುವ ನ್ಯೂಯಾರ್ಕ್‌ನ ಅಟಾರ್ನಿ ಜನರಲ್‌ ಲೆಟಿಟಿಯಾ ಜೇಮ್ಸ್‌ ಮತ್ತು ಇತರೆ 18 ಅಟಾರ್ನಿ ಜನರಲ್‌ಗಳು ಟ್ರಂಪ್‌ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಚ್‌1ಬಿ ವೀಸಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ನಿರ್ಧಾರವನ್ನು ಯಾವುದೇ ಕಾನೂನು ಅಥವಾ ಸೂಕ್ತ ಪ್ರಕ್ರಿಯೆಗಳನ್ನು ನಡೆಸದೆ ಕೈಗೊಳ್ಳಲಾಗಿದೆ ಎಂದು ಆರೋಪಿಸಿವೆ.

ಎಚ್‌1ಬಿ ವೀಸಾವು ಉನ್ನತ ಕೌಶಲ್ಯ ಹೊಂದಿರುವ ವಿದೇಶಿ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಈ ವೀಸಾದ ಲಾಭ ಪಡೆಯುತ್ತಿದ್ದರು.

ಇದೀಗ ಟ್ರಂಪ್‌ ಸರ್ಕಾರದ ಕ್ರಮದಿಂದಾಗಿ ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಮತ್ತು ಇತರೆ ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ಎಚ್‌1ಬಿ ವೀಸಾ ಮೇಲೆ ಅವಲಂಬಿತ ಸರ್ಕಾರಿ ಹಾಗೂ ಲಾಭದಾಯಕಲ್ಲದ ಉದ್ಯೋಗದಾತರಿಗೆ ಸಂಕಷ್ಟ ತಂದೊಡ್ಡಲಿದೆ.

ಎಚ್‌1ಬಿ ವೀಸಾವು ಕೌಶಲ್ಯಯುತ ವೈದ್ಯರು, ನರ್ಸ್‌ಗಳು, ಶಿಕ್ಷಕರು ಮತ್ತು ಇತರರ ಕೆಲಸಗಾರರನ್ನು ದೇಶದಾದ್ಯಂತ ಜನಸಮುದಾಯದ ಸೇವೆಗೆ ಬಳಸಲು ಅವಕಾಶ ಮಾಡಿಕೊಡುತ್ತದೆ.

ಟ್ರಂಪ್‌ ಸರ್ಕಾರ ಇದೀಗ ಅಕ್ರಮವಾಗಿ ಈ ವೀಸಾ ಕಾರ್ಯಕ್ರಮ ಹಾಳುಗೆಡವಲು ಪ್ರಯತ್ನಿಸುವ ಮೂಲಕ ನ್ಯೂಯಾರ್ಕ್‌ನ ಮಂದಿ ಉತ್ತಮ ಆರೋಗ್ಯ ಸೇವೆ, ಶಿಕ್ಷಣ ಸೇವೆಯಿಂದ ವಂಚಿತರಾಗುವಂತೆ ಮಾಡಿದೆ. ಇದು ನಮ್ಮ ಆರ್ಥಿಕತೆ ಮೇಲೆ ಹೊಡೆತ ನೀಡಲಿದೆ. ವಲಸಿಗರ ಮೇಲಿನ ದಾಳಿಯ ವಿರುದ್ಧದ ನನ್ನ ಹೋರಾಟವನ್ನು ನಾನು ಮುಂದುವರಿಸುತ್ತೇನೆ ಎಂದು ನ್ಯೂಯಾರ್ಕ್‌ನ ಅಟಾರ್ನಿ ಜನರಲ್‌ ಜೇಮ್ಸ್‌ ಹೇಳಿದ್ದಾರೆ.

ಸೆಪ್ಟೆಂಬರ್‌ ತಿಂಗಳಲ್ಲಿ ಟ್ರಂಪ್‌ ಅವರು ಹೊಸ ಎಚ್‌1ಬಿ ವೀಸಾಗೆ 90 ಲಕ್ಷ ರು. ಶುಲ್ಕ ವಿಧಿಸುವ ನಿರ್ಧಾರ ಪ್ರಕಟಿಸಿದ್ದರು.

ಯಾವ ರಾಜ್ಯಗಳಿಂದ ವಿರೋಧ?:

ಅರಿಜೋನಾ, ಕ್ಯಾಲಿಫೋರ್ನಿಯಾ, ಕೊಲರಾಡೋ, ಕನೆಕ್ಟಿಕಟ್‌, ಡೆಲಾವರ್, ಹವಾಯಿ, ಇಲಿನಾಯ್ಸ್‌, ಮೆರಿಲ್ಯಾಂಡ್‌, ಮೆಸ್ಸಾಚುಸೆಟ್ಸ್‌, ಮಿಚಿಗನ್‌, ಮಿನ್ನೆಸೊಟಾ, ನಾರ್ಥ್‌ ಕೆರೋಲಿನಾ, ನ್ಯೂಜೆನ್ಸಿ, ಓರೇಗನ್‌, ರೋಡ್‌ ಐಲ್ಯಾಂಡ್‌, ವರ್ಮೌಂಟ್‌, ವಾಷಿಂಗ್ಟನ್‌ ಮತ್ತು ವಿಸ್ಕನ್ಸಿನ್‌ ರಾಜ್ಯಗಳು ಟ್ರಂಪ್‌ ವಿರುದ್ಧ ಇದೀಗ ಕಾನೂನು ಸಮರಕ್ಕೆ ಮುಂದಾಗಿವೆ.

===

ಭಾರತದ ಮೇಲೆ 50% ತೆರಿಗೆಗೆ 3 ಅಮೆರಿಕ ಸಂಸದರ ವಿರೋಧ

-ತೆರಿಗೆ ತೆರವು ಕೋರಿ ಸಂಸತ್ತಿನಲ್ಲಿ ನಿರ್ಣಯ

-ಇದರಿಂದ ದ್ವಿಪಕ್ಷೀಯ ಸಂಬಂಧ ದುರ್ಬಲ

-ಪೂರೈಕೆ ಸರಪಳಿಗೆ, ಉದ್ಯೋಗಕ್ಕೆ ಸಮಸ್ಯೆ

ನ್ಯೂಯಾರ್ಕ್‌/ವಾಷಿಂಗ್ಟನ್‌: ‘ತೆರಿಗೆ ಎಂಬುದಕ್ಕಿಂತ ಸುಂದರ ಪದವಿಲ್ಲ’ ಎನ್ನುತ್ತಾ ತಮ್ಮ ವ್ಯಾಪಾರ ಪಾಲುದಾರ ದೇಶಗಳಿಗೆ ಮನಸೋಇಚ್ಛೆ ತೆರಿಗೆ ಬರೆ ಎಳೆಯುತ್ತಿರುವ ಅಧ್ಯಕ್ಷ ಟ್ರಂಪ್‌ ಅವರಿಗೆ ಅಮೆರಿಕನ್ನರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಭಾರತದ ಮೇಲೆ ಹೇರಲಾಗಿರುವ ಶೇ.50ರಷ್ಟು ತೆರಿಗೆಯನ್ನು ನಿಲ್ಲಿಸಬೇಕು ಎಂದು ಮೂವರು ಪ್ರಭಾವಿ ಸಂಸದರು ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದಾರೆ.

ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅತಿಹೆಚ್ಚು, ಶೇ.50ರಷ್ಟು ತೆರಿಗೆ ಹೇರಿರುವ ಟ್ರಂಪ್‌ ನಡೆಯನ್ನು ಬೇಜವಾಬ್ದಾರಿಯುತ ಎಂದು ಕರೆದಿರುವ ಉತ್ತರ ಕ್ಯಾರೊಲಿನಾದ ಡೆಬೊರಾ ರಾಸ್, ಟೆಕ್ಸಸ್‌ನ ಮಾರ್ಕ್ ವೆಸಿ ಮತ್ತು ಇಲ್ಲಿನಾಯ್ಸ್‌ನ ರಾಜಾ ಕೃಷ್ಣಮೂರ್ತಿ, ‘ಇದರಿಂದ ಉಭಯ ದೇಶಗಳ ನಡುವಿನ ಸಂಬಂಧ ದುರ್ಬಲವಾಗಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಭಾರತದ ಮೇಲೆ ಟ್ರಂಪ್‌, ಶೇ.25ರಷ್ಟು ಪ್ರತಿತೆರಿಗೆ ಹಾಗೂ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಪ್ರತೀಕಾರವಾಗಿ ಶೇ.25ರಷ್ಟು ತೆರಿಗೆಯನ್ನು(ಒಟ್ಟು ಶೇ.50ರಷ್ಟು) ವಿಧಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾರತ ಮೂಲದ ಕೃಷ್ಣಮೂರ್ತಿ, ‘ಈ ತೆರಿಗೆಯು ಭಾರತದೊಂದಿಗಿನ ಸಂಬಂಧವನ್ನು ಹಾಳು ಮಾಡುತ್ತದೆ. ಈ ಕ್ರಮದಿಂದ ಅಮೆರಿಕದ ಹಿತಾಸಕ್ತಿ ರಕ್ಷಣೆಯಾಗುವ ಬದಲು, ಪೂರೈಕೆ ಸರಪಳಿಗೆ ಹೊಡೆತ ಬೀಳುತ್ತದೆ, ಅಮೆರಿಕದ ನೌಕರರಿಗೆ ಸಮಸ್ಯೆಯಾಗುತ್ತದೆ, ಅಮೆರಿಕದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತದೆ’ ಎಂದು ಟೀಕಿಸಿದ್ದಾರೆ. ಜತೆಗೆ, ‘ಈ ತೆರಿಗೆಯನ್ನು ರದ್ದುಗೊಳಿಸುವುದರಿಂದ ಭಾರತದೊಂದಿಗಿನ ಸಂಬಂಧ ವೃದ್ಧಿಯಾಗುತ್ತದೆ. ಆರ್ಥಿಕ ಮತ್ತು ಭದ್ರತಾ ಉದ್ದೇಶಗಳ ಮುಂದುವರಿಕೆಗೂ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದ್ದಾರೆ.ಇನ್ನಿಬ್ಬರು ಸಂಸದರು ಸಹ, ‘ಅಮೆರಿಕದಲ್ಲಿ ಭಾರೀ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಿರುವ ಭಾರತದ ಮೇಲೆ ತೆರಿಗೆ ಹೇರಿಕೆಯಿಂದ ಇಲ್ಲಿನವರ ಉದ್ಯೋಗ, ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಗೆ ಹೊಡೆತ ಬೀಳುತ್ತದೆ’ ಎಂದಿದ್ದಾರೆ.

ಬ್ರೆಜಿಲ್ ಮೇಲಿನ ಸುಂಕವನ್ನು ಕೊನೆಗೊಳಿಸುವ ಮಸೂದೆ ಸೆನೆಟ್‌ನಲ್ಲಿ ಅಂಗೀಕಾರವಾದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.