‘ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಿಂದ ತಪ್ಪಿಸಿಕೊಳ್ಳಲು ಸುರಂಗ ಕೊರೆದಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಸಿಕ್ಕಿಹಾಕಿಕೊಂಡು ಚಿತ್ರಹಿಂಸೆ ಅನುಭವಿಸಿದೆ’ ಎಂದು, ಜೈಷ್‌ ಉಗ್ರಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಮೊದಲ ಬಾರಿ ಹೇಳಿದ್ದಾನೆ.

ಸುರಂಗ ತೋಡಿದ್ದು ನೆನಪಿಸಿಕೊಂಡ ಉಗ್ರಇಸ್ಲಾಮಾಬಾದ್‌: ‘ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಿಂದ ತಪ್ಪಿಸಿಕೊಳ್ಳಲು ಸುರಂಗ ಕೊರೆದಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಸಿಕ್ಕಿಹಾಕಿಕೊಂಡು ಚಿತ್ರಹಿಂಸೆ ಅನುಭವಿಸಿದೆ’ ಎಂದು, ಜೈಷ್‌ ಉಗ್ರಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಮೊದಲ ಬಾರಿ ಹೇಳಿದ್ದಾನೆ.

ಅಜರ್‌ ಬಿಡುಗಡೆ ಮಾಡಿರುವ ಆಡಿಯೋದಲ್ಲಿ, ‘ನಾನು ಹಾಗೂ ನನ್ನ ಸಹಚರರು ಜಮ್ಮು ಜೈಲಲ್ಲಿ ಸುರಂಗ ತೋಡಿದ್ದೆವು. ದುರದೃಷ್ಟವಶಾತ್‌, ಅಲ್ಲಿಂದ ತಪ್ಪಿಸಿಕೊಳ್ಳಬೇಕಾದ ದಿನ ಸಿಕ್ಕಿಬಿದ್ದೆವು. ಎಲ್ಲರನ್ನು ಎಳೆದೊಯ್ದ ಅಧಿಕಾರಿಗಳು ಹಿಗ್ಗಾಮುಗ್ಗಾ ಥಳಿಸಿ, ಡಬಲ್‌ ರೋಟಿಯಂತೆ ಮಾಡಿಬಿಟ್ಟಿದ್ದರು, ವಾಚಾಮಗೋಚರ ಬೈದರು. ನನಗೆ ಅತೀವ ದುಃಖವಾಯಿತು. ಆದರೆ ನನ್ನ ಕಣ್ಣೀರನ್ನು ಕಾಫಿರರು ನೋಡದಿರಲಿ ಎಂದು ಮುಚ್ಚಿಟ್ಟುಕೊಂಡೆ. ಆದರೆ ಕೋಣೆಗೆ ಬಂದಾಗ ಅಳು ತಡೆಯಲಾಗಲಿಲ್ಲ. ಆಗ ನನ್ನ ಜತೆಗಿದ್ದವರು, ಅಲ್ಲಾಹ್‌ ಜತೆಗಿರುವಾಗ ಅಳುವೇಕೆ? ಎಂದು ಧೈರ್ಯ ತುಂಬಿದರು’ ಎಂದು ಹೇಳಿದ್ದಾನೆ.

ಭಾರತದಲ್ಲಿ ಉಗ್ರಕೃತ್ಯಗಳಲ್ಲಿ ತೊಡಗಿದ್ದ ಅಜರ್‌ನನ್ನು 1994ರಲ್ಲಿ ಬಂಧಿಸಿ ಜಮ್ಮುವಿನ ಜೈಲಿನಲ್ಲಿ ಇಡಲಾಗಿತ್ತು. ಆದರೆ ಆತನ ಸಹಚರರು ಕಂದಾಹಾರ್‌ ವಿಮಾನವನ್ನು ಹೈಜಾಕ್‌ ಮಾಡಿ, ಪ್ರಯಾಣಿಕರ ಬದಲಿಗೆ ಅಜರ್‌ ಬಿಡುಗಡೆಗೆ ಆಗ್ರಹಿಸಿದ್ದರಿಂದ, ಆತನನ್ನು ಅನಿವಾರ್ಯವಾಗಿ 1999ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಪಾಕಿಸ್ತಾನಕ್ಕೆ ಪರಾರಿಯಾದವ ಜೈಷ್‌-ಎ-ಮೊಹಮ್ಮದ್‌ ಉಗ್ರಸಂಘಟನೆಯನ್ನು ಹುಟ್ಟುಹಾಕಿದ.