ಬಿಹಾರ: ಇಂದು ಮೊದಲ ಹಂತದ ಮತ ಸಮರ

| N/A | Published : Nov 06 2025, 03:15 AM IST / Updated: Nov 06 2025, 05:28 AM IST

bihar election 2025

ಸಾರಾಂಶ

ಬಿಹಾರದ ಮೊದಲ ಹಂತದ ಚುನಾವಣೆ ಗುರುವಾರ ನಡೆಯಲಿದೆ. 121 ಕ್ಷೇತ್ರಗಳಿಗೆ ನಡೆಯಲಿರುವ ಮತದಾನದಲ್ಲಿ 1314 ಅಭ್ಯರ್ಥಿಗಳ ಹಣೆಬರಹವನ್ನು 3.75 ಕೋಟಿ ಮತದಾರರು ತೀರ್ಮಾನಿಸಲಿದ್ದಾರೆ. ಮೊದಲ ಹಂತದ ಅಭ್ಯರ್ಥಿಗಳ ಪೈಕಿ ಶೇ.36ರ ಮೇಲೆ ಕ್ರಿಮಿನಲ್‌ ಪ್ರಕರಣಗಳಿವೆ.

ಪಟನಾ: ಬಿಹಾರದ ಮೊದಲ ಹಂತದ ಚುನಾವಣೆ ಗುರುವಾರ ನಡೆಯಲಿದೆ. 121 ಕ್ಷೇತ್ರಗಳಿಗೆ ನಡೆಯಲಿರುವ ಮತದಾನದಲ್ಲಿ 1314 ಅಭ್ಯರ್ಥಿಗಳ ಹಣೆಬರಹವನ್ನು 3.75 ಕೋಟಿ ಮತದಾರರು ತೀರ್ಮಾನಿಸಲಿದ್ದಾರೆ.

ಕಣದಲ್ಲಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಮ್ರಾಟ್‌ ಚೌಧರಿ, ಆರ್‌ಜೆಡಿ ನಾಯಕ, ವಿಪಕ್ಷ ನಾಯಕ ತೇಜಸ್ವಿ ಯಾದವ್‌, ಲಾಲು ಹಿರಿಯ ಮಗ, ಜನಶಕ್ತಿ ಜನತಾ ದಳದ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಇದ್ದಾರೆ. ಮೊದಲ ಹಂತದ ಅಭ್ಯರ್ಥಿಗಳ ಪೈಕಿ ಶೇ.36ರ ಮೇಲೆ ಕ್ರಿಮಿನಲ್‌ ಪ್ರಕರಣಗಳಿವೆ.

ಪಟನಾ, ನಳಂದಾ, ವೈಶಾಲಿ, ಮುಜಫ್ಫರ್‌ಪುರ, ದರ್ಭಂಗಾ, ಮಾಧೇಪುರ ಸೇರಿ ಹಲವು ಜಿಲ್ಲೆಗಳ 45,341 ಬೂತ್‌ಗಳಲ್ಲಿ ಮತದಾನಕ್ಕೆ ಸಿದ್ಧತೆ ಪೂರ್ಣವಾಗಿದೆ. 1.77 ಕೋಟಿ ಮಹಿಳೆಯರು, 1.98 ಕೋಟಿ ಪುರುಷರು, 758 ತೃತೀಯ ಲಿಂಗಿಗಳು ಸೇರಿ 3.75 ಕೋಟಿ ಮತದಾರರು ವೋಟ್‌ ಮಾಡಲಿದ್ದಾರೆ.

ನ.11ರ 2ನೇ ಹಂತದ ಚುನಾವಣೆ ಬಳಿಕ ನ.14ರಂದು ಮತ ಎಣಿಕೆ ನಡೆಯಲಿದೆ.

ದೇಶವನ್ನು ಬ್ರಿಟಿಷರು ಆಳುತ್ತಿರುವ ಭಾಸವಾಗುತ್ತಿದೆ: ಪ್ರಿಯಾಂಕಾ

ಬೆಟ್ಟಿಯಾ (ಬಿಹಾರ): ‘ಎನ್‌ಡಿಎ ಕೂಟವು ಮತಗಳವು ಮೂಲಕ ಸರ್ಕಾರ ರಚಿಸುವ ಬಯಕೆ ಹೊಂದಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.ಪಶ್ಚಿಮ ಚಂಪಾರಣ್‌ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮಗೆ ಬ್ರಿಟಿಷರ ಆಳ್ವಿಕೆಯಂತೆ ಭಾಸವಾಗುತ್ತಿದೆ. ಮುಂದೆ ದೇಶವು ಚುನಾವಣೆಯನ್ನು ನೋಡಲಿದೆಯೇ ಎಂಬ ಅನುಮಾನ ನಮ್ಮಲ್ಲಿ ಶುರುವಾಗಿದೆ. ನಮ್ಮ ಸೋದರ ರಾಹುಲ್‌ ಗಾಂಧಿ ಹರ್ಯಾಣದಲ್ಲಿಯೂ ಮತಗಳವಾಗಿರುವುದನ್ನು ಬಯಲಿಗೆಳೆದಿದ್ದಾರೆ. ಎನ್‌ಡಿಎ ಎಲ್ಲವನ್ನು ನಾಶಪಡಿಸುತ್ತದೆ. ಮುಂದೆ ಚುನಾವಣೆ ನಡೆಯುತ್ತದೆಯೇ ಎಂಬುದೂ ಸಹ ಸ್ಪಷ್ಟವಿಲ್ಲ. ಜನರೇ ಎನ್‌ಡಿಎವನ್ನು ತೊಲಗಿಸಿ’ ಎಂದು ಗುಡುಗಿದರು.

ಮೋದಿ ರಾಮ ಲಕ್ಷ್ಮಣ, ಲಾಲು-ತೇಜಸ್ವಿ ಬಾಬರ್‌, ಔರಂಗಜೇಬ್: ಹಿಮಂತ

ಪಟನಾ: ಪ್ರಧಾನಿ ನರೇಂದ್ರ ಮೋದಿ ಅವರು ರಾಮ-ಲಕ್ಷ್ಮಣರನ್ನು ಪ್ರತಿನಿಧಿಸಿದರೆ, ಲಾಲು ಪ್ರಸಾದ್‌ ಯಾದವ್‌ ಹಾಗೂ ಅವರ ಮಗ ಬಾಬರ್‌ ಮತ್ತು ಔರಂಗಜೇಬನನ್ನು ಪ್ರತಿನಿಧಿಸುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಮಾತನಾಡಿದ ಅವರು, ‘ಬಿಹಾರದಲ್ಲಿ ಯಾರು ರಾಮನನ್ನು ಆರಾಧಿಸಿ, ಲಕ್ಷ್ಮಣ ರೀತಿ ನಿಷ್ಠರಾಗಿರುವರೋ ಅವರು ಸಿಎಂ ಆಗುವುದಕ್ಕೆ ಅರ್ಹರಾಗಿರುತ್ತಾರೆ. ಪ್ರಧಾನಿ ಮೋದಿ ಅವರು ರಾಮ ಲಕ್ಷ್ಮಣರ ಆದರ್ಶಗಳನ್ನು ಪ್ರತಿನಿಧಿಸುತ್ತಾರೆ. ಅದೇ ಲಾಲು ಮತ್ತು ತೇಜಸ್ವಿ ಬಾಬರ್‌-ಔರಂಗಜೇಬನ ತತ್ವಗಳನ್ನು ಪಾಲಿಸುತ್ತಾರೆ. ಈ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನದ್ದಾಗಿದೆ’ ಎಂದು ಹೇಳಿದರು.

ಸೇನೇಲಿ ಮೀಸಲಾತಿ ಕೋರಿ ರಾಹುಲ್‌ ಅರಾಜಕತೆ ಸೃಷ್ಟಿ: ರಾಜನಾಥ್‌ ಕಿಡಿ

 ಜಮೂಯಿ/ಬಂಕಾ :  ‘ಭಾರತೀಯ ಸೇನೆಯನ್ನು ದೇಶದ ಶೇ.10ರಷ್ಟು ಜನಾಂಗದ ಜನರಷ್ಟೇ ನಿಯಂತ್ರಿಸುತ್ತಿದ್ದಾರೆ’ ಎಂದಿದ್ದ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ‘ಸೇನೆಯಲ್ಲೂ ಮೀಸಲಾತಿಗೆ ಆಗ್ರಹಿಸುವ ಮೂಲಕ ರಾಹುಲ್‌ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.ಬಿಹಾರದ ಜಮೂಯಿಯಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಸಿಂಗ್‌, ‘ಭದ್ರತಾ ಪಡೆಗಳಲ್ಲೂ ಜಾತಿ ಆಧರಿತ ಮೀಸಲಾತಿಗೆ ಆಗ್ರಹಿಸುತ್ತಿರುವ ರಾಹುಲ್‌ಗೆ ಏನಾಗಿದೆ? ಈ ಕೋರಿಕೆಯೊಂದಿಗೆ ಅವರು ದೇಶದಲ್ಲಿ ಅರಾಜಕತೆ ಸೃಷ್ಟಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮ ಸೇನೆ ಇವೆಲ್ಲದಕ್ಕಿಂತ ಮಿಗಿಲಾಗಿದೆ’ ಎಂದರು. ಜತೆಗೆ, ‘ದೇಶ ನಡೆಸುವುದೆಂದರೆ ಮಕ್ಕಳಾಟವಲ್ಲ’ ಎಂದೂ ತಿವಿದರು.

ಇದೇ ವೇಳೆ, ಪಾಕ್‌ ವಿರುದ್ಧ ನಡೆದ ಆಪರೇಷನ್‌ ಸಿಂದೂರದಲ್ಲಿ ನಮ್ಮ ಯೋಧರು ತೋರಿಸ ಪರಾಕ್ರಮವನ್ನು ಶ್ಲಾಘಿಸಿದ ರಕ್ಷಣಾ ಸಚಿವರು, ‘ಆ ಕಾರ್ಯಾಚರಣೆ ಸ್ಥಗಿತಗೊಂಡಿದೆಯೇ ಹೊರತು ನಿಂತಿಲ್ಲ. ನಾವು ಯಾರಿಗೂ ಪ್ರಚೋದನೆ ಕೊಡುವುದಿಲ್ಲ. ಜತೆಗೆ, ನಮ್ಮನ್ನು ಪ್ರಚೋದಿಸುವವರನ್ನು ಸುಮ್ಮನೆ ಬಿಡುವುದಿಲ್ಲ. ಉಗ್ರರು ಮತ್ತು ದಾಳಿಗೆ ಮುಂದಾದರೆ ತಕ್ಕ ಉತ್ತರ ನೀಡುತ್ತೇವೆ’ ಎಂದರು.

ಕೆರೆಗೆ ಹಾರೋದೋಂದೇ ಬಾಕಿ : ಇತ್ತೀಚೆಗಷ್ಟೇ ರಾಹುಲ್‌ ಬಿಹಾರದ ಕೆರೆಯೊಂದರಲ್ಲಿ ಬಲೆ ಬೀಸಿ ಮೀನು ಹಿಡಿದಿದ್ದರು. ಇದನ್ನು ಉಲ್ಲೇಖಿಸಿದ ಸಿಂಗ್‌, ‘ಅವರ ಬಳಿ ಈಗ ಕೆರೆಗೆ ಹಾರುವುದು ಬಿಟ್ಟರೆ ಬೇರೆ ಆಯ್ಕೆಯೇ ಉಳಿದಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

Read more Articles on