ಬಿಲಾಸ್‌ಪುರ ರೈಲು ದುರಂತ: ಮೃತ ಸಂಖ್ಯೆ 11ಕ್ಕೆ ಏರಿಕೆ

| Published : Nov 06 2025, 01:45 AM IST

ಸಾರಾಂಶ

ಮಂಗಳವಾರ ಇಲ್ಲಿ ಸಂಭವಿಸಿದ ನಿಂತಿದ್ದ ಗೂಡ್ಸ್‌ ರೈಲಿಗೆ ಮೆಮು ರೈಲು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 20 ಮಂದಿ ಗಾಯಗೊಂಡಿದ್ದಾರೆ.

ಬಿಲಾಸ್‌ಪುರ: ಮಂಗಳವಾರ ಇಲ್ಲಿ ಸಂಭವಿಸಿದ ನಿಂತಿದ್ದ ಗೂಡ್ಸ್‌ ರೈಲಿಗೆ ಮೆಮು ರೈಲು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 20 ಮಂದಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿ ಬೋಗಿಗಳನ್ನು ಸರಿಪಡಿಸಿ, ಒಳಗೆ ಸಿಲುಕಿದ್ದವರನ್ನು ಹೊರತೆಗೆಯಲಾಗಿದೆ. ಬುಧವಾರ ಬೆಳಗ್ಗೆ 5.30ರ ತನಕ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಗಾಯಗೊಂಡವರನ್ನು ಅಪೋಲೋ ಮತ್ತು ಚಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅಪಘಾತ ಸ್ಥಳವನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಿಕ್ಕಂತೆ ಗಾಯಾಳುಗಳಿಗೆ ತಲಾ 50,000 ರು. ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಮೆಮು ರೈಲೊಂದು ಸಿಗ್ನಲ್ ಜಂಪ್‌ ಮಾಡಿ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿತ್ತು.

==

ಪ್ಲಾಟ್‌ಫಾರ್ಮ್‌ ಬಿಟ್ಟು ಹಳಿ ಮೇಲೆ ಇಳಿದ ಪ್ರಯಾಣಿಕರು: 6 ಮಹಿಳೆಯರು ಬಲಿ

ವೇಗವಾಗಿ ಬಂದ ರೈಲು ಡಿಕ್ಕಿಯಾಗಿ ಮಹಿಳೆಯರು ಸಾವು

ಪಿಟಿಐ ಮಿರ್ಜಾಪುರ

ರೈಲು ಇಳಿದ ಬಳಿಕ ಬೇಗ ಹೊರಗೆ ಹೋಗಬಹುದು ಎಂಬ ಕಾರಣಕ್ಕೆ ಪ್ಲಾಟ್‌ಫಾರ್ಮ್‌ ಬದಲಿಗೆ ಪಕ್ಕದ ಹಳಿ ಮೇಲೆ ಇಳಿದ 6 ಮಹಿಳೆಯರಿಗೆ ವೇಗವಾಗಿ ಬಂದ ರೈಲೊಂದು ಡಿಕ್ಕಿ ಹೊಡೆದಿದ್ದು, ಆರೂ ಜನರು ಬಲಿಯಾದ ಆಘಾತಕಾರಿ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.ಮೃತರು ಸವಿತಾ (28), ಸಾಧನಾ (16), ಶಿವಕುಮಾರಿ (12), ಅಂಜು ದೇವಿ (20), ಸುಶೀಲಾ ದೇವಿ (60) ಮತ್ತು ಕಲಾವತಿ (50) ಎಂದು ಗುರುತಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಏನಾಯ್ತು?6 ಮಹಿಳೆಯರು ಕಾರ್ತಿಕ ಪೂರ್ಣಿಮಾ ಸ್ನಾನಕ್ಕಾಗಿ ಚೋಪನ್‌ ಎಕ್ಸ್‌ಪ್ರೆಸ್‌ ಮೂಲಕ ಇಲ್ಲಿನ ಚುನಾರ್‌ ರೈಲು ನಿಲ್ದಾಣಕ್ಕೆ ಬಂದಿದ್ದರು. ಪ್ಲಾಟ್‌ಫಾರ್ಮ್‌, ಫುಟ್‌ ಓವರ್‌ ಸೇತುವೆ ಇದ್ದರೂ, ಪಕ್ಕದ ಹಳಿ ಮೇಲೆ ಇಳಿದಿದ್ದಾರೆ. ಈ ವೇಳೆ ವೇಗವಾಗಿ ಬಂದ ಹೌರಾ-ಕಲ್ಕಾಜಿ ನೇತಾಜಿ ಎಕ್ಸ್‌ಪ್ರೆಸ್‌, ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

==

‘ವಂದೇ ಮಾತರಂ’ಗೆ 150 ವರ್ಷ: ನಾಳೆ 150 ಕಡೆ ಬಿಜೆಪಿ ಕಾರ್ಯಕ್ರಮ

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂಗೆ 150 ವರ್ಷದ ಸಂದರ್ಭದಲ್ಲಿ 150 ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಈ ಎಲ್ಲ ಕಡೆಗಳಲ್ಲಿಯೂ ವಂದೇ ಮಾತರಂ ಗಾಯನ ಮಾಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಪಕ್ಷ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನ.7ರಂದು ದೆಹಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ನ.7ರಿಂದ ಆರಂಭವಾಗಿ 26ರ ಸಂವಿಧಾನ ದಿನದವರೆಗೆ 150 ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮವು ಗಾಯನ, ಕವನ ರಚನೆ, ಚಿತ್ರಕಲಾಸ್ಪರ್ಧೆ ಸೇರಿ ಹಲವು ಚಟುವಟಿಕೆಗಳು ನಡೆಯಲಿವೆ.

1875ರಲ್ಲಿ ಬಂಕಿಂ ಚಂದ್ರ ಚಟ್ಟೋಪಾಧ್ಯಾಯ ಅವರು ವಂದೇ ಮಾತರಂ ರಚಿಸಿದ್ದರು.

==

ಬಂಗಾಳದಲ್ಲಿ ವ್ಯಕ್ತಿ ಆತ್ಮಹತ್ಯೆ: ಮತಪಟ್ಟಿ ಪರಿಷ್ಕರಣೆ ಭೀತಿ ಶಂಕೆ

ಬಿಜೆಪಿ ಪಿತೂರಿಯಿಂದಾಗಿ ಬಡಜನರ ಸಾವು: ಟಿಎಂಸಿ ಕಿಡಿ

ಪಿಟಿಐ ಕೋಲ್ಕತಾಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ವ್ಯಕ್ತಿಯೊಬ್ಬ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರ ಬೆನ್ನಲ್ಲೇ, ಆತ ಚುನಾವಣಾ ಆಯೋಗ ನಡೆಸುತ್ತಿರುವ ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಿಂದ (ಎಸ್‌ಐಆರ್‌) ಭೀತನಾಗಿ ನೇಣಿಗೆ ಶರಣಾಗಿದ್ದಾನೆ ಎಂದು ಆತನ ಪತ್ನಿ ಗಂಭೀರ ಆರೋಪ ಮಾಡಿದ್ದಾಳೆ. ಇದು ರಾಜ್ಯದಲ್ಲಿ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಸಫಿಕುಲ್‌ ಗಾಜಿ ಮೃತ ವ್ಯಕ್ತಿ.‘ನನ್ನ ಪತಿಗೆ ಕೆಲ ತಿಂಗಳ ಹಿಂದೆ ಅಪಘಾತವಾಗಿತ್ತು. ಅಂದಿನಿಂದ ಮಾನಸಿಕ ಅಸ್ವಸ್ಥನಾಗಿದ್ದ. ಮತಪಟ್ಟಿ ಪರಿಷ್ಕರಣೆ ಕುರಿತು ಭಯಗೊಂಡಿದ್ದ. ತನ್ನ ಬಳಿ ಸೂಕ್ತ ದಾಖಲೆಗಳಿಲ್ಲ, ಹಾಗಾಗಿ ನನ್ನನ್ನು ದೇಶದಿಂದ ಹೊರಹಾಕುತ್ತಾರೆ ಎನ್ನುತ್ತಿದ್ದ. ಅದೇ ಭಯದಲ್ಲಿ ನೇಣಿಗೆ ಶರಣಾಗಿದ್ದಾನೆ’ ಎಂದು ಆತನ ಪತ್ನಿ ಆರೋಪಿಸಿದ್ದಾಳೆ.ಬಿಜೆಪಿ ಷಡ್ಯಂತ್ರ- ಟಿಎಂಸಿ ಆರೋಪ:ಈ ನಡುವೆ ಬಿಜೆಪಿ ವಿರುದ್ಧ ಮುಗಿಬಿದ್ದಿರುವ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ, ‘ಮಂಗಳವಾರದವರೆಗೆ ಎಸ್‌ಐಆರ್ ಪ್ರಕ್ರಿಯೆಯ ಭಯದಿಂದ 7 ಜನ ಸಾವನ್ನಪ್ಪಿದ್ದಾರೆ. ಈಗ, ಗಾಜಿ ಆ ಪಟ್ಟಿಗೆ ಸೇರಿದ್ದಾರೆ. ಬಡಜನರನ್ನು ಬೆದರಿಸುವ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುವ ಬಿಜೆಪಿಯ ಪಿತೂರಿಯಿಂದಾಗಿ ಇದು ಸಂಭವಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

==

ನಕಲಿ ವಿಜ್ಞಾನಿಯಿಂದ ಇರಾನ್‌ಗೆ ಅಣುಯೋಜನೆ ಮಾರಾಟ ಯತ್ನ

ಮುಂಬೈ ಪೊಲೀಸರಿಂದ ಸಹೋದರರ ಬಂಧನ

ಲಿಥಿಯಂ-6 ರಿಯಾಕ್ಟರ್‌ ಡಿಸೈನ್‌ ರವಾನೆಗೆ ಪ್ರಯತ್ನ

ಸಂದೇಹ ಬರದಂತೆ ಕ್ಲಿಷ್ಟಕರ ಪದಗಳ ಬಳಕೆ

ವೈಜ್ಞಾನಿಕ, ಸಂಶೋಧನಾ ಪಾಲುದಾರಿಕೆ ನೆಪದಲ್ಲಿ ಕೃತ್ಯ

ಮುಂಬೈ: ಭಾರತದ ಅಣು ಸಂಶೋಧನಾ ಕೇಂದ್ರವಾದ ಬಿಎಆರ್‌ಸಿಯ ವಿಜ್ಞಾನಿಗಳ ಸೋಗಿನಲ್ಲಿ ಇರಾನ್‌ನ ಕಂಪನಿಗೆ ಅಣುಯೋಜನೆಯನ್ನು ಮಾರಲು ಯತ್ನಿಸಿದ ಸಹೋದರರಿಬ್ಬರನ್ನು ಮುಂಬೈ ಹಾಗೂ ದೆಹಲಿ ಪೊಲೀಸರು ಬಂಧಿಸಿದ್ದಾರೆ. ವೈಜ್ಞಾನಿಕ ಸಹಯೋಗ ಹಾಗೂ ಸಂಶೋಧನಾ ಪಾಲುದಾರಿಕೆ ನೆಪದಲ್ಲಿ, 60 ವರ್ಷದ ಅಖ್ತರ್‌ ಹುಸೈನಿ ಕುತ್ಬುದ್ದಿನ್‌ ಅಹ್ಮದ್‌ ಹಾಗೂ ಆತನ ಸಹೋದರ ಆದಿಲ್‌ ಹುಸೈನಿ(59) ಈ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.

ಬಿಎಆರ್‌ಸಿ ವಿಜ್ಞಾನಿಗಳೆಂದು ಬಿಂಬಿಸಿಕೊಂಡು ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಇರಾನ್‌ನ ರಾಜಧಾನಿ ತೆಹ್ರಾನ್‌ಗೆ ಭೇಟಿ ನೀಡಿದ್ದ ಈರ್ವರು, ಭಾರತ ಹಾಗೂ ದುಬೈನಲ್ಲಿರುವ ಇರಾನ್‌ ರಾಯಭಾರ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದರು. ಇದಲ್ಲದೆ, ನಕಲಿ ಆಧಾರ್‌, ಪಾನ್‌ಕಾರ್ಡ್‌ ದಾಖಲೆ ಮತ್ತು ನೀಲನಕ್ಷೆಗಳನ್ನು ತೋರಿಸಿ ಮುಂಬೈನಲ್ಲಿರುವ ಇರಾನ್‌ ರಾಯಭಾರ ಅಧಿಕಾರಿಯನ್ನೂ ವಂಚಿಸಿದ್ದರು ಎನ್ನಲಾಗಿದೆ. ಅವರಿಂದ 10ಕ್ಕೂ ಅಧಿಕ ನಕ್ಷೆಗಳು ಮತ್ತು ಅಣ್ವಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಶಕ್ಕೆ ಪಡೆಯಲಾಗಿದೆ.ನಕಲಿ ಯೋಜನೆಯೇನು?:ಪ್ಲಾಸ್ಮಾ ತಾಪಮಾನವನ್ನು ನಿಯಂತ್ರಿಸಲು ಲಿಥಿಯಂ-6 ಆಧರಿತ ಸಮ್ಮಿಳನ ರಿಯಾಕ್ಟರ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದ್ದ ನಕಲಿ ವಿಜ್ಞಾನಿಗಳು, ವೈಫಲ್ಯವೊಂದರಿಂದಾಗಿ ಲಿಥಿಯಂ-7ರ ಪರೀಕ್ಷೆಯಲ್ಲಿ ಸಳಪವಾಗಲು ಸಾಧ್ಯವಾಗಿರಲಿಲ್ಲ ಎಂದು ಇರಾನ್‌ನ ಕಂಪನಿಗಳ ಬಳಿ ಹೇಳಿದ್ದರು.

ಇವರ ಬಣ್ಣ ಬಯಲಿಗೆಳೆಯಲು ತನಿಖೆಗಿಳಿದ ವಿಜ್ಞಾನಿಗಳಿಗೆ, ಈ ವಂಚಕರು ಹೇಳಿದ ಪ್ರಯೋಗಗಳು ವೈಜ್ಞಾನಿಕವಾಗಿ ಸಿದ್ಧವಾಗದೆ, ಕೇವಲ ಲಿಖಿತ ರೂಪದಲ್ಲಿತ್ತು ಎಂದು ತಿಳಿದುಬಂದಿದೆ. ಜತೆಗೆ, ಈ ಬಗ್ಗೆ ಯಾರಿಗೂ ಸಂದೇಹ ಬರಬಾರದೆಂದು ಕ್ಲಿಷ್ಟಕರ ಪದಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಯೋಜನೆಗಳಿಗೆ ಬದಲಾಗಿದ 1995ರಿಂದ ವಿದೇಶದಿಂದ ಲಕ್ಷಾಂತರ ರು. ದೇಣಿಗೆ ಪಡೆಯುತ್ತಿದ್ದ ಆರೋಪಿಗಳು 2000ರದ ಬಳಿಕ ಕೋಟ್ಯಂತರ ರು. ಪಡೆದಿದ್ದರು.