ಟ್ರಂಪ್‌, ಮೋದಿ ವಿರೋಧಿ ಮಮ್ದಾನಿ ನ್ಯೂಯಾರ್ಕ್‌ ಮೇಯರ್‌

| N/A | Published : Nov 06 2025, 01:45 AM IST

Mamdani
ಟ್ರಂಪ್‌, ಮೋದಿ ವಿರೋಧಿ ಮಮ್ದಾನಿ ನ್ಯೂಯಾರ್ಕ್‌ ಮೇಯರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಠಿಣ ವಲಸೆ ನೀತಿಯ ಗುಂಗಿನಲ್ಲಿ ತೇಲುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿಷ್ಠೆಗೆ ಪೆಟ್ಟು ಬಿದ್ದಿದ್ದು, ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್‌ ನಗರದ ಮೇಯರ್‌ ಚುನಾವಣೆಯಲ್ಲಿ ಭಾರತ ಮೂಲದ ಅಮೆರಿಕನ್ ಜೊಹ್ರಾನ್‌ ಮಮ್ದಾನಿ ಟ್ರಂಪ್‌ ಪಕ್ಷದ ಅಭ್ಯರ್ಥಿಯನ್ನು ಮಣಿಸಿ ಭರ್ಜರಿ ಗೆಲುವು 

  ನ್ಯೂಯಾರ್ಕ್‌ :  ಕಠಿಣ ವಲಸೆ ನೀತಿಯ ಗುಂಗಿನಲ್ಲಿ ತೇಲುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿಷ್ಠೆಗೆ ಪೆಟ್ಟು ಬಿದ್ದಿದ್ದು, ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್‌ ನಗರದ ಮೇಯರ್‌ ಚುನಾವಣೆಯಲ್ಲಿ ಭಾರತ ಮೂಲದ ಅಮೆರಿಕನ್ ಜೊಹ್ರಾನ್‌ ಮಮ್ದಾನಿ ಟ್ರಂಪ್‌ ಪಕ್ಷದ ಅಭ್ಯರ್ಥಿಯನ್ನು ಮಣಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

 ಈ ಮೂಲಕ ನ್ಯೂಯಾರ್ಕ್‌ನ ಮೇಯರ್‌ ಹುದ್ದೆ ಏರಿದ ಮೊದಲ ಮುಸ್ಲಿಂ ಹಾಗೂ ಮೊದಲ ದಕ್ಷಿಣ ಏಷ್ಯನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ (1,37,030 ಮತ), ನ್ಯೂಯಾರ್ಕ್ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ (776,547) ಅವರನ್ನು ಮಮ್ದಾನಿ ಭರ್ಜರಿ 948,202 ಮತಗಳ ಮೂಲಕ ಸೋಲಿಸಿದ್ದಾರೆ.

ಇವರ ಜಯವನ್ನು ಹಿಂದಿಯ ಧೂಂ ಮಚಾಲೆ ಹಾಡಿನೊಂದಿಗೆ ಆಚರಿಸಿದ್ದು ವಿಶೇಷ.

ಮೀರಾ ನಾಯರ್‌ ಪುತ್ರ ಮಮ್ದಾನಿ 

ಮಮ್ದಾನಿ ಭಾರತದಿಂದ ಉಗಾಂಡಾಕ್ಕೆ ವಲಸೆ ಹೋದ ಶಿಕ್ಷಣ ತಜ್ಞ ಮಹಮೂದ್ ಮಮ್ದಾನಿ ಹಾಗು ಖ್ಯಾತ ಭಾರತೀಯ ಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರ. ಹುಟ್ಟಿದ್ದು ಉಗಾಂಡಾದಲ್ಲಿ. ನಂತರ ನ್ಯೂಯಾರ್ಕ್‌ಗೆ ಬಂದು ಅಮೆರಿಕದ ಪ್ರಜೆಯಾಗಿದ್ದಾರೆ.

ಮೋದಿ ವಿರೋಧಿ, ಹಮಾಸ್ ಪರ!

ಮಮ್ದಾನಿ ಈ ಹಿಂದೆ ಪ್ರಧಾನಿ ಮೋದಿ ಬಗ್ಗೆ ಮಾಡಿರುವ ಕಟು ಟೀಕೆಯ ವೀಡಿಯೊವೊಂದು ವೈರಲ್ ಆಗಿತ್ತು. ಅದರಲ್ಲಿ ‘ನನ್ನ ತಂದೆಯ ಕುಟುಂಬದ ಮೂಲ ಗುಜರಾತ್‌. ನನ್ನ ತಂದೆ ಮುಸ್ಲಿಂ, ನಾನೂ ಮುಸ್ಲಿಂ. ಅಲ್ಲಿ ನರೇಂದ್ರ ಮೋದಿ ಮುಸ್ಲಿಮರ ಹತ್ಯಾಕಾಂಡ ನಡೆಸಲು ಪ್ರಯತ್ನಿಸಿದ್ದರು. ಮೋದಿ ಒಬ್ಬ ಯುದ್ಧ ಕ್ರಿಮಿನಲ್‌’ ಎಂದಿದ್ದರು. ಇದೇ ವೇಳೆ ಹಮಾಸ್‌ ಹಾಗೂ ಕೆಲವು ಇಸ್ಲಾಮಿಕ್‌ ಉಗ್ರ ಸಂಘಟನೆಗಳ ಅನುಕಂಪವಾದಿಗಳ ಜತೆ ಕಾಣಿಸಿಕೊಂಡು ಕುಖ್ಯಾತಿ ಪಡೆದಿದ್ದರು.

ಈ ನಡುವೆ, ಮಮ್ದಾನಿ ಜಯಕ್ಕೆ ಮೆಹಬೂಬಾ ಮುಫ್ತಿ, ಶಬಾನಾ ಅಜ್ಮಿ, ಜೋಯಾ ಅಖ್ತರ್‌ ಸೇರಿ ಅನೇಕ ಭಾರತೀಯ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಟ್ರಂಪ್‌ಗೆ ಸವಾಲು, ನೆಹರು ಸ್ಮರಣೆ

ವಾಷಿಂಗ್ಟನ್‌: ವಲಸಿಗರನ್ನು ಹೊರಹಾಕುವೆ ಎಂದಿದ್ದಿರಿ. ಈಗ ವಲಸಿಗನೇ ಮೇಯರ್‌ ಆಗಿದ್ದಾನೆ, ಏನು ಮಾಡ್ತೀರಿ ಎಂದು ತಮ್ಮ ಸೋಲಿಗೆ ಕರೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಜೊಹ್ರಾನ್‌ ಮಮ್ದಾನಿ ಸವಾಲು ಹಾಕಿದ್ದಾರೆ. ಇದೇ ವೇಲೆ, ನೆಹರುವನ್ನೂ ಉಲ್ಲೇಖಿಸಿದ ಮಮ್ದಾನಿ, ‘ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕುತ್ತೇವೆ ಎಂದು ನೆಹರು ಹೇಳಿದ್ದರು. ಈಗ ಅದೇ ರೀತಿ ಆಗುತ್ತಿದೆ’ ಎಂದರು. ಭಾರತವು ಮಧ್ಯರಾತ್ರಿ ಸ್ವಾತಂತ್ರ್ಯ ಪಡೆದಾಗ ನೆಹರು ಈ ಮಾತು ಆಡಿದ್ದರು.

Read more Articles on