ನ.13ರಿಂದ ಪುಟ್ಟಪರ್ತಿ ಸಾಯಿಬಾಬಾ ಜನ್ಮಶತಮಾನೋತ್ಸವ

| Published : Nov 06 2025, 01:45 AM IST

ನ.13ರಿಂದ ಪುಟ್ಟಪರ್ತಿ ಸಾಯಿಬಾಬಾ ಜನ್ಮಶತಮಾನೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶದ ಪುಟ್ಟಪರ್ತಿ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಕಾರಣ ಇಲ್ಲಿಯ ಪ್ರಸಿದ್ಧ ಸಾಯಿ ದೇವಾಲಯದಲ್ಲಿ ನ.13ರಿಂದ ನ.24ರವರೆಗೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.

ಮೋದಿ ಭಾಗಿ, 140 ದೇಶಗಳ ಭಕ್ತರು ಆಗಮನಪುಟ್ಟಪರ್ತಿ: ಆಂಧ್ರಪ್ರದೇಶದ ಪುಟ್ಟಪರ್ತಿ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಕಾರಣ ಇಲ್ಲಿಯ ಪ್ರಸಿದ್ಧ ಸಾಯಿ ದೇವಾಲಯದಲ್ಲಿ ನ.13ರಿಂದ ನ.24ರವರೆಗೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವದ ಸುಮಾರು 140 ದೇಶಗಳ ಭಕ್ತರು ಅಂದು ಆಗಮಿಸುತ್ತಿದ್ದಾರೆ. ಅಲ್ಲದೆ ನ.19ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಬಾಬಾರ ಗೌರವಾರ್ಥ ಅಂಚೆ ಚೀಟಿ, ₹100 ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ನ.22ಕ್ಕೆ ಇಲ್ಲಿಯ ಸತ್ಯ ಸಾಯಿ ಸಂಸ್ಥೆಯ 44ನೇ ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಭಾಗವಹಿಸಲಿದ್ದಾರೆ.

‘ಸಾಯಿ ಮಿಷನ್‌ ಹೆಸರಿನ ಈ ವಿಶೇಷ ಸಮಾರಂಭವು ಸಾಯಿ ಬೋಧನೆಗಳಲ್ಲಿ ಭಕ್ತರು ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಮಾಡುವ ಮೂಲಕ ಹಲವರಿಗೆ ಜೀವಮಾನದ ಸ್ಮರಣೆಯಾಗಿಸುತ್ತದೆ’ ಎಂದು ಶ್ರೀ ಸತ್ಯ ಸಾಯಿ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಆರ್‌.ಜೆ. ರತ್ನಾಕರ್‌ ಪಿಟಿಐಗೆ ಹೇಳಿದ್ದಾರೆ.

==

ಅಮೆರಿಕ ಆರಂಭಿಸಿದರೆ ನಮ್ಮಿಂದಲೂ ಅಣು ಪರೀಕ್ಷೆ: ಪುಟಿನ್‌

ಮಾಸ್ಕೋ: ಅಮೆರಿಕ ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸಿದರೆ ರಷ್ಯಾ ಕೂಡ ಆ ಬಗ್ಗೆ ಪರಿಗಣಿಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಹೇಳಿದ್ದಾರೆ.ಮಾಸ್ಕೋದಲ್ಲಿ ನಡೆದ ಭದ್ರತಾ ಮಂಡಳಿ ಸಭೆಯಲ್ಲಿ ಅವರು ಮಾತನಾಡಿ ಅಮೆರಿಕ ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸುವುದಾಗಿ ಟ್ರಂಪ್‌ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಇದಲ್ಲದೆ, ರಷ್ಯಾದ ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯಗಳು ಮತ್ತು ಭದ್ರತಾ ಸೇವೆಗಳ ಅಧಿಕಾರಿಗಳಿಗೆ ಈ ವಿಷಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳಿಗೆ ಸಿದ್ಧತೆ ಕಾರ್ಯ ಕುರಿತು ಪ್ರಸ್ತಾಪ ಮಾಡಲು ಆದೇಶಿಸಿದ್ದಾರೆ.

==

ವರ್ಜಿನಿಯಾ ಲೆ.ಗವರ್ನರ್‌ ಆಗಿ ಭಾರತೀಯ ಮೂಲದ ಗಜಾಲಾ ಗೆಲುವು

ನವದೆಹಲಿ: ಭಾರತೀಯ ಮೂಲದ ಗಜಾಲಾ ಹಶ್ಮಿ ಅಮೆರಿಕದ ವರ್ಜಿನಿಯಾ ರಾಜ್ಯದ ಲೆಫ್ಟಿನೆಂಟ್‌ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಭಾರತೀಯರಿಗೆ ಈ ಪಟ್ಟ ಸಿಕ್ಕಿದ್ದು ಇದೇ ಮೊದಲು. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ರಿಪಬ್ಲಿಕನ್‌ ಪಕ್ಷದ ಜಾನ್‌ ರೈಡ್‌ ಅವರನ್ನು ಸೋಲಿಸಿ ಈ ಪಟ್ಟವನ್ನು ಪಡೆದಿದ್ದಾರೆ.ಹೈದರಾಬಾದ್‌ ಮೂಲದ ಹಶ್ಮಿ ಅವರು 4ನೇ ವಯಸ್ಸಿನಲ್ಲಿ ತಮ್ಮ ತಾಯಿ ಮತ್ತು ಅಣ್ಣನೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದರು. 1991ರಿಂದ ಸತತ 30 ವರ್ಷಗಳ ಕಾಲ ಹಶ್ಮಿ ಅವರು ರಿಚ್ಮಂಡ್‌ ವಿವಿ ಮತ್ತು ರೆನಾಲ್ಡ್‌ ಸಮುದಾಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅಲ್ಲೇ ಸೆಂಟರ್‌ ಫಾರ್‌ ಲರ್ನಿಂಗ್‌ ಆ್ಯಂಡ್‌ ಟೀಚಿಂಗ್‌ ಆರಂಭಿಸಿದ್ದಾರೆ. 2019ರಿಂದ ಸಕ್ರಿಯ ರಾಜಕಾರಣಕ್ಕೆ ಬಂದ ಇವರು ಈಗ ಲೆಫ್ಟಿನೆಂಟ್‌ ಗವರ್ನರ್‌ ಆದ ಮೊದಲ ಮುಸ್ಲಿಂ ಮಹಿಳೆಯಾಗಿದ್ದಾರೆ.

==

ಮಾರಾಟದಲ್ಲಿ 3 ಕೋಟಿ ಗಡಿ ದಾಟಿದ ಮಾರುತಿ ಕಾರು!

ನವದೆಹಲಿ: ದೇಶದ ಅಗ್ರಗಣ್ಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ದೇಶದಲ್ಲಿ ಈವರೆಗೆ 3 ಕೋಟಿ ಕಾರುಗಳನ್ನು ಮಾರಿದೆ1983ರಲ್ಲಿ ಮಾರಾಟ ಆರಂಭಿಸಿದ ಮಾರುತಿ-ಸುಜುಕಿ 28 ವರ್ಷ 2 ತಿಂಗಳಲ್ಲಿ 1 ಕೋಟಿ, ನಂತರ 7 ವರ್ಷ 5 ತಿಂಗಳಲ್ಲಿ 1 ಕೋಟಿ, ಇದಾದನಂತರ ಕೇವಲ 6 ವರ್ಷ 4 ತಿಂಗಳಲ್ಲಿ 1 ಕೋಟಿ ಕಾರುಗಳು ಮಾರಾಟವಾಗಿವೆ.

3 ಕೋಟಿಯಲ್ಲಿ ಆಲ್ಟೋ ಮಾಡೆಲ್‌ 47 ಲಕ್ಷ ಮಾರಾಟವಾಗಿದ್ದು, ಹೆಚ್ಚು ಜನಪ್ರಿಯವಾಗಿದೆ. ಇದರ ನಂತರದಲ್ಲಿ ವ್ಯಾಗನ್‌ ಆರ್‌ 34 ಲಕ್ಷ, ಸ್ವಿಫ್ಟ್‌ 32 ಲಕ್ಷ ಕಾರುಗಳು ಮಾರಾಟವಾಗಿವೆ. ಮಾರುತಿ ಕಂಪನಿಯು 1983ರ ಡಿ.14ರಂದು ಮೊದಲ ಕಾರು ಡೆಲಿವರಿ ಮಾಡಿತ್ತು.

==

ಖಾನ್‌ಗಳು ಮುಂಬೈ ಮೇಯರ್‌ ಆಗಲು ಬಿಡಲ್ಲ: ಬಿಜೆಪಿಗ

ಮುಂಬೈ: ಯಾವುದೇ ಖಾನ್ ಮುಂಬೈ ಮೇಯರ್ ಆಗಲು ಬಿಡುವುದಿಲ್ಲ ಎಂದು ಮುಂಬೈ ಬಿಜೆಪಿ ಮುಖ್ಯಸ್ಥ ಅಮಿತ್ ಸತಮ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಮಮ್ದಾನಿ ಎಂಬ ಮುಸ್ಲಿಂ ವ್ಯಕ್ತಿ ನ್ಯೂಯಾರ್ಕ್‌ ಮೇಯರ್‌ ಆದ ಬೆನ್ನಲ್ಲೇ ಸತಮ್‌ ಈ ವಿವಾದಿತ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕೆಲವು ಜನರು, ‘ಖಾನ್ ಮುಂಬೈ ಮೇಯರ್ ಆದರೆ ಏನು ಸಮಸ್ಯೆ, ಜನರು ಉಪನಾಮವಲ್ಲ ಬದಲಾವಣೆ ಬಯಸುತ್ತಾರೆ’ ಎಂದು ಚಾಟಿ ಬೀಸಿದ್ದಾರೆ.

==

‘ವಂದೇ ಮಾತರಂ’ಗೆ 150 ವರ್ಷ: ನಾಳೆ 150 ಕಡೆ ಬಿಜೆಪಿ ಕಾರ್ಯಕ್ರಮ

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂಗೆ 150 ವರ್ಷದ ಸಂದರ್ಭದಲ್ಲಿ 150 ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಈ ಎಲ್ಲ ಕಡೆಗಳಲ್ಲಿಯೂ ವಂದೇ ಮಾತರಂ ಗಾಯನ ಮಾಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಪಕ್ಷ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನ.7ರಂದು ದೆಹಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ನ.7ರಿಂದ ಆರಂಭವಾಗಿ 26ರ ಸಂವಿಧಾನ ದಿನದವರೆಗೆ 150 ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮವು ಗಾಯನ, ಕವನ ರಚನೆ, ಚಿತ್ರಕಲಾಸ್ಪರ್ಧೆ ಸೇರಿ ಹಲವು ಚಟುವಟಿಕೆಗಳು ನಡೆಯಲಿವೆ.

1875ರಲ್ಲಿ ಬಂಕಿಂ ಚಂದ್ರ ಚಟ್ಟೋಪಾಧ್ಯಾಯ ಅವರು ವಂದೇ ಮಾತರಂ ರಚಿಸಿದ್ದರು.