ಸಾರಾಂಶ
ನಮ್ಮ ಸಂಸ್ಥೆಗಳಲ್ಲಿ ಮಕ್ಕಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಎಲ್ಲರೂ ತಮಗೆ ಆದ ರೀತಿಯಲ್ಲಿ ತನು, ಮನ, ಧನದಿಂದ ಈ ಸೇವಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ಮಾಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ದೊಡ್ಡ ಬದಲಾವಣೆ ತರುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ನುಡಿದರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದ ''''ಈಚ್ ಒನ್ ಎಜುಕೇಟ್ ಒನ್ ಫೌಂಡೇಶನ್'''' ವಾರ್ಷಿಕೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿ, ಕಳೆದ ಏಳೆಂಟು ವರ್ಷಗಳಲ್ಲಿ ನಾವು ಬಹಳ ದೂರ ಬಂದಿದ್ದೇವೆ. ನಮ್ಮ ಕುಟುಂಬ ವಿಶಾಲವಾಗುತ್ತಲೇ ಇದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಂಸ್ಥೆಯ ಎಲ್ಲ ಕಾರ್ಯಗಳ ಹಿಂದೆ ಲಕ್ಷಾಂತರ ಮಂದಿಯ ಕಠಿಣ ಪರಿಶ್ರಮವಿದೆ. ಹಳೆಯ ವಿದ್ಯಾರ್ಥಿಗಳು ಮರಳಿ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಸುಸ್ಥಿರ ಮಾದರಿ ರೂಪುಗೊಳ್ಳಲು ಸಾಧ್ಯ. ಇಲ್ಲಿ ನಾವು ಯಾವುದೇ ಮ್ಯಾಜಿಕ್ ಮಾಡುತ್ತಿಲ್ಲ. ಮಕ್ಕಳೊಂದಿಗೆ ನನಗೆ ಇರುವ ಪ್ರೀತಿಯನ್ನು ಮಾತುಗಳಲ್ಲಿ ವಿವರಿಸಲೂ ಸಾಧ್ಯವಿಲ್ಲ ಎಂದರು.ನಮ್ಮ ಸಂಸ್ಥೆಗಳಲ್ಲಿ ಮಕ್ಕಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಎಲ್ಲರೂ ತಮಗೆ ಆದ ರೀತಿಯಲ್ಲಿ ತನು, ಮನ, ಧನದಿಂದ ಈ ಸೇವಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ಮಾಡಿದರು.
ಪ್ರಶಾಂತಿ ಬಾಲಮಂದಿರದ ಟ್ರಸ್ಟಿ ಮತ್ತು ಆಡಳಿತ ವ್ಯವಸ್ಥಾಪಕರಾದ ಕೃಷ್ಣಾ ಸುಭಗ ಮತ್ತು ಸತ್ಯ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯ ಮುಖ್ಯ ಹಣಕಾಸು ಅಧಿಕಾರಿ ಅಶಿಮಾವೊ ದತ್ತ ಅವರಿಗೆ ''''ಶ್ರೀ ಸತ್ಯ ಸಾಯಿ ಅಲ್ಯೂಮಿನಿ ಎಕ್ಸಲೆನ್ಸ್'''' ಪುರಸ್ಕಾರ ನೀಡಿ ಗೌರವಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಪ್ರಿಯಾಂಕಾ ಎಂ., ಡಾ. ಪಣೀಂದ್ರ, ಡಾ. ರೇವತಿ ರಾಮಚಂದ್ರನ್, ಡಾ. ಜೆ.ಜಿ.ಶ್ರೀಧರ್, ರಂಜನಿ ಸತ್ಯನ್, ಸಿದ್ದರಾಮ್ ನಾಗೂರ್ ತಮ್ಮ ಅನುಭವವನ್ನು ಹಂಚಿಕೊಂಡರು.ಸಂಜೆ ನಡೆದ ಕಾರ್ಯಕ್ರಮದಲ್ಲಿ ''''ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್''''ನ ಹಿರಿಯ ಉಪಾಧ್ಯಕ್ಷರು ಮತ್ತು ಜಾಗತಿಕ ಮುಖ್ಯಸ್ಥರಾದ ಚಿತ್ರ ಬೈರೇಗೌಡ ಹಾಗೂ ಫಸ್ಟ್ ಸೋರ್ಸ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕ ರಾಜೇಶ್ ಕುಮಾರ್, ಅರ್ಚನಾ ರಾಜೇಶ್ ಅವರಿಗೆ ''''ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ'''' ನೀಡಿ ಗೌರವಿಸಲಾಯಿತು.