ರಾಗಾ ಆರೋಪ ಸುಳ್ಳು, ಆಧಾರರಹಿತ: ಚು.ಆಯೋಗ

| Published : Nov 06 2025, 01:45 AM IST

ಸಾರಾಂಶ

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮತಗಳವು ನಡೆಸಲಾಗಿದೆ ಎಂಬ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪವನ್ನು ಚುನಾವಣಾ ಆಯೋಗ ಮತ್ತು ಬಿಜೆಪಿ ಸ್ಪಷ್ಟವಾಗಿ ತಳ್ಳಿಹಾಕಿವೆ. ‘ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಬೂತ್‌ ಏಜೆಂಟರು ಯಾಕೆ ಮತದಾರರ ಪಟ್ಟಿ ಹಾಗೂ ಒಂದಕ್ಕಿಂತ ಹೆಚ್ಚಿನ ಮತದಾನ ಬಗ್ಗೆ ಆಕ್ಷೇಪ ಎತ್ತಲಿಲ್ಲ?’ ಎಂದು ಚುನಾವಣಾ ಆಯೋಗ ಪ್ರಶ್ನಿಸಿದೆ.

ಕಾಂಗ್ರೆಸ್‌ ಬೂತ್‌ ಏಜೆಂಟರು ಯಾಕೆ ಪ್ರಶ್ನಿಸಲಿಲ್ಲ?

ಒಂದೇ ದಿನ ಒಬ್ಬಳೇ 22 ಕಡೆ ಮತ ಹೇಗೆ ಹಾಕ್ತಾಳೆ?: ಆಯೋಗ

ಕೋರ್ಟ್‌ಗೆ ಯಾಕೆ ರಾಹುಲ್‌ ಹೋಗಿಲ್ಲ?: ಬಿಜೆಪಿ

ಪಿಟಿಐ ನವದೆಹಲಿ

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮತಗಳವು ನಡೆಸಲಾಗಿದೆ ಎಂಬ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪವನ್ನು ಚುನಾವಣಾ ಆಯೋಗ ಮತ್ತು ಬಿಜೆಪಿ ಸ್ಪಷ್ಟವಾಗಿ ತಳ್ಳಿಹಾಕಿವೆ. ‘ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಬೂತ್‌ ಏಜೆಂಟರು ಯಾಕೆ ಮತದಾರರ ಪಟ್ಟಿ ಹಾಗೂ ಒಂದಕ್ಕಿಂತ ಹೆಚ್ಚಿನ ಮತದಾನ ಬಗ್ಗೆ ಆಕ್ಷೇಪ ಎತ್ತಲಿಲ್ಲ?’ ಎಂದು ಚುನಾವಣಾ ಆಯೋಗ ಪ್ರಶ್ನಿಸಿದೆ.

ರಾಹುಲ್ ಅವರದು ಆಧಾರರಹಿತ ಮತ್ತು ಸುಳ್ಳು ಆರೋಪ ಎಂದು ಬಿಜೆಪಿ ಹೇಳಿದೆ.

ಆಧಾರಹಿತ ಆರೋಪ-ಆಯೋಗ:

‘2024ರಲ್ಲಿ ಚುನಾವಣೆ ನಡೆದಾಗ ಹರ್ಯಾಣ ಮತದಾರರ ಪಟ್ಟಿ ಕುರಿತು ಕಾಂಗ್ರೆಸ್‌ ಯಾವುದೇ ಆಕ್ಷೇಪ ಎತ್ತಿರಲಿಲ್ಲ. ಈಗ ಏಕೆ ಎತ್ತುತ್ತಿದೆ?’ ಸ್ಪಷ್ಟಪಡಿಸಿದೆ.

‘ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚಿನ ಬಾರಿ ಹೆಸರು ಪ್ರಕಟವಾಗಿರುವ ಕುರಿತು ಕಾಂಗ್ರೆಸ್‌ನ ಬೂತ್‌ ಏಜೆಂಟರು ಯಾಕೆ ಆ ಸಂದರ್ಭದಲ್ಲಿ ಆಕ್ಷೇಪ ಎತ್ತಲಿಲ್ಲ? ಮತದಾರರ ಪಟ್ಟಿ ಕುರಿತು ಆಗ ಯಾಕೆ ಪ್ರಶ್ನೆ ಮಾಡಲಿಲ್ಲ? ಮತದಾನ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಪಕ್ಷದ ಏಜೆಂಟರು ಏನು ಮಾಡುತ್ತಿದ್ದರು? ಎರಡನೇ ಬಾರಿ ಮತದಾನ ಅಥವಾ ಮತದಾರರ ಕುರಿತು ಅನುಮಾನಗಳಿದ್ದರೆ ಅವರು ಆಕ್ಷೇಪ ಎತ್ತಲು ಅ‍ಕಾಶವಿತ್ತು’ ಎಂದು ಹೇಳಿದೆ.’ಅಲ್ಲದೆ, ಒಬ್ಬಳು ಒಂದೇ ದಿನದಲ್ಲಿ 22 ಸಲ ಮತದಾನ ಮಾಡಿದ್ದಾಳೆ ಎಂದು ರಾಹುಲ್‌ ಆರೋಪಿಸಿದ್ದಾರೆ. ಅದು ಹೇಗೆ ಸಾಧ್ಯ? ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಕೂಡ 2 ಮತದಾರ ಚೀಟಿ ಹೊಂದಿದ್ದರು. ಹಾಗಿದ್ದರೆ ಅವರು 2 ಕಡೆ ಮತದಾನ ಮಾಡಿದಂತೆಯೇ?’ ಎಂದು ಆಯೋಗ ಪ್ರಶ್ನಿಸಿದೆ.ಬಿಜೆಪಿ ಕಿಡಿ:

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಮಾತನಾಡಿ, ‘ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ದೇಶದ ಪ್ರಜಾಪ್ರಭುತ್ವದ ಹೆಸರು ಕೆಡಿಸಲು ರಾಹುಲ್‌ ಗಾಂಧಿ ಯತ್ನಿಸುತ್ತಿದ್ದಾರ. ಭಾರತ ವಿರೋಧಿ ಶಕ್ತಿಗಳೊಂದಿಗೆ ಸೇರಿಕೊಂಡು ಆಟ ಆಡುತ್ತಿದ್ದಾರೆ. ಈ ಮೂಲಕ ದೇಶದ ಹೆಸರು ಹಾಳು ಮಾಡಲೆತ್ನಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನಸಾಮಾನ್ಯರನ್ನು ಭೇಟಿಯಾಗುವ ಬದಲು ವಿದೇಶಕ್ಕೆ ತೆರಳುತ್ತಾರೆ, ನಂತರ ಪಕ್ಷ ಸೋತಾಗ ಅಕ್ರಮದ ಆರೋಪ ಮಾಡುತ್ತಾರೆ’ ಎಂದು ಕಿಡಿಕಾರಿದರು.

‘ಒಂದು ವೇಳೆ ಮತದಾನದಲ್ಲಿ ಯಾವುದೇ ಅಕ್ರಮ ನಡೆದಿದ್ದರೆ ಚುನಾವಣಾ ಆಯೋಗ ಅಥವಾ ಕೋರ್ಟ್‌ ಮಂದೆ ಹೋಗಬಹುದು. ಆದರೆ, ರಾಹುಲ್‌ ಗಾಂಧಿ ಯಾವತ್ತೂ ಆ ರೀತಿ ಮಾಡುವುದಿಲ್ಲ’ ಎಂದರು.

ಇಟಲಿ ಮಹಿಳೆ ಮತ ಹಾಕಿದ್ದಾರೆ-ರಾಧಿಕಾ:

‘ಹಿಂದೂಸ್ತಾನದಲ್ಲಿ ''''ಇಟಾಲಿಯನ್'''' ಮಹಿಳೆಯೊಬ್ಬರು ಮತ ಚಲಾಯಿಸಿದ್ದಾರೆ. ನಿಮಗೆ ಅವರ ಹೆಸರು ತಿಳಿದಿದೆಯೇ? ಎಂದು ಬಿಜೆಪಿ ವಕ್ತಾರೆ ರಾಧಿಕಾ ಖೇರಾ ಪ್ರಶ್ನಿಸಿದ್ದಾರೆ.

ಹರ್ಯಾಣ ಸಿಎಂ ನಯಾಬ್‌ ಸಿಂಗ್‌ ಸೈನಿ ಕೂಡ ರಾಹುಲ್‌ ಆರೋಪ ಸುಳ್ಳು ಎಂದಿದ್ದಾರೆ.