ಸಾರಾಂಶ
ನವದೆಹಲಿ: ವಿವಿಧ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದೆಹಲಿ ಚಲೋ ಆರಂಭಿಸಿರುವ ಪಂಜಾಬ್ ಮತ್ತು ಹರ್ಯಾಣ ರೈತರು ಭಾರೀ ಪೂರ್ವ ತಯಾರಿಯೊಂದಿಗೆ ರಾಜಧಾನಿಯತ್ತ ಹೊರಟಿದ್ದಾರೆ.
ಪಡಿತರ ಸೇರಿದಂತೆ 6 ತಿಂಗಳಿಗಾಗುಷ್ಟು ಸರಕಿನೊಂದಿಗೆ ದೆಹಲಿಯತ್ತ ಹೊರಟಿದ್ದಾರೆ. 3 ವರ್ಷಗಳ ಹಿಂದೆ ದೆಹಲಿಯಲ್ಲಿ ಸುದೀರ್ಘ ಕಾಲ ನಡೆದ ರೀತಿಯಲ್ಲೇ ಮತ್ತೊಂದು ಬೃಹತ್ ಹೋರಾಟಕ್ಕೆ ಅವರು ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ.
ಹೊಸ ಮಾರ್ಗ: ಪಂಜಾಬ್ ಮತ್ತು ಹರ್ಯಾಣದಿಂದ ದೆಹಲಿಗೆ ಬರುವ ಎಲ್ಲಾ ಪ್ರಮುಖ ರಸ್ತೆಗಳನ್ನು ಮುಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ವಾಹನಗಳು ಹೆಚ್ಚು ಸಾಗದ ಮಾರ್ಗ ಮತ್ತು ಹೆಚ್ಚಿನ ಜನಬಳಕೆಯ ಇಲ್ಲದ ಮಾರ್ಗಗಳ ಮೂಲಕ ದೆಹಲಿ ಪ್ರವೇಶಕ್ಕೆ ರೈತರು ಯತ್ನಿಸುತ್ತಿದ್ದಾರೆ.
2000 ವಾಹನ: 200ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು 20-25 ಸಾವಿರ ರೈತರು ದೆಹಲಿ ಪ್ರವೇಶಕ್ಕೆ ಸಜ್ಜಾಗಿದ್ದಾರೆ.
ಇವರನ್ನು ಕರೆತರಲು 1500 ಟ್ರ್ಯಾಕ್ಟರ್ ಮತ್ತು 500 ವಾಹನಗಳನ್ನು ಸಜ್ಜುಗೊಳಿಸಲಾಗಿದೆ. ಜೊತೆಗೆ ಈ ವಾಹನಗಳನ್ನು ರೈತರು ಮಲಗಲು, ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ.
6 ತಿಂಗಳಿಗಾಗುವಷ್ಟು ಸರಕು: ಸಾವಿರಾರು ರೈತರು ದೆಹಲಿಯಲ್ಲೇ ಠಿಕಾಣಿ ಹೂಡಬೇಕಾಗಿ ಬಂದರೆ 6 ತಿಂಗಳಿಗೆ ಬೇಕಾಗುವಷ್ಟು ಪಡಿತರ, ಅಡುಗೆ ಸಾಮಾನು, ಪರಿಕರಗಳು, ವಿಶ್ರಾಂತಿಗೆ ಬೇಕಾಗುವ ವಸ್ತುಗಳನ್ನು ವಾಹನಗಳಲ್ಲಿ ತರಲಾಗುತ್ತಿದೆ.
ಗುರುದ್ವಾರಗಳಲ್ಲಿ ಆಶ್ರಯ: ಪ್ರತಿಭಟನೆಗೆ ಮೊದಲು, ಪ್ರತಿಭಟನೆ ದಿನ ಮತ್ತು ನಂತರದ ದಿನಗಳಲ್ಲಿ ಸಣ್ಣ ಗುಂಪುಗಳಲ್ಲಿ ಪ್ರತ್ಯೇಕವಾಗಿ ದೆಹಲಿಗೆ ಆಗಮಿಸಿ ಅಲ್ಲಿನ ಗುರುದ್ವಾರ, ಆಶ್ರಮ, ಧರ್ಮಶಾಲೆ, ಗೆಸ್ಟ್‌ಹೌಸ್‌ಗಳಲ್ಲಿ ಉಳಿದುಕೊಂಡು ಬಳಿಕ ಒಂದಾಗಿ ಹೋರಾಟ ನಡೆಸುವ ಯೋಜನೆಯನ್ನು ರೈತ ಸಮುದಾಯ ರೂಪಿಸಿದೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಕಲೆ ಹಾಕಿದೆ.
ದಿಲ್ಲಿಯಲ್ಲಿ ಭಾರಿ ಟ್ರಾಫಿಕ್ ಜಾಂ, ಸವಾರರು ಹೈರಾಣ: ಪಂಜಾಬ್ ಹಾಗೂ ಹರ್ಯಾಣ ರೈತರ ದಿಲ್ಲಿ ಚಲೋ ಪ್ರತಿಭಟನೆಗೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿದ್ದು, ವಾಹನ ಸವಾರರು ಗಂಟೆ ಗಟ್ಟಲೇ ವಾಹನ ದಟ್ಟಣೆಯಲ್ಲಿ ಕಳೆದರು.
ದೆಹಲಿಯ ಸಿಂಘು, ತಿಕ್ರಿ ಹಾಗೂ ಘಾಜಿಪುರ ಗಡಿಗಳನ್ನು ರೈತರ ಪ್ರವೇಶ ನಿರ್ಬಂಧಿಸುವ ಉದ್ದೇಶದಿಂದ ಪೊಲೀಸರು ಬಂದ್ ಮಾಡಿದ ಕಾರಣ ವಾಹನಗಳ ಸಂಚಾರ ತೀರ ಕಷ್ಟವಾಗಿತ್ತು.
ರೈತರ ಪ್ರತಿಭಟನೆಯಿಂದಾಗಿ ಹೈರಾಣಾಗಿದ್ದ ಸವಾರರೊಬ್ಬರು ಮಾತನಾಡಿ,‘ಬೆಳಗ್ಗೆ 6 ಗಂಟೆಯಿಂದ ರಸ್ತೆಯಲ್ಲಿಯೇ ಇದ್ದೇವೆ ಆದರೆ ಗಂಟೆ 9 ಆದರೂ ಇನ್ನೂ ಗಮ್ಯ ಸ್ಥಳ ತಲುಪಿಲ್ಲ. ಪ್ರ
ತಿಭಟನೆ ಇರುವುದು ತಿಳಿದು ಬೇಗ ಬಿಟ್ಟರೂ ಅರ್ಧ ದಾರಿಯನ್ನೂ ತಲುಪಿಲ್ಲ’ಎಂದು ಅಳಲು ತೋಡಿಕೊಂಡರು. ಈ ಮೊದಲು ರೈತರ ಪ್ರತಿಭಟನೆ ಕಾರಣ ಇಲ್ಲಿನ ಪೊಲೀಸರು ಮೆಟ್ರೋ ಬಳಸುವಂತೆ ಸಾರ್ವಜನಿಕರಿಗೆ ಕೋರಿದ್ದರು.
ದಿಲ್ಲಿಯಲ್ಲಿ ಕೆಂಪು ಕೋಟೆ ಬಂದ್: ಪಂಜಾಬ್ ಹಾಗೂ ಹರ್ಯಾಣ ರೈತರು ನಡೆಸುತ್ತಿರುವ ದಿಲ್ಲಿ ಚಲೋ ಪ್ರತಿಭಟನೆ ಅಂಗವಾಗಿ ದೆಹಲಿಯ ವಿಶ್ವ ಪಾರಂಪರಿಕ ತಾಣ ಕೆಂಪು ಕೋಟೆಯನ್ನು ಪುರಾತತ್ವ ಇಲಾಖೆ ತಾತ್ಕಾಲಿಕವಾಗಿ ಬಂದ್ ಮಾಡಿದೆ.
ಇದಲ್ಲದೆ, ಸಂಸತ್ ಭವನ ಸೇರಿ ಆಯಕಟ್ಟಿನ ಸ್ಥಳಗಳಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ.
2020-21ರಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಅದರ ಮೇಲೆ ಖಲಿಸ್ತಾನಿ ಬಾವುಟ ಹಾರಿಸಿದ್ದರು.
ಈ ಬಾರಿ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಸೋಮವಾರ ತಡರಾತ್ರಿ ಕೋಟೆಯನ್ನು ಬಂದ್ ಮಾಡಲಾಗಿದೆ.
ಜೊತೆಗೆ ಕೋಟೆ ಸುತ್ತಲು ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಭದ್ರತಾ ಸಿಬ್ಬಂದಿಗಳ ಮುಂದಿನ ಆದೇಶದವರೆಗೆ ಬಾಗಿಲು ಬಂದ್ ಆಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಪ್ರತಿಭಟನೆ ಭೀತಿಯಿಂದ 9 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ದ್ವಾರ ಮುಚ್ಚಿ ಒಂದೇ ದ್ವಾರದಲ್ಲಿ ಪ್ರಯಾಣಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸಲು ಕೇಜ್ರಿವಾಲ್ ನಕಾರ: ದೆಹಲಿಯಲ್ಲಿ ಪ್ರತಿಭಟನೆ ಬರುತ್ತಿರುವ ರೈತರನ್ನು ಬಂಧಿಸಿ ಸ್ಟೇಡಿಯಂನಲ್ಲಿ ಇರಿಸುವಂತೆ ಕೋರಿದ್ದ ಕೇಂದ್ರ ಸರ್ಕಾರದ ಮನವಿಯನ್ನು ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ತಿರಸ್ಕರಿಸಿದೆ.
ಕೇಂದ್ರ ಸರ್ಕಾರದ ಮನವಿಗೆ ಪ್ರತಿಕ್ರಿಯಿಸಿದ ದೆಹಲಿ ಗೃಹ ಸಚಿವ ಕೈಲಾಶ್ ಗೆಹ್ಲೋಟ್,‘ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ಹತ್ತಿಕಲು ಯತ್ನಿಸುತ್ತಿದೆ.
ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ರೈತರು ಅನ್ನದಾತರು, ಅವರನ್ನು ಬಂಧಿಸಿದರೆ ಗಾಯದ ಮೇಲೆ ಉಪ್ಪು ಸುರಿದಂತಾಗುತ್ತದೆ. ನಾವು ಕೇಂದ್ರ ಮನವಿಯನ್ನು ತಿರಸ್ಕರಿಸುತ್ತೇವೆ. ರೈತರು ಇರಿಸಿರುವ ಬೇಡಿಕೆ ಸರಿಯಾಗಿದೆ. ರೈತರ ಪ್ರತಿಭಟನೆಗೆ ಆಪ್ ಬೆಂಬಲಿಸುತ್ತದೆ’ ಎಂದಿದ್ದಾರೆ.