ಗುಜರಾತಿಗಳು ಕೇಡಿಗಳು: ಹೇಳಿಕೆ ಹಿಂಪಡೆದ ತೇಜಸ್ವಿ ಯಾದವ್‌

| Published : Feb 14 2024, 02:17 AM IST / Updated: Feb 17 2024, 11:24 AM IST

ಸಾರಾಂಶ

‘ಗುಜರಾತಿಗಳು ಕೇಡಿಗಳು’ ಎಂದು ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿ ಮಾಡಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ತಮ್ಮ ಹೇಳಿಕೆ ಹಿಂಪಡೆದಿದ್ದಾರೆ.

ನವದೆಹಲಿ: ‘ಗುಜರಾತಿಗಳು ಕೇಡಿಗಳು’ ಎಂದು ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿ ಮಾಡಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. 

ಹೀಗಾಗಿ ತೇಜಸ್ವಿ ಹೇಳಿಕೆ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

‘ಅರ್ಜಿದಾರರು ತಮ್ಮ ಹೇಳಿಕೆಯನ್ನು ದಾಖಲೆಯ ಮುಖಾಂತರ ಹಿಂಪಡೆದಿರುವ ಹಿನ್ನೆಲೆಯಲ್ಲಿ ನಾವು ಪ್ರಕರಣವನ್ನು ರದ್ದುಗೊಳಿಸಿದ್ದೇವೆ’ ಎಂದು ಪೀಠ ಹೇಳಿದೆ. 

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಗುಜರಾತ್‌ ಹೊರತಾದ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ತೇಜಸ್ವಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಪೀಠ ನಡೆಸುತ್ತಿತ್ತು.

ಈ ವೇಳೆ ಸುಪ್ರೀಂ ಕೋರ್ಟು, ಯಾದವ್ ಅವರಿಗೆ ‘ಗುಜರಾತಿಗಳು ಮಾತ್ರ ಕೇಡಿಗಳು’ ಎಂಬ ಹೇಳಿಕೆ ಹಿಂತೆಗೆದುಕೊಂಡು ‘ಸರಿಯಾದ ಹೇಳಿಕೆ’ ಸಲ್ಲಿಸುವಂತೆ ಸೂಚಿಸಿತ್ತು. 

ಜ.19 ರಂದು ಯಾದವ್ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. 

ಮಾರ್ಚ್‌ 2023ರಲ್ಲಿ ಬಿಹಾರದ ಪಟನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಯಾದವ್‌ ‘ಈಗಿನ ಪರಿಸ್ಥಿತಿಯಲ್ಲಿ ಗುಜರಾತಿಗಳು ಮಾತ್ರ ಕೇಡಿಗಳಗಬಹುದು ಮತ್ತು ಅವರ ವಂಚನೆಯನ್ನು ಕ್ಷಮಿಸಲಾಗುವುದು. 

ಎಲ್‌ಐಸಿ ಅಥವಾ ಬ್ಯಾಂಕ್‌ಗಳಿಗೆ ಸೇರಿದ ಹಣವನ್ನು ತೆಗೆದುಕೊಂಡು ಓಡಿಹೋದರೆ ಯಾರು ಹೊಣೆ?’ ಎಂದಿದ್ದರು.