ಭಾರತ ಮೇಲೆ ದಾಳಿಗೆ ಬಳಸುತ್ತಿದ್ದ ಪಾಕ್‌ನ 8 ವಾಯು ನೆಲೆಗಳೇ ಧ್ವಂಸ

| N/A | Published : May 11 2025, 04:34 AM IST

Pakistan violated ceasefire
ಭಾರತ ಮೇಲೆ ದಾಳಿಗೆ ಬಳಸುತ್ತಿದ್ದ ಪಾಕ್‌ನ 8 ವಾಯು ನೆಲೆಗಳೇ ಧ್ವಂಸ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಹಾಗೂ ಪಾಕಿಸ್ತಾನದ ನಡುವೆ ಸಮರ ಮತ್ತೊಂದು ಹಂತ ತಲುಪಿದ್ದು,- ಪಾಕಿಸ್ತಾನದಿಂದ ಭಾರತದ 4 ವಾಯುನೆಲೆಗಳ ಮೇಲೆ ದಾಳಿ ಯತ್ನ ನಡೆದಿದೆ.

 ನವದೆಹಲಿ/ಲಾಹೋರ್‌ : ಭಾರತ ಹಾಗೂ ಪಾಕಿಸ್ತಾನದ ನಡುವೆ ಸಮರ ಮತ್ತೊಂದು ಹಂತ ತಲುಪಿದ್ದು,- ಪಾಕಿಸ್ತಾನದಿಂದ ಭಾರತದ 4 ವಾಯುನೆಲೆಗಳ ಮೇಲೆ ದಾಳಿ ಯತ್ನ ನಡೆದಿದೆ. ಆದರೆ ಇದನ್ನು ಹಿಮ್ಮೆಟ್ಟಿಸಿರುವ ಭಾರತ. ನಂತರ 8 ವಾಯುನೆಲೆಗಳ ಮೇಲೆ ಭಾರತದ ಪ್ರತಿದಾಳಿ ನಡೆಸಿ ಭಾರಿ ಹಾನಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಗುಜರಾತ್‌, ರಾಜಸ್ಥಾನದ ಜನವಸತಿ ಪ್ರದೇಶ ಗುರಿಯಾಗಿಸಿಕೊಂಡು ಪಾಕಿಸ್ತಾನ ಶುಕ್ರವಾರ ರಾತ್ರಿ ನಡೆಸಿದ ಅಪ್ರಚೋದಿತ ದಾಳಿ ನಡೆಸಿತ್ತು. ಬಳಿಕವೂ ನಸುಕಿನ ಜಾವ ಭಾರತದ 4 ವಾಯು ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ವಾಯುನೆಲೆ ಹಾಗೂ ಏರ್‌ಫೀಲ್ಡ್‌ಗಳು ಸೇರಿ ಎಂಟು ಕಡೆ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಬಳಸಿ ಪ್ರತಿ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್‌ನ ವಾಯುನೆಲೆಗಳಿಗೆ ತೀವ್ರ ಹಾನಿಯಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

ದಾಳಿಯ ತೀವ್ರತೆಗೆ ಪಾಕಿಸ್ತಾನದ ಒಂದೆರಡು ಏರ್‌ಬೇಸ್‌ಗಳಲ್ಲಿ ಭಾರೀ ಕಂದಕ ನಿರ್ಮಾಣವಾಗಿದ್ದು, ಸದ್ಯಕ್ಕೆ ಅಲ್ಲಿಂದ ವಿಮಾನಗಳನ್ನು ಹಾರಿಸುವ ಪರಿಸ್ಥಿತಿ ಇಲ್ಲ ಎಂದು ಹೇಳಲಾಗಿದೆ.

ಬ್ಯಾಲಿಸ್ಟಿಕ್‌ ಕ್ಷಿಪಣಿ ಬಳಸಿ ದಾಳಿ:

ಪಾಕಿಸ್ತಾನ ನೂರಾರು ಡ್ರೋನ್‌ಗಳು ಹಾಗೂ 6 ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಬಳಸಿ ಭಾರತದ ಮೇಲೆ ಇಡೀ ರಾತ್ರಿ ದಾಳಿ ನಡೆಸಿತ್ತು. ಇದಕ್ಕೆ ಭಾರತ ಪ್ರತಿ ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನದ ಸೇನಾ ವಕ್ತಾರ ಲೆ.ಜ.ಅಹಮದ್‌ ಷರೀಫ್‌ ಚೌಧರಿ ಶನಿವಾರ ಮುಂಜಾನೆ 4 ಗಂಟೆಗೆ ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಹೀಂ ಯಾರ್‌ ಖಾನ್‌(ರಾವಲ್ಪಿಂಡಿಯ ಚಕ್ಲಾ) ಮುರೀದ್, ‘ರಫಿಖ್ವಿ ಏರ್‌ಬೇಸ್‌ಗಳ ಮೇಲೆ ಭಾರತ ದಾಳಿ ನಡೆಸಿದೆ. ಆದರೆ ಇಲ್ಲಿ ಯಾವುದೇ ಹಾನಿಯಾಗಿಲ್ಲ, ನಮ್ಮ ವಾಯುಸೇನೆಯ ಆಸ್ತಿಗಳು ಸುರಕ್ಷಿತವಾಗಿವೆ’ ಎಂದು ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದರು.

‘ಭಾರತವು ಯುದ್ಧ ವಿಮಾನದ ಮೂಲಕ ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ನಾವೂ ಬುನ್ಯಾನ್‌ ಅಲ್‌-ಮರ್ಸೌಸ್‌(ಕಬ್ಬಿಣದ ಗೋಡೆ) ಆಪರೇಷನ್‌ ಆರಂಭಿಸಿದ್ದು, ಮಧ್ಯಮದೂರ ವ್ಯಾಪ್ತಿಯ ಪಥೆ-1 ಕ್ಷಿಪಣಿ ಬಳಸಿ ಪ್ರತಿದಾಳಿ ನಡೆಸಿದ್ದೇವೆ. ಈ ವೇಳೆ ಭಾರತದಲ್ಲಿ ತೀವ್ರ ಹಾನಿಯಾಗಿದೆ’ ಎಂದು ಹೇಳಿಕೊಂಡಿದ್ದರು.

ಎಂಟು ಗುರಿ, ಲೆಕ್ಕಾಚಾರದ ದಾಳಿ:

ಆದರೆ ಇದಕ್ಕೆ ಜಂಟಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ, ‘ಭಾರತದ 4 ವಾಯುನೆಲೆಗಳ ಮೇಲೆ ಪಾಕ್‌ ನಡೆಸಿದ ದಾಳಿ ಯತ್ನ ವಿಫಲವಾಗಿದೆ. ನಮ್ಮ ನೆಲೆಗಳಿಗೆ ಹಾನಿಯಾಗಿಲ್ಲ. ದಾಳಿ ತಡೆದಿದ್ದೇವೆ. ಇದಕ್ಕೆ ಪ್ರತಿಯಾಗಿ ಭಾರತವು ಪಾಕ್‌ನ 8 ವಾಯುನೆಲೆಗಳ ಮೇಲೆ ಭಾರೀ ಕ್ಷಿಪಣಿ ದಾಳಿ ನಡೆಸಿದ್ದು, ಇದೊಂದು ತ್ವರಿತ ಮತ್ತು ಲೆಕ್ಕಾಚಾರದ ಪ್ರತ್ಯುತ್ತರವಾಗಿದೆ. ಕೇವಲ ವಾಯು ನೆಲೆಗಳನ್ನಷ್ಟೇ ನಮ್ಮ ಗುರಿಯಾಗಿತ್ತು’ ಎಂದರು,

‘ಪಾಕಿಸ್ತಾನದ ರಫಿಖ್ವಿ, ಮುರಿದ್‌, ಚಕ್ಲಾಲಾ, ರಹೀಂಯಾರ್‌ ಖಾನ್‌, ಸುಕ್ಕೂರ್‌, ಚುನಿಯನ್‌, ಪಸ್ರೂರ್‌, ಸಿಯಾನ್‌ಕೋಟ್‌ ಮೇಲೆ ದಾಳಿ ನಡೆಸಲಾಗಿದೆ. ಪಾಕ್‌ ವಾಯು ಸೇನೆಯ ತಾಂತ್ರಿಕ ಮೂಲಸೌಕರ್ಯ, ಕಮಾಂಡ್ ಮತ್ತು ಕಂಟ್ರೋಲ್‌ ಕೇಂದ್ರ, ರೇಡಾರ್‌ ಕೇಂದ್ರ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರಗಳೇ ನಮ್ಮ ಗುರಿಯಾಗಿದ್ದವು’ ಎಂದು ಹೇಳಿದರು.

ಹೈಸ್ಪೀಡ್‌ ಕ್ಷಿಪಣಿಗಳ ಮೂಲಕ ಭಾರತದ ಉಧಂಪುರ, ಪಠಾಣಕೋಟ್‌, ಭುಜ್‌ ಮತ್ತು ಆದಂಪುರ ಏರ್‌ಬೇಸ್‌ಗಳ ಮೇಲೆ ಪಾಕಿಸ್ತಾನ ಶುಕ್ರವಾರ ರಾತ್ರಿ ದಾಳಿ ನಡೆಸಿತ್ತು. ಇದನ್ನು ನಾವು ಹಿಮ್ಮೆಟ್ಟಿಸಿದೆವು. ಈ ದಾಳಿಯಲ್ಲಿ ಎಸ್‌-400 ಕ್ಷಿಪಣಿ ವ್ಯವಸ್ಥೆ ನಾಶ ಮಾಡಲಾಗಿದೆ ಎಂಬ ಪಾಕಿಸ್ತಾನದ ಆರೋಪ ಸುಳ್ಳು ಎಂದರು.

ಮುಟ್ಟಿಕೊಳ್ಳುವ ಪೆಟ್ಟು

ಶುಕ್ರವಾರ ರಾತ್ರಿ ಭಾರತದ 4 ವಾಯುನೆಲೆಗಳ ಮೇಲೆ ಕ್ಷಿಪಣಿ, ಡ್ರೋನ್‌ ದಾಳಿಗೆ ಪಾಕಿಸ್ತಾನದ ಪ್ರಯತ್ನ

ಪಾಕ್‌ ಕ್ಷಿಪಣಿ, ಡ್ರೋನ್‌ಗಳನ್ನು ಗಡಿಯಲ್ಲೇ ಹೊಡೆದುರುಳಿಸಿದ ಭಾರತೀಯ ವಾಯುರಕ್ಷಣಾ ವ್ಯವಸ್ಥೆಗಳು

ಪ್ರತಿಯಾಗಿ ಪಾಕಿಸ್ತಾನದ 8 ವಾಯುನೆಲೆಗಳ ಮೇಲೆ ಭಾರತದ ಭೀಕರ ಸ್ಫೋಟ। ತೀವ್ರತೆಗೆ ನೆಲೆ ಧ್ವಂಸ

ಪಾಕ್‌ ವಾಯುನೆಲೆ ಧ್ವಂಸದ ಕಾರಣ ಭಾರತದ ಮೇಲೆ ನೇರ ದಾಳಿಗೆ ಪಾಕ್‌ ಬಳಿ ಇದೀಗ ನೆಲೆಗಳ ಇಲ್ಲ