ಸಾರಾಂಶ
ನವದೆಹಲಿ: ಶುಕ್ರವಾರ ರಾತ್ರಿಯ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ 8 ವಾಯುಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಭಾರೀ ಪ್ರತಿ ದಾಳಿ ನಡೆಸಿದೆ. ಪಾಕಿಸ್ತಾನ ವಾಯು ಸೇನೆಯ ನಡು ಮುರಿಯಲೆಂದೇ ಈ ಏರ್‌ಬೇಸ್‌ಗಳನ್ನು ಗುರಿಮಾಡಿಕೊಂಡು ಭಾರತ ದಾಳಿ ನಡೆಸಿದ್ದು, ಅದರಲ್ಲಿ ಯಶ ಕಂಡಿದೆ.
ಇಲ್ಲಿಂದಲೇ ಕಳೆದ ಕೆಲ ದಿನಗಳಿಂದ ಭಾರತದ ಮೇಲೆ ಅವ್ಯಾಹತವಾಗಿ ಡ್ರೋನ್ ಹಾಗೂ ವೈಮಾನಿಕ ದಾಳಿಗಳನ್ನು ನಡೆಸಲಾಗುತ್ತಿತ್ತು. ಜೆಎಫ್-17, ಎಫ್-16, ಮಿರಾಜ್‌ನಂಥ ವಿಮಾನಗಳನ್ನು ಈ ವಾಯುನೆಲೆಗಳಲ್ಲಿ ಇರಿಸಲಾಗಿದೆ. ಅಲ್ಲದೆ, ಯುರೋಪ್‌ನ ಸಾಬ್ ರೇಡಾರ್ ಹಾಗೂ ಚೀನಾದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲಾಗಿದೆ. ಭಾರತದ ದಾಳಿಯಿಂದ ಇದೀಗ ಅವುಗಳಿಗೆ ತೀವ್ರ ಹಾನಿಯಾಗಿದೆ ಎಂದು ಹೇಳಲಾಗಿದೆ.
ಎಲ್ಲೆಲ್ಲಿ ದಾಳಿ?
ರಫಿಕಿ, ಮುರಿದ್, ಚಕ್ಲಾಲಾ, ರಹೀಂ ಯಾರ್ ಖಾನ್, ಸುಕ್ಕೂರ್, ಚುನಿಯನ್ ಮೇಲೆ ಯುದ್ಧವಿಮಾನಗಳ ಮೂಲಕ ಕ್ಷಿಪಣಿ ಬಳಸಿ ಹಾಗೂ ಪಸ್ರೂರ್‌ನಲ್ಲಿರುವ ರೇಡಾರ್ ಕೇಂದ್ರ ಮತ್ತು ಸಿಯಾಲ್‌ಕೋಟ್‌ನ ವೈಮಾನಿಕ ನೆಲೆ ಮೇಲೆ ಡ್ರೋನ್ ಬಳಸಿ ದಾಳಿ ನಡೆಸಲಾಗಿದೆ. ಈ ಮೂಲಕ ಪಾಕಿಸ್ತಾನದ ವಾಯುದಾಳಿಯ ಶಕ್ತಿಗುಂದಿಸುವ ಪ್ರಯತ್ನವನ್ನು ಭಾರತ ಮಾಡಿದೆ.
ಎಲ್ಲೆಲ್ಲಿ ದಾಳಿ? ಏನಿದರ ಮಹತ್ವ?
ನೂರ್ ಖಾನ್, ಏರ್‌ಬೇಸ್
ರಾವಲ್ಪಿಂಡಿಯ ಚಕ್ಲಲಾದಲ್ಲಿರುವ ಈ ಏರ್‌ಬೇಸ್ ಅನ್ನು ಈ ಹಿಂದೆ ಪಿಎಎಫ್ ಬೇಸ್ ಎಂದೇ ಕರೆಯಲಾಗುತ್ತಿತ್ತು. ಇದು ಪಾಕಿಸ್ತಾನದ ಏರ್‌ಮೊಬಿಲಿಟಿ ಕಮಾಂಡ್‌ನ ಮುಖ್ಯ ಕೇಂದ್ರವಾಗಿದೆ. ಒಂದು ರೀತಿಯಲ್ಲಿ ಪಾಕಿಸ್ತಾನದ ವೈಮಾನಿಕ ಶಕ್ತಿಯ ಮುಖ್ಯನಾಡಿಯಾಗಿದೆ. ಕಳೆದ 72 ಗಂಟೆಗಳಲ್ಲಿ ಭಾರತದ ಮೇಲಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಈ ಏರ್‌ಬೇಸ್ ಪ್ರಮುಖ ಪಾತ್ರವಹಿಸಿತ್ತು. ಈ ಏರ್‌ಬೇಸ್ ಯುರೋಪ್‌ನ ಸಾಬ್ 2000 ವಾಯು ದಾಳಿ ಮುನ್ನೆಚ್ಚರಿಕಾ ವ್ಯವಸ್ಥೆ ಮತ್ತು ಯುದ್ಧವಿಮಾನಗಳ ನಿಯಂತ್ರಣ ವ್ಯವಸ್ಥೆಯನ್ನು ಒಳಗೊಂಡಿದೆ. ಭಾರತದ ಮೇಲಿನ ವಾಯು ದಾಳಿಯಲ್ಲಿ ಇವು ಮಹತ್ವದ ಪಾತ್ರವಹಿಸಿದ್ದವು.
ರಫಿಕಿ, ಏರ್‌ಬೇಸ್
ಇದು ಪಂಜಾಬ್ ಪ್ರಾಂತ್ಯದಲ್ಲಿರುವ ಏರ್‌ಬೇಸ್. ಮಿರಾಜ್ ಮತ್ತು ಜೆಎಫ್-17 ಯುದ್ಧವಿಮಾನಗಳನ್ನು ಇಲ್ಲಿ ಇರಿಸಲಾಗಿದೆ. ಪಂಜಾಬ್ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ವೈಮಾನಿಕ ತರಬೇತಿಗಳನ್ನೂ ಇಲ್ಲಿ ನೀಡಲಾಗುತ್ತದೆ. ಭಾರತದ ಮೇಲಿನ ವಾಯು ದಾಳಿಯಲ್ಲಿ ಈ ಏರ್‌ಬೇಸ್ ಕೂಡ ಮುಖ್ಯ ಪಾತ್ರವಹಿಸಿತ್ತು.
ಮುರಿದ್, ಏರ್‌ಬೇಸ್
ಇದು ಪಂಜಾಬ್ ಪ್ರಾಂತ್ಯದಲ್ಲಿರುವ ಮತ್ತೊಂದು ಏರ್‌ಬೇಸ್. ಪಾಕಿಸ್ತಾನದ ಡ್ರೋನ್ ಕಾರ್ಯಾಚರಣೆಯ ಮುಖ್ಯ ಕೇಂದ್ರ. ಪಾಕಿಸ್ತಾನ ನಿರ್ಮಿತ ಷಾಪರ್-1 ಮತ್ತು ಟರ್ಕಿ ನಿರ್ಮಿತ ಬೈರಕ್ತರ್ ಟಿಬಿ2, ಅಕೈನ್ಸಿ ಡ್ರೋನ್‌ಗಳನ್ನು ಇಲ್ಲಿರಿಸಲಾಗಿದೆ. ಪಾಕಿಸ್ತಾನ ಇಲ್ಲಿಂದಲೇ ಅನೇಕ ಡ್ರೋನ್‌ಗಳನ್ನು ಭಾರತದತ್ತ ಹಾರಿಬಿಟ್ಟಿತ್ತು.
ರಹೀಂ ಯಾರ್ ಖಾನ್, ಏರ್‌ಬೇಸ್
ಇದು ಪಂಜಾಬ್‌ನಲ್ಲಿರುವ ಮತ್ತೊಂದು ಏರ್‌ಬೇಸ್. ಇದು ರಾಜಸ್ಥಾನಕ್ಕೆ ಸಮೀಪ ಇರುವ ವಾಯುನೆಲೆ. ಪಾಕಿಸ್ತಾನದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಯಾವುದೇ ದಾಳಿ ಎದುರಿಸಲು ಈ ಏರ್‌ಬೇಸ್ ಸ್ಥಾಪಿಸಲಾಗಿದೆ. ಇದು ರಾಜಸ್ಥಾನಕ್ಕೆ ಬೆದರಿಯಾತ್ತು.
ಸುಕ್ಕೂರ್, ಏರ್‌ಬೇಸ್
ಸಿಂಧ್ ಪ್ರಾಂತ್ಯದಲ್ಲಿರುವ ಏರ್‌ಬೇಸ್. ಈ ಅತ್ಯಾಧುನಿಕ ಏರ್‌ಬೇಸ್ ಅನ್ನು ಇತ್ತೀಚೆಗಷ್ಟೇ ಉದ್ಘಾಟಿಸಲಾಗಿದ್ದು, ಎಫ್-16ಎ, 15ಎಡಿಎಫ್ ವಿಮಾನಗಳನ್ನು ಇಲ್ಲಿ ನೆಲೆಗೊಳಿಸಲಾಗಿದೆ.
ಚುನಿಯನ್ ಏರ್‌ಬೇಸ್
ಪಂಜಾಬ್ ಪ್ರಾಂತ್ಯದಲ್ಲಿರುವ ಈ ಏರ್‌ಬೇಸ್ ಲಾಹೋರ್‌ನಿಂದ ಸುಮಾರು 70 ಕಿ.ಮೀ. ದೂರದಲ್ಲಿದೆ. ಇದು ಪಾಕಿಸ್ತಾನದ ಪ್ರಾಥಮಿಕ ಏರ್‌ಬೇಸ್‌ಗಳಲ್ಲಿ ಒಂದಾಗಿದೆ.