ಕೆಲ ಹಿಂದಿ ಚಿತ್ರಗಳಲ್ಲಿ ದೇಶದ ಬಗ್ಗೆ ಋಣಾತ್ಮಕ ಅಂಶ - ಅಂತಹ ಸಿನಿಮಾಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ: ರಿಷಬ್‌

| Published : Aug 22 2024, 10:09 AM IST

The Inspiring Journey of Rishab Shetty JMS

ಸಾರಾಂಶ

‘ವಿಶೇಷವಾಗಿ ಕೆಲವು ಬಾಲಿವುಡ್‌ ಸಿನಿಮಾಗಳು ಭಾರತದ ನೆಗೆಟಿವ್ ಅಂಶಗಳನ್ನು ತೋರಿಸಿ, ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ಗಳಿಗೆ ಹೋಗಿ ರೆಡ್‌ ಕಾರ್ಪೆಟ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡು ಬಂದಿರುವುದನ್ನು ನಾನು ಗಮನಿಸಿದ್ದೇನೆ- ರಿಷಬ್‌

ಬೆಂಗಳೂರು :  ‘ವಿಶೇಷವಾಗಿ ಕೆಲವು ಬಾಲಿವುಡ್‌ ಸಿನಿಮಾಗಳು ಭಾರತದ ನೆಗೆಟಿವ್ ಅಂಶಗಳನ್ನು ತೋರಿಸಿ, ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ಗಳಿಗೆ ಹೋಗಿ ರೆಡ್‌ ಕಾರ್ಪೆಟ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡು ಬಂದಿರುವುದನ್ನು ನಾನು ಗಮನಿಸಿದ್ದೇನೆ. ನನ್ನ ದೇಶ, ನನ್ನ ರಾಜ್ಯ, ನಮ್ಮ ಭಾಷೆ ನನ್ನ ಹೆಮ್ಮೆ. ಈ ವಿಚಾರಗಳ ಕುರಿತಾದ ಪಾಸಿಟಿವ್‌ ಅಂಶಗಳನ್ನು ಯಾಕೆ ತೋರಿಸಬಾರದು. ನಾನು ನನ್ನ ಸಿನಿಮಾಗಳಲ್ಲಿ ಪಾಸಿಟಿವ್ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ‘ಕಾಂತಾರ’ ಖ್ಯಾತಿಯ ನಟ ರಿಷಬ್‌ ಶೆಟ್ಟಿ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ರಿಷಬ್ ಶೆಟ್ಟಿ ಅವರ ಹೇಳಿಕೆಯನ್ನು ಹಲವು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ಶುರುವಾದವು. ಕೆಲವರು ಅವರ ಹೇಳಿಕೆಗೆ ವಿರೋಧ ಸಲ್ಲಿಸಿದರೆ, ಬಹಳಷ್ಟು ಮಂದಿ ರಿಷಬ್‌ ಶೆಟ್ಟಿ ಹೇಳಿಕೆಗೆ ಮೆಚ್ಚುಗೆ ಮತ್ತು ಬೆಂಬಲ ಸೂಚಿಸಿದ್ದಾರೆ.

‘ರಿಷಬ್ ಶೆಟ್ಟಿ ಹೇಳಿರುವುದು ಸರಿ ಇದೆ. ಜಗತ್ತಿಗೆ ಭಾರತದ ಸಕಾರಾತ್ಮಕ ಅಂಶಗಳನ್ನು ತೋರಿಸಬೇಕೇ ವಿನಃ ಇಲ್ಲಿನ ಹುಳುಕುಗಳನ್ನು ಹೇಳುವುದಲ್ಲ. ರಿಷಬ್‌ ಶೆಟ್ಟಿ ನಮ್ಮ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ’ ಎಂದು ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಅನೇಕ ಬಾಲಿವುಡ್ ಚಿತ್ರಗಳು ಭಾರತದ ಬಡತನ, ಅಸಮಾನತೆ, ಶೋಷಣೆ, ಕೊಳಗೇರಿ, ಮೂಢನಂಬಿಕೆಗಳನ್ನೇ ಸಿನಿಮಾಗಳಲ್ಲಿ ತೋರಿಸಿ ವಿದೇಶಿ ಪ್ರೇಕ್ಷಕರಿಗೆ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದು ಸುಳ್ಳಲ್ಲ. ಅವರೆಲ್ಲರೂ ಪ್ರಶಸ್ತಿಗಾಗಿ, ಮೆಚ್ಚುಗೆಗಾಗಿ ಹಾಗೆ ಮಾಡುತ್ತಿದ್ದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ, ಭಾರತದ ಕುರಿತ ಉತ್ತಮ ಅಂಶಗಳನ್ನು ತೋರಿಸುತ್ತೇನೆ ಎಂದಾಗ ಅದನ್ನು ಮೆಚ್ಚಿಕೊಳ್ಳಬೇಕು ಎಂದು ನೆಟ್ಟಿಗರು ರಿಷಬ್ ಶೆಟ್ಟಿ ಪರ ನಿಂತಿದ್ದಾರೆ.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೂಡ ರಿಷಬ್‌ ಬೆಂಬಲಕ್ಕೆ ನಿಂತಿದ್ದು, ‘ತನ್ನ ದೇಶ, ಭಾಷೆ, ಸಂಸ್ಕೃತಿ ಬಗ್ಗೆ ಹೆಮ್ಮೆ ಪಡುವವನೇ ನಿಜವಾದ ಕಲಾವಿದ. ಅದೆಷ್ಟೋ ಅವಕಾಶಗಳಿದ್ದರೂ ಜಾಗತಿಕವಾಗಿ ಈ ದೇಶವನ್ನು ಋಣಾತ್ಮಕವಾಗಿ ತೋರಿಸಿದ ಅನೇಕ ನಟ, ನಟಿಯರಿಗೆ ರಿಷಬ್ ಮಾತುಗಳು ಪ್ರೇರಣೆಯಾಗಲಿ. ನಮ್ಮ ನೆಲದ ಸತ್ವವನ್ನು ಪಸರಿಸುವ ಮೂಲಕ ಭಾರತದ ಮೂಲೆ ಮೂಲೆಗಳಲ್ಲಿ ವಿಭಿನ್ನ ಹಾಗೂ ಅದ್ಭುತ ಸಂಸ್ಕೃತಿ ಇದೆ ಮತ್ತು ವಿವಿಧತೆಯಲ್ಲಿ ಏಕತೆ ಇದೆ ಎಂಬ ಸಂದೇಶವನ್ನು ರಿಷಬ್ ಶೆಟ್ಟಿ ನೀಡುತ್ತಿದ್ದಾರೆ. ಈ ಮೂಲಕ ಅವರು ನಾಡಿನ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.