ಸಾರಾಂಶ
ಫಾರ್ಮಾ ಕಂಪನಿಯ ಸ್ಫೋಟ ಸಂಭವಿಸಿ 13 ಜನರು ಸಾವನ್ನಪ್ಪಿ 17 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿ ನಡೆದಿದೆ.
ವಿಜಯವಾಡ: ಫಾರ್ಮಾ ಕಂಪನಿಯ ಸ್ಫೋಟ ಸಂಭವಿಸಿ 13 ಜನರು ಸಾವನ್ನಪ್ಪಿ 17 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿ ನಡೆದಿದೆ.
ಎಸ್ಸೆಂಟಿಯಾ ಎಂಬ ಫಾರ್ಮಾ ಕಂಪನಿಯ ಘಟಕದಲ್ಲಿ ಈ ಘಟನೆ ಸಂಭವಿಸಿದೆ. ಮೊದಲು ರಿಯಾಕ್ಟರ್‌ನಲ್ಲಿ ಸ್ಫೋಟ ಸಂಭವಿಸಿದ್ದರಿಂದ ಘಟನೆ ನಡೆದಿದೆ ಎನ್ನಲಾಗಿತ್ತು. ಆದರೆ ಬಳಿಕ ವಿದ್ಯುತ್ ಪೂರೈಕೆಯ ಸಮಸ್ಯೆಯಿಂದ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರ್ಖಾನೆಯಲ್ಲಿ 331 ನೌಕರರಿದ್ದಾರೆ. ಊಟದ ಸಮಯದಲ್ಲಿ ಈ ಅವಘಡ ನಡೆದಿದ್ದರಿಂದ ಇನ್ನಷ್ಟು ಅನಾಹುತ ತಪ್ಪಿದೆ. ಇಲ್ಲದಿದ್ದರೆ ನೂರಾರು ಸಾವು ಸಂಭವಿಸುತ್ತಿದ್ದವು. ರಿಯಾಕ್ಟರ್ ಸ್ಫೋಟದಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ಹೊಗೆ ಆವರಿಸಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಎನ್‌ಟಿಆರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.