ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ಹಮಾಸ್ ಭಾಗಶಃ ಸ್ವಾಗತಿಸುವುದಾಗಿ ಘೋಷಿಸಿದ್ದರೂ, ಈ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಫೋನ್‌ನಲ್ಲಿ ಟ್ರಂಪ್‌ ತರಾಟೆ 

ಟೆಲ್ ಅವಿವ್: ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ಹಮಾಸ್ ಭಾಗಶಃ ಸ್ವಾಗತಿಸುವುದಾಗಿ ಘೋಷಿಸಿದ್ದರೂ, ಈ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಫೋನ್‌ನಲ್ಲಿ ಟ್ರಂಪ್‌ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. 

ಒತ್ತೆಯಾಳುಗಳ ಬಿಡುಗಡೆ ಮಾಡುತ್ತೇವೆ ಎಂದು ಹಮಾಸ್‌ ಘೋಷಿಸಿದ ನಂತರ ಟ್ರಂಪ್‌, ನೆತನ್ಯಾಹು ಅವರಿಗೆ ಕರೆ ಮಾಡಿ, ‘ಹಮಾಸ್‌ ನಡೆ ಸಕಾರಾತ್ಮಕ ಹೆಜ್ಜೆ’ ಎಂದರು. ಆದರೆ ಇದು ಅತ್ಯಲ್ಪ ಎಂದು ನೆತನ್ಯಾಹು ನೀರಸ ಪ್ರತಿಕ್ರಿಯೆ ನೀಡಿದರು. 

ಇದರಿಂದ ಸಿಟ್ಟಿಗೆದ್ದ ಟ್ರಂಪ್, ‘ನೀವು ಯಾವಾಗಲೂ ಏಕೆ ನಕಾರಾತ್ಮಕವಾಗಿ ವರ್ತಿಸುತ್ತಿದ್ದೀರಿ. ಏಕೋ ಗೊತ್ತಿಲ್ಲ. ಇದು ಗೆಲುವು. ಅದನ್ನು ಸ್ವೀಕರಿಸಿ’ ಎಂದು ಚಾಟಿ ಬೀಸಿದರು ಎಂದ ಮಾಧ್ಯಮ ವರದಿಗಳು ಹೇಳಿವೆ.ಒತ್ತೆಯಾಳು ಬಿಡುಗಡೆ ಬಗ್ಗೆ ಮಾತುಕತೆ ಶುರು:

ಈ ನಡುವೆ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಈಜಿಪ್ಟ್‌ ಮಧ್ಯಸ್ಥಿಕೆಯಲ್ಲಿ ಕೈರೋದಲ್ಲಿ ಹಮಾಸ್‌ ಹಾಗೂ ಇಸ್ರೇಲ್‌ ನಡುವೆ ಮಾತುಕತೆ ಸೋಮವಾರ ಆರಂಭವಾಗಿವೆ.