ಸಾರಾಂಶ
ಕೋಲ್ಕತಾ: ಪಶ್ಚಿಮ ಬಂಗಾಳದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ದುಷ್ಕರ್ಮಿಗಳು ಬಿಜೆಪಿ ಸಂಸದ ಖಗೇನ್ ಮುರ್ಮು ಹಾಗೂ ಶಾಸಕ ಶಂಕರ್ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಾಗರಕಟಾ ಪ್ರದೇಶದಲ್ಲಿ ಸೋಮವಾರ ನಡೆದಿದೆ.
ಮುರ್ಮು ಅವರ ಮುಖದಿಂದ ರಕ್ತ ಸುರಿಯುತ್ತಿರುವ ವಿಡಿಯೋವನ್ನು ಶಾಸಕ ಘೋಷ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ‘ದುಷ್ಕರ್ಮಿಗಳು ನಮ್ಮನ್ನು ನೂಕಿ, ಹಲ್ಲೆ ನಡೆಸಿದರು. ವಾಹನವನ್ನು ಧ್ವಂಸಗೊಳಿಸಿದರು. ನಂತರ ಕಲ್ಲುತೂರಾಟ ನಡೆಸಿದರು. ಹಲ್ಲೆಯಿಂದ ಮುರ್ಮು ಅವರಿಗೆ ಗಂಭೀರ ಗಾಯವಾಗಿದೆ’ ಆರೋಪಿಸಿದ್ದಾರೆ. ತಕ್ಷಣ ಮುರ್ಮು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ದಾಳಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಪರಿಹಾರ ಕಾರ್ಯಕ್ಕೆ ಅಡ್ಡಿಪಡಿಸಲು ಆಡಳಿತಾರೂಢ ಟಿಎಂಸಿ ಹಿಂಸಾಚಾರವನ್ನು ಸಂಘಟಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಬಿಜೆಪಿಗರ ಮೇಲಿನ ದಾಳಿಗೆ ಮೋದಿ ಕಿಡಿ
ನವದೆಹಲಿ: ‘ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಮತ್ತು ಭೂಕುಸಿತ ಪೀಡಿತ ಜನರ ಭೇಟಿಗೆ ಹೋಗುತ್ತಿದ್ದ ನಮ್ಮ ಪಕ್ಷದ ಸಹೋದ್ಯೋಗಿಗಳ ಮೇಲೆ ನಡೆದ ದಾಳಿ ಖಂಡನೀಯ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.ಟ್ವೀಟ್ ಮಾಡಿರುವ ಆವರು, ’ನಮ್ಮ ಸಂಸತ್ ಸದಸ್ಯರು ಹಾಗೂ ಶಾಸಕರ ಮೇಲೆ ದಾಳಿ ನಡೆದಿದೆ. ಇದು ಖಂಡನೀಯ. ಇದು ತೃಣಮೂಲ ಕಾಂಗ್ರೆಸ್‌ನ ಅಸಂವೇದನಾಶೀಲತೆ ಮತ್ತು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ದಯನೀಯ ಸ್ಥಿತಿಯ ಸ್ಪಷ್ಟ ಪ್ರತಿಬಿಂಬವಾಗಿದೆ’ ಎಂದಿದ್ದಾರೆ.
‘ಈ ಕಠಿಣ ಪರಿಸ್ಥಿತಿಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ತೃಣಮೂಲ ಕಾಂಗ್ರೆಸ್ ಹಿಂಸಾಚಾರದಲ್ಲಿ ತೊಡಗುವುದನ್ನು ಬಿಟ್ಟು ಜನರಿಗೆ ಸಹಾಯ ಮಾಡುವತ್ತ ಹೆಚ್ಚು ಗಮನಹರಿಸಬೇಕು ಎಂಬುದು ನನ್ನ ಹೃತ್ಪೂರ್ವಕ ಆಶಯ. ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ನಿಂತು ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡುವುದನ್ನು ಮುಂದುವರಿಸಬೇಕೆಂದು ನಾನು ಮನವಿ ಮಾಡುತ್ತೇನೆ’ ಎಂದೂ ಮೋದಿ ಕರೆ ನಿಡಿದ್ದಾರೆ.