ಸಾರಾಂಶ
ತಿರುವನಂತಪುರಂ : ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಜಿಮ್‌ನಲ್ಲಿ ಕಸರತ್ತು ನಡೆಸುವ ವೇಳೆ ಟ್ರೆಡ್‌ಮಿಲ್‌ನಿಂದ (ವ್ಯಾಯಾಮ ಮಾಡುವ ಉಪಕರಣ) ಕೆಳಗೆ ಬಿದ್ದು, ಹಣೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡ ಚಿತ್ರವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿರುವ ಅವರು, ಲಘುಹಾಸ್ಯದೊಂದಿಗೆ ಘಟನೆಯನ್ನು ವಿವರಿಸಿದ್ದಾರೆ. ‘ನೀವು ಟ್ರೆಡ್‌ಮಿಲ್‌ನಲ್ಲಿದ್ದು ರಿಂಗಣಿಸುತ್ತಿರುವ ಫೋನ್‌ಗೆ ಕೈ ಹಾಕಲು ಪ್ರಯತ್ನಿಸಿದರೆ ಮತ್ತು ಅಜಾಗರೂಕರಾಗಿದ್ದರೆ, ಜಾರಿ ಬಿದ್ದು ಮುಖವನ್ನು ಒಡೆದುಕೊಳ್ಳುವ ಅಥವಾ ನಿಮ್ಮನ್ನು ನೀವು ಗಾಯಗೊಳಿಸಿಕೊಳ್ಳುವ ಸಾಧ್ಯತೆಗಳಿವೆ. ಅದನ್ನು ಸಾಬೀತುಪಡಿಸಲು ನನಗೆ ಮುಜುಗರವಾಗುವಂತಹ ನೋವು ಮತ್ತು ಗಾಯದ ಗುರುತುಗಳಾಗಿವೆ. ಕಥೆಯ ನೀತಿ: ಟ್ರೆಡ್‌ಮಿಲ್‌ನಲ್ಲಿ ಫೋನ್ ಅನ್ನು ತೀವ್ರ ಎಚ್ಚರಿಕೆಯಿಂದ ಬಳಸಿ’ ಎಂದಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದನ್ನವರು ತಿಳಿಸಿಲ್ಲ. ಜಿಮ್‌ನಲ್ಲಿ ಅವರು ಕಸರತ್ತು ನಡೆಸುವ ಫೋಟೊಗಳು ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದ್ದವು.
ಹೃಷಿಕೇಶಕ್ಕೆ ರಜನಿ ಆಧ್ಯಾತ್ಮಿಕ ಯಾತ್ರೆ!
ಹೃಷಿಕೇಶ: ಸೂಪರ್‌ಸ್ಟಾರ್ ರಜನೀಕಾಂತ್ ಅವರು ತಮ್ಮ ನಟನೆಗೆ ಸಣ್ಣ ವಿರಾಮ ನೀಡಿ ಹಿಮಾಲಯದತ್ತ ಆಧ್ಯಾತ್ಮಿಕ ಯಾತ್ರೆ ಕೈಗೊಂಡಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಸರಳ ಪೋಷಾಕಿನಲ್ಲಿ ಉತ್ತರಾಖಂಡದ ಹೃಷಿಕೇಶ ಯಾತ್ರೆಗೆ ತೆರಳಿರುವ ನಟನ ಫೋಟೋಗಳು ವೈರಲ್ ಆಗುತ್ತಿವೆ.
ಅವರು ಹೃಷಿಕೇಶ ಸನಿಹದ ದ್ವಾರಾಹಾಟ್‌ಗೆ ಹೊರಟಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗಿದೆ. ಅದರಲ್ಲಿನ ಒಂದು ಫೋಟೋದಲ್ಲಿ ರಜನಿ ಪಂಚೆ ಉಟ್ಟು, ರಸ್ತೆ ಬದಿ ನಿಂತು ಎಲೆಯ ತಟ್ಟೆಯಲ್ಲಿ ಊಟ ಮಾಡುತ್ತಿರುವುದನ್ನು ಕಾಣಬಹುದು. ಇನ್ನೊಂದರಲ್ಲಿ ಅವರು ಇಬ್ಬರು ಅರ್ಚಕರೊಂದಿಗೆ ಕುಳಿತು ಮಾತುಕತೆ ನಡೆಸುತ್ತಿದ್ದಾರೆ. ಇದನ್ನು ಕಂಡ ಜನ, ನಟನ ಸರಳತೆಯನ್ನು ಕೊಂಡಾಡುತ್ತಿದ್ದಾರೆ.
ಶಬರಿಮಲೆ ಚಿನ್ನಕ್ಕೆ ಕನ್ನ ಪ್ರಕರಣ: ಬೆಂಗಳೂರಿನ ಆರೋಪಿ ವಿಚಾರಣೆ
ತಿರುವನಂತಪುರಂ : ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ವಿಚಕ್ಷಣ ದಳದ ಅಧಿಕಾರಿಗಳು ಭಾನುವಾರ ವಿಚಾರಣೆ ನಡೆಸಿದ್ದಾರೆ.
2019ರಲ್ಲಿ ಪೊಟ್ಟಿ ಕವಚಗಳನ್ನು ಮರುಲೇಪನಕ್ಕಾಗಿ ಕೊಂಡೊಯ್ದಿದ್ದ. ಅವನ್ನು ಹಿಂದಿರುಗಿಸುವಾಗ ಚಿನ್ನದ ತೂಕದಲ್ಲಿ ಸುಮಾರು 4 ಕೆಜಿ ಕಡಿಮೆಯಾಗಿತ್ತು ಎಂಬ ಆರೋಪವಿದೆ. ಈ ಕುರಿತು ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆ ವಿಚಕ್ಷಣ ತಂಡ ಎರಡನೇ ಸಲ ಪೊಟ್ಟಿಯ ವಿಚಾರಣೆ ನಡೆಸಿದೆ.
ಶನಿವಾರ ಸುಮಾರು 4 ಗಂಟೆ ಕಾಲ ವಿಚಾರಣೆ ನಡೆಸಿ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಭಾನುವಾರ ಮತ್ತೆರಡು ಗಂಟೆ ವಿಚಾರಣೆ ನಡೆದಿದೆ. ಪೊಟ್ಟಿಯ ಹೇಳಿಕೆಯನ್ನೊಳಗೊಂಡ ವರದಿಯನ್ನು ತನಿಖಾಧಿಕಾರಿಗಳು ಶೀಘ್ರದಲ್ಲೇ ಹೈಕೋರ್ಟ್‌ಗೆ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪಾಕ್ ಜಿಂದಾಬಾದ್’ ಸಂದೇಶ ದೇಶದ್ರೋಹವಲ್ಲ: ಹೈಕೋರ್ಟ್
ಬರೇಲಿ: ‘ಪಾಕಿಸ್ತಾನದ ಜಿಂದಾಬಾದ್’ ಎಂಬ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡುವುದು ದೇಶದ್ರೋಹದ ಅಪರಾಧ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ, ಈ ಪೋಸ್ಟ್ ಹಾಕಿದ್ದ ವ್ಯಕ್ತಿಯೊಬ್ಬನಿಗೆ ಜಾಮೀನು ನೀಡಿದೆದೆ.‘ಇನ್ನೊಂದು ದೇಶವನ್ನು ಬೆಂಬಲಿಸುವ ಮೆಸೇಜ್ ಅನ್ನು ಫಾರ್ವರ್ಡ್ ಮಾಡುವುದು ಭಾರತೀಯ ನಾಗರಿಕರಲ್ಲಿ ಆಕ್ರೋಶ ಅಥವಾ ದ್ವೇಷಕ್ಕೆ ಕಾರಣವಾಗಬಹುದು. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 196ನೇ ಸೆಕ್ಷನ್ (ವಿವಿಧ ಗುಂಪುಗಳು, ಧರ್ಮಗಳು, ಜನಾಂಗ, ಜಾತಿ ಅಥವಾ ಭಾಷೆಗಳ ನಡುವೆ ವೈರತ್ವ, ಜಗಳಕ್ಕೆ ಕಾರಣವಾಗುವ) ಅಡಿ ಇದು ಶಿಕ್ಷಾರ್ಹ ಅಪರಾಧವೂ ಆಗಬಹುದು. ಆದರೆ ಬಿಎನ್‌ಎಸ್‌ನ ಸೆಕ್ಷನ್ 152(ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾರ್ಯ) ಅಡಿ ಬರುವ ಅಪರಾಧ ಅಲ್ಲ’ ಎಂದಿದೆ.
ಮೀರತ್ ನಿವಾಸಿಯಾಗಿರುವ ಸಾಜಿದ್ ಚೌಧರಿಯನ್ನು ಬಿಎನ್‌ಎಸ್‌ನ ಸೆಕ್ಷನ್ 152ರ ಅಡಿ ಮೇ 13, 2025ರಿಂದ ಬಂಧಿಸಿ ಜೈಲಿಗಟ್ಟಲಾಗಿತ್ತು.ಆರೋಪಿ ಪರ ವಾದಿಸಿದ್ದ ವಕೀಲರು, ‘ಸಾಜಿದ್ ಆ ಪೋಸ್ಟ್ ಅನ್ನು ರಚಿಸಿಲ್ಲ. ಯಾರೋ ಕಳುಹಿಸಿದ್ದನ್ನು ಫಾರ್ವರ್ಡ್ ಮಾಡಿದ್ದಾರೆ ಅಷ್ಟೆ. ಕಕ್ಷಿದಾರನಿಗೆ ಸಾರ್ವಜನಿಕ ಸುವ್ಯವಸ್ಥೆ ಹಾಳುಗೆಡಹುವ ಅಥವಾ ದ್ವೇಷ ಹಬ್ಬಿಸುವ ಯಾವುದೇ ಉದ್ದೇಶವಾಗಲಿ, ಆರೋಪಿಗೆ ಯಾವುದೇ ಕ್ರಿಮಿನಲ್ ರೆಕಾರ್ಡ್‌ಗಳಾಗಲಿ ಇಲ್ಲ. ಆತನಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಡುವ ಅಪಾಯವೂ ಇಲ್ಲ’ ಎಂದು ವಾದಿಸಿದ್ದರು.