ಕನ್ನಡಿಗ ಚಂದ್ರಮೌಳಿ ಕೊಂದ ವ್ಯಕ್ತಿಗೆ ಗರಿಷ್ಠ ಶಿಕ್ಷೆ: ಟ್ರಂಪ್

| Published : Sep 16 2025, 12:03 AM IST

ಕನ್ನಡಿಗ ಚಂದ್ರಮೌಳಿ ಕೊಂದ ವ್ಯಕ್ತಿಗೆ ಗರಿಷ್ಠ ಶಿಕ್ಷೆ: ಟ್ರಂಪ್
Share this Article
  • FB
  • TW
  • Linkdin
  • Email

ಸಾರಾಂಶ

ತಾವು ಕೆಲಸ ಮಾಡುತ್ತಿದ್ದ ಅಮೆರಿಕದ ಹೊಟೇಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕ್ಯೂಬಾ ಮೂಲದ ಸಹೋದ್ಯೋಗಿಯಿಂದ ಭೀಕರವಾಗಿ ಕೊಲೆಯಾಗಿದ್ದ ಕನ್ನಡಿಗ ಚಂದ್ರಮೌಳಿ ಬಾಬ್‌ ನಾಗಮಲ್ಲಯ್ಯ ಅವರ ಬಗ್ಗೆ ಇದೇ ಮೊದಲ ಬಾರಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿಯಿಂದ ಬಾಬ್‌ ಕೊಲೆ

ನ್ಯೂಯಾರ್ಕ್‌: ತಾವು ಕೆಲಸ ಮಾಡುತ್ತಿದ್ದ ಅಮೆರಿಕದ ಹೊಟೇಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕ್ಯೂಬಾ ಮೂಲದ ಸಹೋದ್ಯೋಗಿಯಿಂದ ಭೀಕರವಾಗಿ ಕೊಲೆಯಾಗಿದ್ದ ಕನ್ನಡಿಗ ಚಂದ್ರಮೌಳಿ ಬಾಬ್‌ ನಾಗಮಲ್ಲಯ್ಯ ಅವರ ಬಗ್ಗೆ ಇದೇ ಮೊದಲ ಬಾರಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ. ಶಿರಚ್ಛೇದಕ್ಕೊಳಗಾದ ಬಾಬ್‌ರನ್ನು ‘ಗೌರವಾನ್ವಿತ ವ್ಯಕ್ತಿ’ ಎಂದಿರುವ ಅವರು, ಕೊಲೆಗಾರನಿಗೆ ಕಠಿಣಾತಿಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ.

ಇದೇ ವೇಳೆ ವಲಸಿಗರ ವಿರುದ್ಧ ಕಿಡಿ ಕಾರಿರುವ ಟ್ರಂಪ್‌, ‘ಈಗಾಗಲೇ ಹಲವಾರು ಅಪರಾಧ ಕೃತ್ಯಗಳನ್ನೆಸಗಿ ಗಡೀಪಾರಾಗಿದ್ದರೂ ಹಿಂದಿನ ಜೋ ಬೈಡನ್‌ ಸರ್ಕಾರದ ಅಸಮರ್ಥತೆಯಿಂದಾಗಿ ಇಲ್ಲೇ ಉಳಿದುಕೊಂಡಿದ್ದ. ಆದರೆ ನನ್ನ ಅವಧಿಯಲ್ಲಿ ಹೀಗಾಗದು. ಆದ್ದರಿಂದಲೇ ನಾವು ಕ್ರಿಮಿನಲ್‌ ಅಕ್ರಮ ವಲಸಿಗರನ್ನು ಹಿಡಿದು ಉಗಾಂಡಾ ಮತ್ತು ದಕ್ಷಿಣ ಸುಡಾನ್‌ನಂತಹ ದೇಶಗಳಿಗೆ ಕಳಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

==

ಪತ್ರಕರ್ತರಿಗೆ ಕಿರುಕುಳ: ಐಎನ್‌ಎಸ್‌ ಕಳವಳ

ನವದೆಹಲಿ: ಆಂಧ್ರಪ್ರದೇಶದಲ್ಲಿ ಸಾಕ್ಷಿ ಪತ್ರಿಕೆಯ ಪತ್ರಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗೆ ಭಾರತೀಯ ದಿನಪತ್ರಿಕೆಗಳ ಸಂಸ್ಥೆ (ಐಎನ್‌ಎಸ್‌) ಕಳವಳ ವ್ಯಕ್ತಪಡಿಸಿದೆ. ‘ಪತ್ರಕರ್ತರ ಮೇಲಿನ ಈ ಕಿರುಕುಳ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯ ಅಡಿಪಾಯದ ಮೇಲಿನ ದಾಳಿ ’ ಎಂದು ಖಂಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ಕಿಡಿಕಾರಿರುವ ಐಎನ್‌ಎಸ್‌, ‘ ಈ ದಾಳಿಗೆ ಕಾರಣರಾದವರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳ ರಕ್ಷಣೆಗೆ ಕಾನೂನು ತರಬೇಕು. ಬೆದರಿಕೆ, ಹಿಂಸಾಚಾರ ಎದುರಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳ ಪರ ಸಂಸ್ಥೆ ಸದಾ ನಿಲ್ಲಲಿದೆ’ ಎಂದು ಹೇಳಿದೆ.

==

ಅಂಬಾನಿ ಒಡೆತನದ ವನತಾರಾಗೆ ಸುಪ್ರೀಂ ಎಸ್‌ಐಟಿ ಕ್ಲೀನ್‌ಚಿಟ್‌

ನವದೆಹಲಿ: ಉದ್ಯಮಿ ಅನಂತ್‌ ಅಂಬಾನಿ ಅವರ ಪ್ರಾಣಿ ಪುನರ್ವಸತಿ ಕೇಂದ್ರ ವನತಾರಾಗೆ ಸುಪ್ರೀಂ ಕೋರ್ಟ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ನೀಡಿದೆ. ನಿವೃತ್ತ ಸುಪ್ರೀಂ ಜಡ್ಜ್‌ ನೇತೃತ್ವದ ಸಮಿತಿಯು ವನತಾರಾದಲ್ಲಿ ಎಲ್ಲಾ ಪ್ರಕ್ರಿಯೆಗಳು ಕಾನೂನಾತ್ಮಕವಾಗಿಯೇ ನಡೆದಿವೆ. ಜೊತೆಗೆ ಹಣಕಾಸಿನ ವ್ಯವಹಾರವೂ ನಿಯಮಗಳಡಿಯೇ ನಡೆದಿವೆ. ಅಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವರದಿ ಸಲ್ಲಿಸಿದೆ. ದೇಶದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಪುತ್ರನ ವನತಾರಾದಲ್ಲಿ ಪ್ರಾಣಿಗಳ ಪಡೆದುಕೊಳ್ಳುವಾಗ ಸರಿಯಾದ ನಿಯಮಗಳನ್ನು ಪಾಲಿಸಿಲ್ಲ. ಅಲ್ಲಿನ ಹಣಕಾಸಿನ ವ್ಯವಹಾರದಲ್ಲಿ ಲೋಪವಿದೆ ಎಂದು ಆರೋಪಿಸಿ ಸುಪ್ರೀಂಗೆ ಅರ್ಜಿಗಳು ಸಲ್ಲಿಕೆಯಾಗಿತ್ತು. ಅದರ ಬೆನ್ನಲ್ಲೇ ಆ.14ರಂದು ಸುಪ್ರೀಂ ಎಸ್‌ಐಟಿ ರಚಿಸಿತ್ತು.

==

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರೀನಾ ವಿಕ್ಕಿ ಕೌಶಲ್‌ ದಂಪತಿ

ಮುಂಬೈ: ಬಾಲಿವುಡ್‌ನ ತಾರಾ ಜೋಡಿ ನಟಿ ಕತ್ರೀನಾ ಕೈಫ್‌ ಮತ್ತು ನಟ ವಿಕ್ಕಿ ಕೌಶಲ್‌ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಆಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಿನಲ್ಲಿ ನಟಿ ಮಗುವಿಗೆ ಜನ್ಮ ನೀಡಲಿದ್ದಾರೆ. ಕತ್ರೀನಾ ಗರ್ಭಿಣಿಯಾಗಿದ್ದಾರೆ ಎಂದು ಹಲವು ದಿನಗಳಿಂದ ವದಂತಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇದುವರೆಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2021ರಲ್ಲಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಕತ್ರೀನಾ ಕೈಫ್‌ ಕೊನೆಯ ಬಾರಿಗೆ 2024ರಲ್ಲಿ ತೆರೆಕಂಡ ವಿಜಯ್‌ ಸೇತುಪತಿ ಅಭಿನಯದ ಮೇರಿ ಕ್ರಿಸ್‌ಮಸ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

==

ಮುಂಬೈ: ಮೋನೋರೈಲಲ್ಲಿ ಮತ್ತೆ ತಾಂತ್ರಿಕ ದೋಷ, 17 ಪ್ರಯಾಣಿಕರ ರಕ್ಷಣೆ

ಮುಂಬೈ: ತಿಂಗಳ ಹಿಂದಷ್ಟೇ ಹಳಿ ನಡುವೆ ನಿಂತು 500ಕ್ಕೂ ಹೆಚ್ಚು ಜನರನ್ನು ಆತಂಕದ ಮಡುವಿಗೆ ದೂಡಿದ್ದ ಮುಂಬೈನ ಮೋನೋ ರೈಲು, ಸೋಮವಾರ ಮತ್ತೆ ತಾಂತ್ರಿಕ ದೋಷಕ್ಕೆ ತುತ್ತಾಗಿದೆ. ಬಳಿಕ 17 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಬೆಳಗ್ಗೆ 7.16ರ ಹೊತ್ತಿಗೆ ಆ್ಯನ್‌ಟಾಪ್‌ ಹಿಲ್‌ ಬಸ್‌ ಡಿಪೋ ಮತ್ತು ಜಿಟಿಬಿಎನ್‌ ನಿಲ್ದಾಣಗಳ ನಡುವೆ ರೈಲು ತಾಂತ್ರಿಕ ದೋಷಕ್ಕೆ ಸಿಲುಕಿದೆ. ಇದರಿಂದಾಗಿ ಪ್ರಯಾಣಿಕರು ಕೆಲ ಹೊತ್ತು ಆತಂಕಗೊಂಡ ಸ್ಥಿತಿ ಉಂಟಾಗಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಮತ್ತು ಇನ್ನಿತರ ರಕ್ಷಣಾ ಪಡೆಗಳು ಸಿಲುಕಿದ್ದವರನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಬದಲಿ ರೈಲು ವ್ಯವಸ್ಥೆ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

==

ನೇಪಾಳದ ಹಂಗಾಮಿ ಪಿಎಂ ಸುಶೀಲಾ ಕಾರ್ಕಿ ಸಂಪುಟಕ್ಕೆ 3 ಸಚಿವರು

ಕಾಠ್ಮಂಡು: ಜೆನ್‌ ಝೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ನೇಪಾಳದಲ್ಲಿ ನೂತನ ರಚನೆಯಾಗಿರುವ ಪ್ರಧಾನಿ ಸುಶೀಲಾ ಕಾರ್ಕಿ ನೇತೃತ್ವದ ಹಂಗಾಮಿ ಸರ್ಕಾರಕ್ಕೆ ಮೂವರು ಸಚಿವರು ಸೇರ್ಪಡೆಗೊಂಡಿದ್ದಾರೆ. ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಾಜಿ ಹಣಕಾಸು ಕಾರ್ಯದರ್ಶಿ ರಾಮೇಶ್ವರ ಖನಲ್‌ (ಹಣಕಾಸು) ನೇಪಾಳ ವಿದ್ಯುತ್‌ ನಿಗಮದ ಮಾಜಿ ಅಧ್ಯಕ್ಷ ಕುಲ್ಮನ್‌ ಘೀಸಿಂಗ್‌ (ಇಂಧನ, ಸಾರಿಗೆ) ಮತ್ತು ವಕೀಲ ಓಂ ಪ್ರಕಾಶ್‌ ಆರ್ಯಲ್‌ (ಕಾನೂನು) ನೂತನ ಸಚಿವರಾಗಿ ಶಪಥ ಸ್ವೀಕರಿಸಿದ್ದಾರೆ. ಸೆ.12ರಂದು ಅಧಿಕಾರಿ ವಹಿಸಿಕೊಂಡ ಕಾರ್ಕಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದಾರೆ.