‘ಸಿಡ್ನಿಯಲ್ಲಿ ಹನಕ್ಕಾ ಹಬ್ಬಕ್ಕಾಗಿ ಸೇರಿದ್ದ ಯಹೂದಿಗಳ ಮೇಲೆ ಗುಂಡಿನ ದಾಳಿ ನಡೆಸಿ, 15 ಮಂದಿಯನ್ನು ಬಲಿಪಡೆದಿದ್ದ ಅಪ್ಪ-ಮಗ, ಐಸಿಸ್ ಉಗ್ರ ಸಂಘಟನೆಯಿಂದ ಪ್ರಭಾವಿತರಾಗಿದ್ದರು. ಆರೋಪಿಗಳಿಗೆ ಸಂಬಂಧಿಸಿದ ವಾಹನದಲ್ಲಿ ಐಸಿಸ್ ಧ್ವಜಗಳು ದೊರೆತಿವೆ.
ಮೆಲ್ಬರ್ನ್: ‘ಸಿಡ್ನಿಯಲ್ಲಿ ಹನಕ್ಕಾ ಹಬ್ಬಕ್ಕಾಗಿ ಸೇರಿದ್ದ ಯಹೂದಿಗಳ ಮೇಲೆ ಗುಂಡಿನ ದಾಳಿ ನಡೆಸಿ, 15 ಮಂದಿಯನ್ನು ಬಲಿಪಡೆದಿದ್ದ ಅಪ್ಪ-ಮಗ, ಐಸಿಸ್ ಉಗ್ರ ಸಂಘಟನೆಯಿಂದ ಪ್ರಭಾವಿತರಾಗಿದ್ದರು. ಆರೋಪಿಗಳಿಗೆ ಸಂಬಂಧಿಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಮನೆಯಲ್ಲೇ ತಯಾರಿಸಿದ 2 ಐಸಿಸ್ ಧ್ವಜಗಳು ದೊರೆತಿವೆ. ಜೊತೆಗೆ, ಸುಧಾರಿತ ಸ್ಫೋಟಕ ಸಾಧನಗಳು ಪತ್ತೆಯಾಗಿವೆ’ ಎಂದು ಆಸ್ಟ್ರೇಲಿಯಾ ಪೊಲೀಸರು ಮಂಗಳವಾರ ದೃಢಪಡಿಸಿದ್ದಾರೆ.
‘ದಾಳಿಕೋರರು ಯಹೂದಿಗಳ ವಯಸ್ಸು ಅಥವಾ ಸಾಮರ್ಥ್ಯದ ಬಗ್ಗೆ ಯಾವುದೇ ಗಮನ ಹರಿಸಲಿಲ್ಲ ಎಂದು ತೋರುತ್ತದೆ. ಕೇವಲ ಸಾವಿನ ಸಂಖ್ಯೆಯನ್ನು ಹೆಚ್ಚಿಸುವುದು ಅವರ ಉದ್ದೇಶವಾಗಿತ್ತು. ಕಳೆದ ತಿಂಗಳು ಫಿಲಿಪ್ಪೀನ್ಸ್‌ಗೂ ಹೋಗಿದ್ದರು. ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆಸಿದ ಭಾರತ ಮೂಲದ ತಂದೆ ಸಾಜಿದ್ ಅಕ್ರಂನನ್ನು ಪೊಲೀಸರು ಈಗಾಗಲೇ ಹತ್ಯೆ ಮಾಡಿದ್ದಾರೆ. ಮಗ ನವೀದ್ ಅಕ್ರಂನನ್ನು ಬಂಧಿಸಲಾಗಿದೆ.
ಸಿಡ್ನಿ ಉಗ್ರ ದಾಳಿಯಲ್ಲಿ 3 ಭಾರತೀಯ ವಿದ್ಯಾರ್ಥಿಗಳಿಗೆ ಗಾಯ
ಮೆಲ್ಬರ್ನ್: ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಕಡಲತೀರದಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳೂ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಆದರೆ ಆಸ್ಟ್ರೇಲಿಯಾ ಪೊಲೀಸರು ಇವರ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.ಭಾನುವಾರ 15 ಯಹೂದಿಗಳ ಸಾವಿಗೆ ಕಾರಣವಾದ ಹತ್ಯಾಕಾಂಡದಲ್ಲಿ 40 ಮಂದಿ ಗಾಯಗೊಂಡಿದ್ದರು. ಇದರಲ್ಲಿ ಮೂವರು ಭಾರತೀಯರು ಸೇರಿದ್ದಾರೆ. ಈ ಪೈಕಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಹೆಸರು ಹಾಗೂ ಸದ್ಯದ ಆರೋಗ್ಯ ಪರಿಸ್ಥಿತಿ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.
ಉಗ್ರ ತರಬೇತಿಗೆಂದು ಫಿಲಿಪ್ಪೀನ್ಸ್‌ಗೆ ಹೋಗಿದ್ದ ತಂದೆ-ಮಗ
ಸಿಡ್ನಿ: 15 ಯಹೂದಿಗಳ ಹತ್ಯಾಕಾಂಡ ನಡೆಸಿದ ಭಾರತ ಮೂಲದ ಅಪ್ಪ-ಮಗ ಕಳೆದ ತಿಂಗಳು ಫಿಲಿಪ್ಪೀನ್ಸ್ ದೇಶಕ್ಕೆ ತೆರಳಿ, ಅಲ್ಲಿ ಉಗ್ರಗಾಮಿ ಇಸ್ಲಾಮಿಕ್ ಬೋಧಕರಿಂದ ತರಬೇತಿ ಪಡೆದಿದ್ದರು. ತಂದೆ ಸಾಜಿದ್ ಅಕ್ರಂ ಭಾರತದ ಪಾಸ್‌ಪೋರ್ಟ್ ಬಳಸಿ ಅಲ್ಲಿಗೆ ತೆರಳಿದ್ದ ಎಂದು ತಿಳಿದುಬಂದಿದೆ.ದಾಳಿ ನಡೆಸಿದ ತಂದೆ ಸಾಜಿದ್ ಅಕ್ರಂ ಮತ್ತು ಮಗ ನವೀದ್ ಅಕ್ರಂ ಇಬ್ಬರೂ ನ.1ರಿಂದ 28ರವರೆಗೆ ಫಿಲಿಪ್ಪೀನ್ಸ್‌ಗೆ ತೆರಳಿದ್ದರು. ಸಾಜಿದ್ ಭಾರತದ ಪಾಸ್‌ಪೋರ್ಟ್ ಮೂಲಕ ಹೋಗಿದ್ದರೆ, ನವೀದ್ ಆಸ್ಟ್ರೇಲಿಯಾ ಪಾಸ್‌ಪೋರ್ಟ್ ಅನ್ನೇ ಬಳಸಿಕೊಂಡಿದ್ದ. ಅಲ್ಲಿ ಇಬ್ಬರೂ ಉಗ್ರಗಾಮಿ ಇಸ್ಲಾಮಿಕ್ ಬೋಧಕರಿಂದ ಪಾಠ ಹೇಳಿಸಿಕೊಂಡಿದ್ದರು. ದಾಳಿ ನಡೆಸಲು ಮಿಲಿಟರಿ ಶೈಲಿಯ ತರಬೇತಿಯನ್ನೂ ಪಡೆದಿದ್ದರು ಎಂದು ವರದಿಯಾಗಿದೆ.