ಸಾರಾಂಶ
ನವದೆಹಲಿ: ಐಸಿಸ್ ಉಗ್ರ ಸಂಘಟನೆಯ ಸ್ಲೀಪರ್‌ಸೆಲ್‌ನ ಭಾಗವಾಗಿದ್ದ ಇಬ್ಬರು ವ್ಯಕ್ತಿಗಳನ್ನು ರಾಷ್ಟ್ರೀಯ ತನಿಖಾ ದಳ ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಬಂಧಿತರನ್ನು ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಪರ್‌ವಾಲಾ ಮತ್ತು ತಲ್ಹಾ ಖಾನ್ ಎಂದು ಗುರುತಿಸಲಾಗಿದೆ. ಕಳೆದ 2 ವರ್ಷದಿಂದ ಇಂಡೋನೇಷ್ಯಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ಭಾರತಕ್ಕೆ ಆಗಮಿಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಲೆ ಬೀಸಿದ್ದ ಎನ್‌ಐಎ ತಂಡ, ಇಬ್ಬರು ಬಂದಿಳಿಯುತ್ತಲೇ ಬಂಧಿಸಿದೆ.
ಸ್ಫೋಟಕ ತಯಾರಿ:
ಪುಣೆಯ ಖೋಂಡ್ವಾದಲ್ಲಿ ಅಬ್ದುಲ್ ಫಯಾಜ್ ಶೇಕ್ ಎಂಬಾತನ ಮನೆಯಲ್ಲಿ ವಾಸವಿದ್ದ ಆರೋಪಿಗಳು ಅಲ್ಲಿಯೇ ಐಇಡಿಗಳನ್ನು ತಯಾರಿಸಿದ್ದರು. ಬಳಿಕ ಅದನ್ನು ಸ್ಫೋಟಿಸಿ ಪರೀಕ್ಷೆಯನ್ನೂ ನಡೆಸಿದ್ದರು. ಇದರ ಜತೆಗೆ, 2022-23ರ ಅವಧಿಯಲ್ಲಿ ಅಲ್ಲಿ ಬಾಂಬ್ ತಯಾರಿಕೆ ಮತ್ತು ಉಗ್ರ ತರಬೇತಿ ನೀಡುವ ಕಾರ್ಯಾಗಾರವನ್ನೂ ಆಯೋಜಿಸಿದ್ದರು. ಜೊತೆಗೆ ಐಸಿಸ್ ಅಜೆಂಡಾದಂತೆ ಹಿಂಸಾಚಾರ ಮತ್ತು ಭಯೋತ್ಪಾದನೆ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಜಾರಿಗೆ ತರಲು ದೇಶದಲ್ಲಿ ಶಾಂತಿಭಂಗ ಮತ್ತು ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐಸಿಸ್ ಪುಣೆ ಸ್ಲೀಪರ್ ಸೆಲ್‌ನ ಎಂಟು ಮಂದಿಯನ್ನು ಬಂಧಿಸಿದ್ದು, ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದಿಬ್ಬರು ಇಂಡೋನೇಷ್ಯಾಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದರು. ಇವರ ಪತ್ತೆಗೆ ಎನ್‌ಐಎ ತಲಾ 3 ಲಕ್ಷ ರು. ಬಹುಮಾನ ಘೋಷಿಸಿತ್ತು. ಇದೀಗ ಅವರಿಬ್ಬರನ್ನು ಬಂಧಿಸುವುದರೊದಿಗೆ ಎಲ್ಲಾ 10 ಮಂದಿಯನ್ನು ಬಂಧಿಸಿದಂತಾಗಿದೆ.
ಹತ್ತು ಮಂದಿ ವಿರುದ್ಧವೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಹಿತೆಯಡಿ ಪ್ರಕರಣ ದಾಖಲಿಸಲಾಗಿದೆ.