ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಗುರುವಾರ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಹೇಳಲಾಯಿತು. ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ದುಃಖತಪ್ತರು ಭಾಗಿಯಾಗಿ ನಾಯಕನಿಗೆ ವಿದಾಯ ಹೇಳಿದರು.

- ಲಕ್ಷಾಂತರ ಅಭಿಮಾನಿಗಳ ನಡುವೆ ಅಗಲಿದ ದಾದಾ ಅಂತ್ಯಕ್ರಿಯೆ

- ಶಾ, ಗಡ್ಕರಿ, ನಿತಿನ್‌, ಫಡ್ನವೀಸ್‌, ಶಿಂಧೆ, ಠಾಕ್ರೆಗಳಿಂದ ಅಂತಿಮ ನಮನ

- ಕಣ್ಣೀರಧಾರೆ ನಿಲ್ಲಿಸದ ಪತ್ನಿ ಸುನೇತ್ರಾ । ದಾದಾ ಅಮರ್‌ ರಹೇ ಜೈಘೋಷಪಿಟಿಐ ಬಾರಾಮತಿವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಗುರುವಾರ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಹೇಳಲಾಯಿತು. ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ದುಃಖತಪ್ತರು ಭಾಗಿಯಾಗಿ ನಾಯಕನಿಗೆ ವಿದಾಯ ಹೇಳಿದರು.ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ, ಪವಾರ್ ಅವರ ಪುತ್ರರಾದ ಪಾರ್ಥ್ ಮತ್ತು ಜಯ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ರಾಜ್ಯಸಭಾ ಸದಸ್ಯೆಯಾಗಿರುವ ಅವರ ಪತ್ನಿ ಸುನೇತ್ರಾ ಕಣ್ಣೀರ ಧಾರೆ ಸುರಿಸಿದರು. ಅಜಿತ್ ದಾದಾ ಅಮರ್ ರಹೇ ಎಂಬ ಘೋಷಣೆಗಳು ಜನರಿಂದ ಮೊಳಗಿದವು.

ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ಮುರಳೀಧರ್ ಮೊಹೋಲ್, ಮಾಜಿ ಕೇಂದ್ರ ಸಚಿವ ಶರದ್ ಪವಾರ್ (ಅಜಿತ್ ಪವಾರ್ ಅವರ ಚಿಕ್ಕಪ್ಪ) ಮತ್ತು ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.ಇದಕ್ಕೂ ಮುನ್ನ ರಾಷ್ಟ್ರಧ್ವಜದಲ್ಲಿ ಹೊದಿಸಲಾದ ಅವರ ಪಾರ್ಥಿವ ಶರೀರವನ್ನು ಅವರ ಗ್ರಾಮವಾದ ಕಾಟೇವಾಡಿಯಿಂದ ವಿದ್ಯಾ ಪ್ರತಿಷ್ಠಾನ ಮೈದಾನಕ್ಕೆ ತರಲಾಯಿತು. ಅವರ ಸೋದರಸಂಬಂಧಿ, ಬಾರಾಮತಿಯ ಎನ್‌ಸಿಪಿ (ಎಸ್‌ಪಿ) ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಅವರು ಸುನೇತ್ರಾ ಅವರಿಗೆ ಮೆರವಣಿಗೆ ಉದ್ದಕ್ಕೂ ಸಮಾಧಾನಿಸಿದರು.

ಇದಕ್ಕೂ ಮೊದಲು, ಶಾ, ಗಡ್ಕರಿ, ನಬಿನ್, ಫಡ್ನವೀಸ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಗೋವಾ ಸಿಎಂ ಪ್ರಮೋದ್ ಸಾವಂತ್, ಏಕನಾಥ್ ಶಿಂಧೆ, ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ, ಮಾಜಿ ಸಿಎಂ ಅಶೋಕ್ ಚವ್ಹಾಣ್, ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್, ನಟ ರಿತೇಶ್ ದೇಶಮುಖ್, ಮಾಜಿ ಸಿಎಂ ಉದ್ಧವ್ ಠಾಕ್ರೆ, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಅವರಯ ಪವಾರ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿದರು.

ಗುರುವಾರ ಬೆಳಿಗ್ಗೆ, ಅಜಿತ್ ಪವಾರ್ ಅವರ ಮೃತದೇಹವನ್ನು ಬಾರಾಮತಿಯ ಪುಣ್ಯಶ್ಲೋಕ್ ಅಹಲ್ಯಾದೇವಿ ಆಸ್ಪತ್ರೆಯಿಂದ ಅವರ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಇದಕ್ಕೂ ಮುನ್ನ ರಾತ್ರಿಯಿಡೀ ಮೃತದೇಹ ಆಸ್ಪತ್ರೆಯಲ್ಲೇ ಇತ್ತು.

ಬಾರಾಮತಿ ಟೇಬಲ್‌ಟಾಪ್ ಏರ್‌ಸ್ಟ್ರಿಪ್‌ನ ಅಂಚಿನಿಂದ ಕೇವಲ 200 ಮೀಟರ್ ದೂರದಲ್ಲಿ ವಿಮಾನ ಪತನಗೊಂಡ ಕಾರಣ ಪವಾರ್ ಮತ್ತು ಅದರಲ್ಲಿದ್ದ ಇತರ ನಾಲ್ವರು ಸಾವನ್ನಪ್ಪಿದರು.

==

ಅಜಿತ್‌ ಅಂಗರಕ್ಷಕ, ವಿಮಾನ ಪೈಲಟ್‌ ಕಪೂರ್ ಅಂತ್ಯಕ್ರಿಯೆ

ಸತಾರಾ/ನವದೆಹಲಿ: ಬಾರಾಮತಿ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್‌ ಪವಾರ ಜತೆಗೆ ಪ್ರಾಣ ಕಳೆದುಕೊಂಡ ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ಮುಂಜಾನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಅವರ ಹುಟ್ಟೂರಿನಲ್ಲಿ ನಡೆಸಲಾಯಿತು.ಇನ್ನು ಮತ್ತೊಂದೆಡೆ ದೆಹಲಿಯ ರಾಜೌರಿ ಗಾರ್ಡನ್‌ನಲ್ಲಿ, ಈ ದುರಂತದಲ್ಲಿ ಮಡಿದ ವಿಮಾನದ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಅವರಿಗೆ ಅಂತಿಮ ವಿದಾಯ ಹೇಳಲಾಯಿತು.

ಸಹ-ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್, ಮತ್ತು ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ ಕೂಡ ಅಸುನೀಗಿದ್ದರು.

==

ಅಜಿತ್‌ ಪವಾರ್‌ ವಿಮಾನ ದುರಂತ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ, ತನಿಖೆ

ಮುಂಬೈ: ಅಜಿತ್‌ ಪವಾರ್ ಸೇರಿ ನಾಲ್ವರ ಸಾವಿಗೆ ಕಾರಣವಾದ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಬ್ಲ್ಯಾಕ್‌ ಬಾಕ್ಸ್‌ ಪತ್ತೆ ಮಾಡಿದ್ದಾರೆ. ಜೊತೆಗೆ ತನಿಖೆ ಚುರುಕಾಗಿ ನಡೆಯುತ್ತಿದೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. ಈ ನಡುವೆ, ತನಿಖೆಗೆ ಸಹಕರಿಸುವಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ಗೆ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಪತ್ರ ಬರೆದಿದ್ದಾರೆ.ಬ್ಲ್ಯಾಕ್‌ ಬಾಕ್ಸ್‌ ಎಂಬುದು ಸಣ್ಣ ಪೆಟ್ಟಿಗೆಯ ರೀತಿಯದ್ದಾಗಿದ್ದು, ಇದರಲ್ಲಿ ವಿಮಾನದ ಚಲನವಲನ, ಪೈಲಟ್‌ಗಳ ಸಂಭಾಷಣೆ, ವಿಮಾನದ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿ ಇರಲಿದೆ.

ಇದೇ ವೇಳೆ ಅಪಘಾತ ತನಿಖೆ ನಡೆಸುವ ಎಎಐಬಿನ ಮೂವರು ಅಧಿಕಾರಿಗಳು, ಡಿಜಿಸಿಎ ಮುಂಬೈನ ಪ್ರಾಂತ್ಯದ ಮೂವರು ಅಧಿಕಾರಿಗಳು ಘಟನಾ ಸ್ಥಳದಲ್ಲಿ ತನಿಖೆ ಕೈಗೊಂಡಿದ್ದಾರೆ.

==

ಸುನೇತ್ರಾ ಉತ್ತರಾಧಿಕಾರತ್ವಕ್ಕೆ ಎನ್‌ಸಿಪಿಯಲ್ಲಿ ಕೂಗು

ಮುಂಬೈ: ಮಹಾರಾಷ್ಟ್ರ ಡಿಸಿಎಂ ಹಾಗೂ ಎನ್‌ಸಿಪಿ ಅಧ್ಯಕ್ಷ ಅಜಿತ್‌ ಪವಾರ್ ಸಾವಿನ ಬೆನ್ನಲ್ಲೇ ಅವರ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಸುನೇತ್ರಾ ಪವಾರ್‌ ಅವರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂಬ ಕೂಗು ಎದ್ದಿದೆ. ಅಲ್ಲದೆ, ಅಜಿತ್‌ ಅವರಿಂದ ತೆರವಾದ ವಿಧಾನಸಭಾ ಕ್ಷೇತ್ರದಲ್ಲಿ ಸುನೇತ್ರಾ ಅವರೇ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಪಕ್ಷದ ಅನೇಕರು ಮನವಿ ಮಾಡಿದ್ದಾರೆ.ಈ ನಡುವೆ ಎನ್‌ಸಿಪಿ ನಾಯಕ ಹಾಗೂ ಸಚಿವ ನರಹರಿ ಜೀರ್ವಾಲ್‌ ಮಾತನಾಡಿ, ಸುನೇತ್ರಾ ಅವರನ್ನು ಸಚಿವೆಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಆಗ್ರಹಿಸಿದ್ದಾರೆ.

ಅಜಿತ್‌ ಬಣದ ಎನ್‌ಸಿಪಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ 41 ಶಾಸಕರನ್ನು ಹೊಂದಿದೆ.