ಬಿಹಾರ : ವಿಪಕ್ಷ ಕೂಟದ ಒಡಕು ಇನ್ನಷ್ಟು ಹೆಚ್ಚಳ

| N/A | Published : Oct 21 2025, 01:00 AM IST / Updated: Oct 21 2025, 05:02 AM IST

 Rahul Gandhi along with Congress Party President Malikarjun Kharge and RJD Chief Lalu Prasad Yadav, during Voter Adhikar Rally

ಸಾರಾಂಶ

ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದು, 2ನೇ ಹಂತದ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯವಾಗಿದೆ. ಆದರೂ ಇಂಡಿಯಾ ಕೂಟದಲ್ಲಿ ಪಕ್ಷಗಳ ನಡುವಿನ ಸೀಟು ಹಂಚಿಕೆ ಅಂತಿಮವಾಗದೇ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಏಕಪಕ್ಷೀಯವಾಗಿ ಅಭ್ಯರ್ಥಿಗಳ ಹೆಸರು ಘೋಷಿಸಿವೆ. 

 ಪಟನಾ :  ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದು, 2ನೇ ಹಂತದ ನಾಮಪತ್ರ ಸಲ್ಲಿಕೆ ಸೋಮವಾರ ಮುಕ್ತಾಯವಾಗಿದೆ. ಆದರೂ ಇಂಡಿಯಾ ಕೂಟದಲ್ಲಿ ಪಕ್ಷಗಳ ನಡುವಿನ ಸೀಟು ಹಂಚಿಕೆ ಅಂತಿಮವಾಗದೇ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಏಕಪಕ್ಷೀಯವಾಗಿ ಅಭ್ಯರ್ಥಿಗಳ ಹೆಸರು ಘೋಷಿಸಿವೆ. ಅಲ್ಲದೆ, 4 ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಎದುರು ಬದುರಾಗಿ ಕಣಕ್ಕಿಳಿದಿವೆ. ಹೀಗಾಗಿ ಮೈತ್ರಿಕೂಟದ ಸ್ಥಿತಿ ಡೋಲಾಯಮಾನವಾಗಿದೆ.

ಸೋಮವಾರ ಕಾಂಗ್ರೆಸ್‌ 7 ಹಾಗೂ ಆರ್‌ಜೆಡಿ 143 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿವೆ. ಇದರೊಂದಿಗೆ ಕಾಂಗ್ರೆಸ್‌ ಒಟ್ಟು 61 ಕ್ಷೇತ್ರಗಳಲ್ಲಿ ಕಣಕ್ಕಿಳಿದಂತಾಗಿದೆ.  

4 ಕ್ಷೇತ್ರಗಳಲ್ಲಿ ಮುಖಾಮುಖಿ:

ಗಮನಿಸಬೇಕಾದ ಅಂಶವೆಂದರೆ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಪಕ್ಷಗಳು ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ. ಆದರೂ 4 ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳೇ ಮುಖಾಮುಖಿಯಾಗುವ ಸಂದರ್ಭ ಒದಗಿಬಂದಿದೆ.

ವೈಶಾಲಿ, ಲಾಲ್‌ಗಂಜ್‌, ಕಹಾಲಗಾಂವ್‌, ತಾರಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅವರೆಲ್ಲಾ ಚುನಾವಣೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಇದು ಕೂಟದಲ್ಲಿನ ಒಮ್ಮತದ ಕೊರತೆಯನ್ನು ಪ್ರದರ್ಶಿಸುತ್ತದೆ.

ವಿಪಕ್ಷ ಕೂಟ ಛಿದ್ರ ಆಗುತ್ತೆ

ಇಷ್ಟು ದೊಡ್ಡ ಮೈತ್ರಿಕೂಟ ವಿಭಜನೆಯ ಅಂಚಿನಲ್ಲಿರುವ ಚುನಾವಣೆಯನ್ನು ನಾನು ಎಂದಿಗೂ ನೋಡಿಲ್ಲ. ಸ್ಥಾನಗಳ ಆಯ್ಕೆಯ ಬಗ್ಗೆ ವಿವಾದವಿರಬಹುದು. ಆದರೆ ಅವರು ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸಲು ಸಹ ಸಾಧ್ಯವಾಗಿಲ್ಲ. ಮಹಾಘಟಬಂಧನ್ ಸದಸ್ಯರು ಕೆಲವು ಕ್ಷೇತ್ರಗಳಲ್ಲಿ ಪರಸ್ಪರ ಮುಖಾಮುಖಿಯಾದರೆ, ಅದು ಸ್ನೇಹಪರ ಹೋರಾಟವಾಗುವುದಿಲ್ಲ.

- ಚಿರಾಗ್ ಪಾಸ್ವಾನ್‌, ಎನ್‌ಡಿಎ ನಾಯಕ

ಬಿಹಾರ ಚುನಾವಣೆಯಲ್ಲಿ ಜೆಎಂಎಂ ಸ್ಪರ್ಧೆ ಇಲ್ಲ

ರಾಂಚಿ: ಇಂಡಿಯಾ ಕೂಟದ ಸೀಟು ಹಂಚಿಕೆ ಬಿಕ್ಕಟ್ಟು ಬಗೆಹರಿಯದ ಕಾರಣ ಕುಪಿತಗೊಂಡ ಜೆಎಂಎಂ ಪಕ್ಷ, ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದೆ. ಜತೆಗೆ, ತನ್ನ ಈ ನಿರ್ಧಾರಕ್ಕೆ ಕಾಂಗ್ರೆಸ್‌ ಮತ್ತು ಆರ್‌ಜೆಡಿಯ ರಾಜಕೀಯ ಸಂಚು ಕಾರಣ ಎಂದು ದೂರಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ಜೆಎಂಎಂ ಹಿರಿಯ ನಾಯಕ ಸುದಿವ್ಯ ಕುಮಾರ್‌, ‘ನಾವು ಈ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಇಲ್ಲ. ನಮ್ಮ ಈ ನಿರ್ಧಾರಕ್ಕೆ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಪಕ್ಷಗಳ ಸಂಚು ಕಾರಣ. ನಾವು ಮೈತ್ರಿಯನ್ನು ಪುನರ್‌ಪರಿಶೀಲಿಸಿ, ತಕ್ಕ ಉತ್ತರ ನೀಡುತ್ತೇವೆ’ ಎಂದರು.ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ನೇತೃತ್ವದ ಜೆಎಂಎಂ ಪಕ್ಷ 12 ಸೀಟುಗಳಿಗಾಗಿ ಬೇಡಿಕೆ ಇಟ್ಟಿತ್ತು.

ಬೀಕನ್‌ ಲೈಟ್‌, ಪೊಲೀಸ್‌ ಲೋಗೋ ಬಳಕೆ: ತೇಜ್‌ ವಿರುದ್ಧ ಕೇಸ್‌

ಹಾಜಿಪುರ: ಬಿಹಾರ ವಿಧಾನಸಭೆ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಕಾರಿಗೆ ಬೀಕನ್‌ ಲೈಟ್‌ ಮತ್ತು ಪೊಲೀಸ್‌ ಎಂಬ ಚಿಹ್ನೆ ಬಳಸಿದ್ದಕ್ಕಾಗಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ,, ಜನಶಕ್ತಿ ಜನತಾದಳ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.ಭಾನುವಾರ ಮಹುವಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ತೇಜ್‌, ತಮ್ಮ ಕಾರಿಗೆ ಬೀಕನ್‌ ಲೈಟ್‌ ಮತ್ತು ಪೊಲೀಸ್‌ ಎಂಬ ಚಿಹ್ನೆಯನ್ನು ಹಾಕಿಕೊಂಡಿದ್ದರು. ಇದು ನೀತಿ ಸಂಹಿತೆಗೆ ವಿರುದ್ಧವಾಗಿದ್ದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Read more Articles on