ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಬಣ 10 ನಿರ್ದೇಶಕ ಸ್ಥಾನ ಗೆದ್ದು ಮೇಲುಗೈ ಸಾಧಿಸಿತು.

ಬೆಳಗಾವಿ : ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಗೆ ತೆರೆ ಬಿದ್ದಿದ್ದು, ಭಾನುವಾರ ನಡೆದ 7 ನಿರ್ದೇಶಕರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಫಲಿತಾಂಶ ಮಾತ್ರ ಅಧಿಕೃತವಾಗಿ ಪ್ರಕಟವಾಗಿದೆ. ಇನ್ನುಳಿದ ನಾಲ್ಕು ಕ್ಷೇತ್ರಗಳ ಫಲಿತಾಂಶ ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಕಾರಣ ಅ.28ರಂದು ಅಧಿಕೃತವಾಗಿ ಪ್ರಕಟವಾಗಲಿದೆ.

ಭಾನುವಾರ ಬೆಳಗ್ಗೆ 9 ಗಂಟೆಗೆ ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಆರಂಭವಾದ ಮತದಾನ ಸಂಜೆ 4ರವರೆಗೆ ನಡೆಯಿತು. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತ ಎಣಿಕೆ ಕಾರ್ಯ ನಡೆದು, ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ 122 ಮತ ಪಡೆದು ಗೆದ್ದರೆ ಅವರ ವಿರುದ್ಧ ಮಾಜಿ ಶಾಸಕ ಮಹೇಶ ಕುಮಟಳ್ಳಿ ಕೇವಲ ಮೂರು ಮತ ಪಡೆದರು. ರಾಮದುರ್ಗದಲ್ಲಿ ಮಲ್ಲಣ್ಣ ಯಾದವಾಡ 19 ಮತ ಪಡೆದು ಶ್ರೀಕಾಂತ ಢವಣ (16 ಮತ) ಅವರನ್ನು ಸೋಲಿಸಿದರು. ರಾಯಬಾಗದಲ್ಲಿ ಬ್ಯಾಂಕಿನ ಹಾಲಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗೂಡೆ 120 ಮತ ಗಿಟ್ಟಿಸಿದರೆ ಬಸಗೌಡ ಆಸಂಗಿ 64 ಮತ ಮಾತ್ರ ಪಡೆದರು.

ನಿಪ್ಪಾಣಿ, ಚನ್ನಮ್ಮನ ಕಿತ್ತೂರು, ಬೈಲಹೊಂಗಲ ಹಾಗೂ ಹುಕ್ಕೇರಿ ಕ್ಷೇತ್ರದ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅ.28ರವರೆಗೆ ಫಲಿತಾಂಶ ಘೋಷಣೆ ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ (ನಿಪ್ಪಾಣಿ), ರಮೇಶ ಕತ್ತಿ (ಹುಕ್ಕೇರಿ), ಮಾಜಿ ಶಾಸಕ ಮಹಾಂತೇಶ ದೊಡ್ಡಗಡರ (ಬೈಲಹೊಂಗಲ), ನಾನಾಸಾಹೇಬ ಪಾಟೀಲ (ಚನ್ನಮ್ಮನ ಕಿತ್ತೂರು) ಅವರ ಫಲಿತಾಂಶ ‍ಪ್ರಕಟಿಸದಿದ್ದರೂ ಅವರ ಬೆಂಗಲಿಗರು ವಿಜಯೋತ್ಸವ ಆಚರಿಸಿದರು.

ಇದರೊಂದಿಗೆ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಬಣ 10 ನಿರ್ದೇಶಕ ಸ್ಥಾನ ಗೆದ್ದು ಮೇಲುಗೈ ಸಾಧಿಸಿತು. ಒಟ್ಟು 16 ಸ್ಥಾನಗಳ ಪೈಕಿ 9 ಕಡೆ ಅವಿರೋಧ ಆಯ್ಕೆಯಾಗಿದೆ.

ವಿಜಯೋತ್ಸವ ಆಚರಣೆ:

ಫಲಿತಾಂಶ ಘೋಷಣೆಯಾಗುತ್ತಿದಂತೆ ಅಭ್ಯರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ಈ ವೇಳೆ ರಮೇಶ ಕತ್ತಿ, ಲಕ್ಷ್ಮಣ ಸವದಿ ಭಾವಚಿತ್ರಗಳನ್ನು ಹಿಡಿದು ಅವರ ಬೆಂಬಲಿಗರು ಜಯಘೋಷ ಕೂಗಿದರು. ಸೆಡ್ಡು ಹೊಡೆದು, ಮೀಸೆ ತಿರುವಿ ಕುಣಿದು ಕುಪ್ಪಳಿಸಿದರು. ಈ ವೇಳೆ ರಮೇಶ ಕತ್ತಿ, ಲಕ್ಷ್ಮಣ ಸವದಿ, ಅಣ್ಣಾಸಾಹೇಬ ಜೊಲ್ಲೆ, ಅಶೋಕ ಪಟ್ಟಣ, ಮಹಾಂತೇಶ ದೊಡ್ಡಗೌಡರ ಒಟ್ಟಿಗೆ ನಿಂತಿದ್ದು ಗಮನ ಸೆಳೆಯಿತು.

ಗೆಲುವು ಘೋಷಣೆ ಆಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, 30 ವರ್ಷದ ನನ್ನ ಸೇವೆ ಪರಿಗಣಿಸಿ, ಪುನಃ ನಾನೇ ಬೇಕು ಎಂಬ ಅಭಿಪ್ರಾಯದಿಂದ ಆಶೀರ್ವಾದ ಮಾಡಿರುವ ಪಿಕೆಪಿಎಸ್ ಸದಸ್ಯರು ಮತ್ತು‌ ಆಡಳಿತ ಮಂಡಳಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮತ್ತೆ 5 ವರ್ಷ ಮತದಾರರಿಗೆ ಒಳ್ಳೆಯ ಸೇವೆ ಸಲ್ಲಿಸುತ್ತೇನೆ ಎಂದರು.

ಅಪ್ಪಾಸಾಹೇಬ ಕುಲಗುಡೆ ಮಾತನಾಡಿ, ರಾಯಬಾಗ ತಾಲೂಕಿನ ಜನರ ಆಶೀರ್ವಾದದಿಂದ ನಾಲ್ಕನೇ ಬಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಆಯ್ಕೆ ಆಗಿದ್ದೇನೆ. ನಾನು ಮಾಡಿದ ಕೆಲಸ ನನ್ನ ಗೆಲುವಿಗೆ ಕಾರಣ ಆಯಿತು. ಇನ್ನು ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ಬಸಗೌಡ ಆಸಂಗಿ ಡೆಲಿಗೇಷನ್ ಫಾರ್ಮ್ ಇಟ್ಟುಕೊಂಡಿದ್ದಿರಿ ಎಂದು ನನ್ನ ಮೇಲೆ ಆರೋಪ‌ ಮಾಡಿದ್ದು ಸುಳ್ಳು‌. ಮತದಾರರು ತಮ್ಮ ಡೆಲಿಗೇಷನ್ ಫಾರ್ಮ್ ತಮ್ಮ ಬಳಿಯೇ ಇಟ್ಟುಕೊಳ್ಳಬೇಕು ಎಂದು ತಿರುಗೇಟು ಕೊಟ್ಟರು.ನನ್ನ ಗೆಲುವನ್ನು ರಾಮದುರ್ಗ ತಾಲೂಕಿನ ಜನರಿಗೆ ಅರ್ಪಿಸುತ್ತೇನೆ. ಗೆಲುವಿಗೆ ಶಾಸಕ ಅಶೋಕ ಪಟ್ಟಣ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹಗಲಿರುಳು ಶ್ರಮಿಸಿದ್ದಾರೆ. ನಾನು ಲಕ್ಷ್ಮಣ ಸವದಿ ಮತ್ತು ರಮೇಶ ಕತ್ತಿ ಅವರ ಬಣದ ಜೊತೆಗೆ ಗುರುತಿಸಿಕೊಳ್ಳುತ್ತೇನೆ ಎಂದು ವಿಜೇತ ಅಭ್ಯರ್ಥಿ ಮಲ್ಲಣ್ಣ ಯಾದವಾಡ ಹರ್ಷ ವ್ಯಕ್ತಪಡಿಸಿದರು.

ರಾಯಬಾಗ ಕ್ಷೇತ್ರದ ಗೊಂದಲ: ಮಾರಾಮಾರಿ

ಲಕ್ಷ್ಮಣ ಸವದಿ-ಕತ್ತಿ ಬಣದಿಂದ ರಾಯಬಾಗ ತಾಲೂಕಿನಿಂದ ಸ್ಪರ್ಧಿಸಿದ್ದ ಬಸಗೌಡ ಆಸಂಗಿ ಪರ ಮತ ಚಲಾಯಿಸಲು ಬಂದಿದ್ದ 24 ಮತದಾರರು ತಮ್ಮ‌ ಮತದಾನ ಹಕ್ಕುಪತ್ರ (ಡೆಲಿಗೇಷೆನ್ ಫಾರ್ಮ್) ಅನ್ನು ವಿರೋಧಿ ಅಭ್ಯರ್ಥಿ ಅಪ್ಪಾಸಾಹೇಬ ಕುಲಗುಡೆ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಆಸಂಗಿ ಬೆಂಬಲಿಗರು ಬೆಳಗಾವಿಯ ಖಾಸಗಿ ಹೋಟೆಲ್‌ಗೆ ನುಗ್ಗಿದರು. ಇದೇ ವಿಚಾರವಾಗಿ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈಕೈ ಮಿಲಾಯಿಸಿದರು. ಆಸಂಗಿ ಪರವಾದ ಡೆಲಿಗೇಟರುಗಳ ಮತಹಕ್ಕು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಾರಾಯಣ ಭರಮನಿ ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬೆಂಬಲಿಗರ ಮನವೊಲಿಸಿದರು. ಈ ಸಂಬಂಧ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಬಸಗೌಡ ಆಸಂಗಿ ಬೆಂಬಲಿಗರು ದೂರು ದಾಖಲಿಸಿದ್ದಾರೆ. ಒಟ್ಟು 205 ಮತದಾರರ ಪೈಕಿ 164 ಮತದಾನ ಮಾತ್ರ ನಡೆದಿದ್ದು, 41 ಮತದಾರರು ಮತದಾನದಿಂದ ವಂಚಿತರಾದರು.

ವಿರೋಧಿ ಅಭ್ಯರ್ಥಿಯ ಡೆಲಿಗೇಷನ್‌ ಪ್ರತಿಗಳನ್ನು ಕದ್ದು ಇಟ್ಟುಕೊಂಡ ಬಗ್ಗೆ ದಾಖಲೆ ಇದ್ದರೆ ತೋರಿಸಲಿ. ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.