ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ

| Published : Oct 20 2025, 01:04 AM IST

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಾಯತ ಸಮಾಜದವರನ್ನು ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದು ಅರಬಾವಿ ಶಾಸಕ ಮತ್ತು ಬೆಮೂಲ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಗೆಯಲ್ಲಿ ನಮಗೆ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದೆ. 16 ಸ್ಥಾನಗಳ ಪೈಕಿ 13 ಸ್ಥಾನ ಗೆದಿದ್ದೇವೆ. 29 ವರ್ಷದ ನಂತರ ಮತ್ತೆ ಡಿಸಿಸಿ ಬ್ಯಾಂಕ್‌ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದೆ. ಲಿಂಗಾಯತ ಸಮಾಜದವರನ್ನು ಬ್ಯಾಂಕಿನ ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದು ಅರಬಾವಿ ಶಾಸಕ ಮತ್ತು ಬೆಮೂಲ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಜಿಲ್ಲೆಯ ಮಹಾ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಹಾಗಾಗೀ, ಜಿಲ್ಲೆಯ ಜನತೆಗೆ, ರೈತರಿಗೆ, ಶಾಸಕರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಒಂದು, ಎರಡು ಸೀಟ್ ಗೆದ್ದವರನ್ನು ನಾವು ಅಧ್ಯಕ್ಷ ಮಾಡುತ್ತ ಬಂದಿದ್ದೇವು. ಆದರೆ, ಈಗ ಅಧ್ಯಕ್ಷ, ಉಪಾಧ್ಯಕ್ಷ, ಅಪೆಕ್ಸ್ ಬ್ಯಾಂಕ್ ಡೈರೆಕ್ಟರ್ ನಮ್ಮವರನ್ನು ಮಾಡುತ್ತೇವೆ. ಈಗ ಡಿಸಿಸಿ ಬ್ಯಾಂಕಿಗೆ ಲಿಂಗಾಯತ ಸಮಾಜದವರಿಗೆ ನೂರಕ್ಕೆ ನೂರರಷ್ಟು ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 13 ಸ್ಥಾನ ಗೆಲುವು ಸಾಧಿಸಿದ್ದೇವೆ. ನಮ್ಮಲ್ಲಿ ಸ್ವಲ್ಪ ಅಸಮಾಧಾನ ಇದ್ದವು. ಅವುಗಳನ್ನು ಸರಿ ಮಾಡಿಕೊಳ್ಳುತ್ತೇವೆ ಎಂದರು.

ನಾವಿದ್ದರೂ ಬ್ಯಾಂಕ್‌ ಎನ್ನುತ್ತಿದ್ದವಿರಗೆ ಬ್ಯಾಂಕ್‌ ಸದೃಢ ಮಾಡಿ ಉತ್ತರ ಕೊಡುತ್ತೇವೆ. ರಾಜು ಕಾಗೆ, ಹಣೇಶ ಹುಕ್ಕೇರಿ ನಮ್ಮ ಬಣಕ್ಕೆ ಬೆಂಬಲ ಮಾಡುತ್ತಾರೆ. ಮೂವರು ಜನರ ಮಾತ್ರ ವಿರೋಧವಿದೆ. ಚುನಾವಣೆ ವೇಳೆ ನಮ್ಮ ಕುಟುಂಬವನ್ನು ಗುರಿಯಾಗಿಸಿ ಟೀಕೆ ಮಾಡಿದರು, ಆದರೆ, ನಾವು ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದಾಗಿ ಬ್ಯಾಂಕಿನ ಮೇಲೆ ಪರಿಣಾಮ ಬೀರಬಾರದು ಎಂದು ನಾವು ಮಾತನಾಡಲಿಲ್ಲ. ನಾವು ಸುಮ್ಮನೇ ಇದ್ದವೇ ಎಂದರೆ ಅದು ನಮ್ಮ ವಿಕ್ನೇಸ್‌ ಅಲ್ಲ. ಸಮಯ ಬಂದಾಗ ಎಲ್ಲರಿಗೂ ಉತ್ತರ ಕೊಡುತ್ತೇನೆ ಎಂದರು.

ಲಕ್ಷ್ಮಣ ಸವದಿಗೆ ಜಾರಕಿಹೊಳಿ ಸವಾಲ್:

ಡಿಸಿಸಿ ಬ್ಯಾಂಕಿಗೆ ನಮ್ಮವರೇ ಅಧ್ಯಕ್ಷರಾಗುತ್ತಾರೆ. ನಾನು ಐವತ್ತು ಕೋಟಿ ರು. ಬೆಟ್ಟಿಂಗ್ ಕಟ್ಟುತ್ತೇನೆ. ಲಕ್ಷ್ಮಣ ಸವದಿ ಬೇಕಾದರೆ ₹50 ಕೋಟಿ ಬೆಟ್ಟಿಂಗ್ ಕಟ್ಟಲಿ. ನಮ್ಮವರು ಆಗದಿದ್ದರೆ ಆಸ್ತಿ ಮಾರಿ ಐವತ್ತು ಕೋಟಿ ರು. ಕೊಡುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಅ‍ವರು ಲಕ್ಷ್ಮಣ ಸವದಿಗೆ ಸವಾಲು ಹಾಕಿದರು.

ಘಟಪ್ರಭಾ ಸಕ್ಕರೆ ಕಾರ್ಖಾನೆಯದ್ದು ₹33 ಕೋಟಿ ಬಾಕಿಯಿದೆ. ಅದನ್ನ ಒನ್ ಟೈಮ್ ಸೆಟ್ಲಿಮೆಂಟ್ ಮಾಡಿ ಸಾಲ ವಸೂಲಿ ಶುರು ಮಾಡುತ್ತೇನೆ. ಬಹಳಷ್ಟು ಜನ ನಮ್ಮನ್ನು ಭೇಟಿಯಾಗಿ ಹೋಗುತ್ತಾರೆ. ಅದನ್ನೆಲ್ಲಾ ನಾವು ಹೊರಗೆ ಹೇಳಲು ಆಗುವುದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ನನಗೆ ಯಾರು ಶತ್ರುಗಳಿಲ್ಲ. ಲಕ್ಷ್ಮಣ ಸವದಿಗೂ ನಮಗೂ ವೈಯಕ್ತಿಕವಾಗಿ ಎನೂ ಇಲ್ಲ. ಅವಿರೋಧವಾಗಿ ಆಯ್ಕೆಯಾಗಬೇಕು ಅಂದುಕೊಂಡಿದ್ದರು. ಅದು ಆಗದಿದ್ದಕ್ಕೆ ಸ್ವಲ್ಪ ಅಸಮಾಧಾನ ಆಗಿದ್ದಾರೆ ಎಂದರು.

ನಿರೀಕ್ಷೆಯಂತೆ ಗೆದ್ದಿದ್ದೇವೆ: ಸತೀಶ ಜಾರಕಿಹೊಳಿ

ಏಳು ಸ್ಥಾನಗಳಲ್ಲಿ ಇಂದು ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ರಾಮದುರ್ಗ ಹಾಗೂ ಹುಕ್ಕೇರಿಯಲ್ಲಿ ಸೋತಿದ್ದೇವೆ. ಮೊದಲೇ ಹೇಳಿದ ಹಾಗೇ ನಿರೀಕ್ಷೆಯಂತೆ ನಾವು ಗೆದ್ದಿದ್ದೇವೆ. ಗೆಲ್ಲುವುದಿಲ್ಲ ಎಂದು ಗೊತ್ತಿದ್ದೂ ಅಪಪ್ರಚಾರ ಮಾಡಿದರು. ಆದರೆ ಅದು ಯಾವುದು ಕೂಡ ವರ್ಕೌಟ್ ಆಗುವುದಿಲ್ಲ. ಜಾತಿ ಟ್ರಂಪ್ ಕಾರ್ಡ್ ವರ್ಕೌಟ್ ಆಗಿಲ್ಲ, ಜನರ ಉತ್ತರ ಕೊಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ‌ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಚುನಾವಣೆ ದೊಡ್ಡ ಸುದ್ದಿಯಾಗಿದೆ. ಲಕ್ಷ್ಮಣ ಸವದಿ ಅವರು ಎಲ್ಲರೂ ಒಂದೇ ಗುಂಪಿನವರು ಎಂದು ಹೇಳಿ ಬೀಜ ಬಿತ್ತಿದ್ದಾರೆ. ಕೈಯಲ್ಲಿ ಚೀಟಿ ಹಿಡಿದು ಅಧ್ಯಕ್ಷ ನಮ್ಮವರು ಆಗುತ್ತಾರೆ ಎಂದು ಹೇಳಿದ್ದಾರೆ. ಅದು ಯಾವುದು ಕೂಡ ವರ್ಕೌಟ್ ಆಗುವುದಿಲ್ಲ. ಅಧ್ಯಕ್ಷ ಆಗುವವರೆಗೂ ಚರ್ಚೆ ಆಗಲಿ ಎಂದು ಹೊಸ ತಳಿ ಬಿಟ್ಟಿದ್ದಾರೆ ಎಂದು ಟಾಂಗ್‌ ನೀಡಿದರು.

ರಮೇಶ ಕತ್ತಿ ಅವರು ಎಕೆ 47 ಪ್ರಕರಣ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಮುಗಿದ ಹೋದ ಅಧ್ಯಾಯವಾಗಿದೆ. ತನಿಖೆ ಮಾಡಲಿ ಆಗ ನೋಡೋಣ ಎಂದರು. ರಮೇಶ ಕತ್ತಿ ಜಾತಿ ನಿಂದನೆ ಮಾಡಿದ್ದರೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತಾರೆ. ಕೆಲವರು ಠಾಣೆಗೆ ದೂರು ಕೊಡಬಹುದು. ಎಲ್ಲರಿಗೂ ಕಾನೂನು ಅವಕಾಶವಿದೆ ಎಂದರು.