ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಜಿಲ್ಲಾ ಮಧ್ಯವರ್ತಿ (ಕೆಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರಲ್ಲಿ 11 ಅಭ್ಯರ್ಥಿಗಳು ಭಾನುವಾರ ವಾಪಸ್ ಪಡೆದಿದ್ದಾರೆ.ಇದರೊಂದಿಗೆ ಸ್ಪರ್ಧಾ ಕಣ ನಿಚ್ಚಳವಾಗಿದ್ದು ಅವಿರೋಧ ಆಯ್ಕೆಯ 3 ಕ್ಷೇತ್ರ ಹೊರತುಪಡಿಸಿ 13 ನಿರ್ದೇಶಕ ಸ್ಥಾನಗಳಿಗೆ 30 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಈ ಮಧ್ಯೆ, 11 ಅಭ್ಯರ್ಥಿಗಳು ನಾಮಪತ್ರ ಹಿಂದೆ ಪಡೆದಿದ್ದರ ಪರಿಣಾಮವಾಗಿ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.
ಶಿರಸಿ ಕ್ಷೇತ್ರದಿಂದ ಎಸ್.ಎನ್. ಹೆಗಡೆ, ಯಲ್ಲಾಪುರ ಮತ ಕ್ಷೇತ್ರದಿಂದ ಆರ್.ಎನ್. ಹೆಗಡೆ ಗೋರ್ಸಗದ್ದೆ, ಕಾರವಾರ ಮತ ಕ್ಷೇತ್ರದಿಂದ ಸುರೇಶ ರಾಮಾ ಪೆಡ್ನೇಕರ್, ಶಿರಸಿ ಮತ ಕ್ಷೇತ್ರದಿಂದ ಗಣಪತಿ ವೆಂಕಟರಮಣ ಜೋಶಿ, ಜೋಯಿಡಾ ಮತ ಕ್ಷೇತ್ರದಿಂದ ಶ್ರೀಕಾಂತ ಬಾವುರಾವ್ ದೇಸಾಯಿ, ಹೊನ್ನಾವರ ಮತ ಕ್ಷೇತ್ರದಿಂದ ನಾರಾಯಣ ಹೆಗಡೆ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದಿಂದ ರಾಮಚಂದ್ರ ಹೆಗಡೆ, ಅಂಕೋಲಾ ಮತ ಕ್ಷೇತ್ರದಿಂದ ಗೋಪಾಲಕೃಷ್ಣ ನಾಯಕ, ಶಿರಸಿ ಮತ ಕ್ಷೇತ್ರದಿಂದ ಬಾಲಚಂದ್ರ ಶಾಂತಾರಾಮ ಶಾಸ್ತ್ರಿ, ಗ್ರಾಹಕರ ಸಹಕಾರಿ ಸಂಘ ಕ್ಷೇತ್ರದಿಂದ ವಿನಾಯಕ ಹೆಗಡೆ ಹಾಗೂ ಹೊನ್ನಾವರ ಮತ ಕ್ಷೇತ್ರದಿಂದ ಶಿವಾನಂದ ಹೆಗಡೆ ನಾಮಪತ್ರ ಹಿಂಪಡೆದಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಶಿವರಾಮ ಹೆಬ್ಬಾರ ಬಣ ನಡುವಿನ ಪೈಪೋಟಿ ಎಂದೇ ಪರಿಗಣಿತವಾದ ಈ ಚುನಾವಣೆಯಲ್ಲಿ ಒಟ್ಟಾರೆ ಎಲ್ಲ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆಯಬಹುದೇ ಎಂದು ನಿರೀಕ್ಷಿಸಲಾಗಿತ್ತಾದರೂ ಅಂತನ ಬೆಳವಣಿಗೆ ನಡೆದಿಲ್ಲ. ಕೆಲವು ಕ್ಷೇತ್ರಗಳಲ್ಲಿ ಅನಿರೀಕ್ಷಿತವಾಗಿ ಕಣದಿಂದ ಹಿಂದೆ ಸರಿದಿದ್ದು ಅಚ್ಚರಿಗೆ ಕಾರಣವಾಯಿತು.
ಅವಿರೋಧ ಆಯ್ಕೆ:ಭಟ್ಕಳ ತಾಲೂಕು ಪ್ರಾಥಮಿಕ ಸಹಕಾರಿ ಸಂಘಗಳ ಕ್ಷೇತ್ರದ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಮಂಕಾಳ ವೈದ್ಯ, ಅಂಕೋಲಾ ತಾಲೂಕು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಭೀರಣ್ಣ ಬೊಮ್ಮಯ್ಯ ನಾಯ್ಕ ಹಾಗೂ ಹೊನ್ನಾವರ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ವಿ.ಕೆ. ವಿಶಾಲ ಅವಿರೋಧವಾಗಿ ಆಯ್ಕೆಗೊಂಡರು. ಇವರೆಲ್ಲರಿಗೆ ಚುನಾವಣಾಧಿಕಾರಿ ಕೆ.ವಿ. ಕಾವ್ಯಾರಾಣಿ ಭಾನುವಾರ ಸಂಜೆ ಪ್ರಮಾಣಪತ್ರ ನೀಡಿದರು. ನಂತರ ಹೊರಬಂದ ಸಚಿವ ಮಂಕಾಳ ವೈದ್ಯ ಹಾಗೂ ವಿ.ಕೆ.ವಿಶಾಲ ಅವರನ್ನು ಬೆಂಬಲಿಗರು ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನು ಅಂಕೋಲಾ ತಾಲೂಕು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ಬೀರಣ್ಣ ಬೊಮ್ಮಯ್ಯ ನಾಯಕ ಅವರನ್ನು ಶಾಸಕ ಶಿವರಾಮ ಹೆಬ್ಬಾರ ಅಭಿನಂದಿಸಿದರು.