ಸಾರಾಂಶ
ನವದೆಹಲಿ: ದೇಶ ದೀಪಾವಳಿ ಆಚರಣೆಯಲ್ಲಿ ತೊಡಗಿರುವ ಹೊತ್ತಿನಲ್ಲಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಜಹಾಂಗೀರ್ ಮತ್ತು ಬೇಸನ್ ಉಂಡೆ ತಯಾರಿಸಿ ಸಂಭ್ರಮಿಸಿದ್ದಾರೆ. ದೆಹಲಿಯ ಖ್ಯಾತ ಘಂಟೇವಾಲಾ ಮಿಠಾಯಿ ಅಂಗಡಿಗೆ ತರಳಿದ ರಾಹುಲ್, ಅಲ್ಲಿ ತಮ್ಮ ಪಾಕಕಲೆ ಪ್ರದರ್ಶಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಇದರ ವಿಡಿಯೋವನ್ನು ರಾಹುಲ್ ಹಂಚಿಕೊಂಡಿದ್ದು, ಅದರಲ್ಲಿ ಅವರು ಬಾಣಸಿಗನಂತೆ ಏಪ್ರನ್, ತಲೆಗೆ ಟೋಪಿ ಧರಿಸಿ, ಕೈಯ್ಯಾರೆ ಜಹಾಂಗೀರನ್ನು ಎಣ್ಣೆಗೆ ಬಿಡುತ್ತಿರುವುದು ಹಾಗೂ ಬೇಸನ್ ಉಂಡೆ ತಯಾರಿಸುವುದನ್ನು ಕಾಣಬಹುದು.
‘ದೀಪಾವಳಿಯ ನಿಜವಾದ ಮಧುರತೆ ಊಟದ ತಟ್ಟೆಯಲ್ಲಿ ಮಾತ್ರವಲ್ಲ, ಸಂಬಂಧ ಮತ್ತು ಸಮುದಾಯಗಳಲ್ಲೂ ಇದೆ. ದೇಶವು ಹರ್ಷ, ಸಂತಸ, ಸಮೃದ್ಧಿಯ ದೀವಿಗೆಗಳಿಂದ ಬೆಳಗಿ. ಎಲ್ಲಾ ಮನೆಗಳಲ್ಲಿ ಪ್ರೀತಿ ನೆಲೆಸಲಿ’ ಎಂದು ರಾಹುಲ್ ಹಾರೈಸಿದ್ದಾರೆ.
ಬೇಗ ಮದುವೆಯಾಗಿ: ರಾಹುಲ್‌ಗೆ ಮಿಠಾಯಿ ಅಂಗಡಿ ಮಾಲೀಕ ಒತ್ತಾಯ
ನವದೆಹಲಿ: ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ಸಿಹಿತಿನಿಸು ತಯಾರು ಮಾಡಿದ್ದರಿಂದ ಖುಷಿಯಾಗಿರುವ ಘಂಟೇವಾಲ ಅಂಗಡಿಯ ಮಾಲೀಕ ಸುಶಾಂತ್ ಜೈನ್, ‘ನೀವು (ರಾಹುಲ್) ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದು ಇಡೀ ದೇಶವೇ ಮಾತನಾಡುತ್ತಿದೆ. ನೀವು ಬೇಗ ಮದುವೆ ಆಗಿ. ಆಗ ಮದುವೆಗಾಗಿ ಇನ್ನಷ್ಟು ಸಿಹಿತಿಂಡಿಗಳಿಗೆ ಆರ್ಡರ್ ಬರುತ್ತದೆ. ಇದಕ್ಕಾಗಿ ನಾವು ಕಾಯುತ್ತಿದ್ದೇವೆ’ ಎಂದು ಹೇಳಿ ಚಟಾಕಿ ಹಾರಿಸಿದರು.