ಸಚಿವ ಪ್ರಿಯಾಂಗ್‌ ಖರ್ಗೆ ಅವರು ರಾಹುಲ್ ಗಾಂಧಿ ಅವರ ಆಲೋಚನೆಗಳಿಗೆ ಹೆಚ್ಚು ನಿಷ್ಠಾವಂತ ಎಂದು ಸಾಬೀತುಪಡಿಸಲು ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಚಿವ ಪ್ರಿಯಾಂಗ್‌ ಖರ್ಗೆ ಅವರು ರಾಹುಲ್ ಗಾಂಧಿ ಅವರ ಆಲೋಚನೆಗಳಿಗೆ ಹೆಚ್ಚು ನಿಷ್ಠಾವಂತ ಎಂದು ಸಾಬೀತುಪಡಿಸಲು ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಟೀಕಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೂನಿಯರ್‌ ಖರ್ಗೆ ಆದ ಪ್ರಿಯಾಂಕ್‌ ಖರ್ಗೆ ಕರ್ನಾಟಕದಲ್ಲಿ ಸಾಕಷ್ಟು ಗದ್ದಲ ಎಬ್ಬಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಪ್ರತಿ ದಿನ ಆರ್‌ಎಸ್‌ಎಸ್‌ ಬಗ್ಗೆ ಪತ್ರ ಬರೆಯುತ್ತಾ, ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದು, ಇದರ ಹಿಂದೆ ಒಂದು ದೊಡ್ಡ ಕಾರಣವೇ ಇರಬೇಕು ಎಂದಿದ್ದಾರೆ.

ರಾಜ್ಯ ರಾಜಕೀಯ ವಲಯದಲ್ಲಿ ಅಧಿಕಾರ ಹಸ್ತಾಂತರ ಕುರಿತಂತೆ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಜೂನಿಯರ್‌ ಖರ್ಗೆ ಅವರು ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತಲೂ ಹೆಚ್ಚು ಸೈದ್ಧಾಂತಿಕರಾಗಿ ಕಾಣಲು ಪ್ರಾರಂಭಿಸಿದ್ದಾರೆ. ಅಧಿಕಾರಕ್ಕಾಗಿ ಪೈಪೋಟಿ ನಡೆದಿರುವಾಗ ಕಾಂಗ್ರೆಸ್‌ನ ಹೈಕಮಾಂಡ್‌ ಮೆಚ್ಚಿಸಲು ಆರ್‌ಎಸ್‌ಎಸ್‌ ಅನ್ನು ಬಲವಾಗಿ ಟೀಕಿಸುವುದೇ ಉತ್ತಮ ಮಾರ್ಗ ಎಂದು ಅವರು ತಿಳಿದಂತೆ ಕಾಣುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ ಪ್ರಿಯಾಂಕ್‌ ಖರ್ಗೆ ಅವರ ಉತ್ಸಾಹ, ಹೆಚ್ಚುವರಿ ಸೈದ್ಧಾಂತಿಕ ನಿಷ್ಠೆ ಗಮನಿಸಿದೆ. ಸಿದ್ಧರಾಮಯ್ಯ ಅವರು ಭವಿಷ್ಯದಲ್ಲಿ ಸಿಎಂ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಪ್ರಿಯಾಂಕ್‌ ಖರ್ಗೆ ಅವರನ್ನು ಸಿಎಂ ಮಾಡುತ್ತಾರೆ ಎಂದು ಭಾವಿಸಿದ್ದೇನೆ. ರಾಜಕೀಯದಲ್ಲಿ ಸುದೀರ್ಘ ಕಾಲದಿಂದ ಇದ್ದರೂ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಸಿಎಂ ಕುರ್ಚಿ ಸಿಕ್ಕಿಲ್ಲ. ಕನಿಷ್ಠ ಅವರ ಮಗನಿಗಾದರೂ ನಷ್ಟ ಪರಿಹಾರ ನೀಡಬೇಕು. ಸಿಎಂ ಆಗಲು ಪ್ರಯತ್ನಿಸಿದರೆ, ಕನಿಷ್ಠ ಡಿಸಿಎಂ ಆಗಬಹುದು ಎನ್ನುವುದು ಪ್ರಿಯಾಂಕ್‌ ಖರ್ಗೆಗೆ ತಿಳಿದಿದೆ ಎಂದು ಲಹರ್‌ ಸಿಂಗ್‌ ಮಾರ್ಮಿಕವಾಗಿ ಹೇಳಿದ್ದಾರೆ.