ಸಾರಾಂಶ
ಗಾಜಾ: ಇಸ್ರೇಲ್-ಹಮಾಸ್ ಕದನವಿರಾಮ ಜಾರಿ ಆಗಿದ್ದರೂ ಭಾನುವಾರ ಅದರ ಬಹುದೊಡ್ಡ ಉಲ್ಲಂಘನೆ ಆಗಿದ್ದು, ದಕ್ಷಿಣ ಗಾಜಾದ ರಫಾ ನಗರದ ಮೇಲೆ ಇಸ್ರೇಲ್ ಭೀಕರ ವಾಯುದಾಳಿ ನಡೆಸಿದೆ. ಇದರಲ್ಲಿ 6 ಜನ ಸಾವನ್ನಪ್ಪಿದ್ದು, ಹಲವು ಕಟ್ಟಡಗಳು ದಾಳಿಯಲ್ಲಿ ನಾಶವಾಗಿವೆ.
ಕದನವಿರಾಮದ ನಂತರವೂ ಹಮಾಸ್ ಉಗ್ರರು ಇಸ್ರೇಲ್ ಪಡೆಗಳ ಮೇಲೆ ದಾಳಿ ನಡೆಸಿ, ಐಇಡಿ ಸ್ಫೋಟಿಸಿ ಹಲವು ಯೋಧರ ಸಾವಿಗೆ ಕಾರಣವಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ವಾಯುದಾಳಿ ನಡೆಸಿದ್ದಾಗಿ ಅಲ್-ಜಜೀರಾ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಸಾವು-ನೋವಿನ ಮಾಹಿತಿ ಲಭಿಸಿಲ್ಲ.
ಶನಿವಾರವಷ್ಟೇ ಟೀವಿ ಚಾನಲ್ ಒಂದರಲ್ಲಿ ಮಾತನಾಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ಹಮಾಸ್ ಸಂಪೂರ್ಣವಾಗಿ ನಿಶ್ಶಸ್ತ್ರೀಕರಣಗೊಂಡು ಪ್ಯಾಲೆಸ್ತೀನ್ ಪ್ರಾಂತ್ಯದಲ್ಲಿ ಸೇನಾ ಉಪಸ್ಥಿತಿ ಇಲ್ಲವಾಗುವ ತನಕ ಯುದ್ಧ ನಿಲ್ಲುವುದಿಲ್ಲ. ಇದನ್ನು ಒಳ್ಳೆಯ ರೀತಿ ಮಾಡಲು ಯತ್ನಿಸುತ್ತೇವೆ. ಆಗದಿದ್ದರೆ ಬೇರ ವಿಧಾನ ಅನುಸರಿಸುತ್ತೇನೆ’ ಎನ್ನುವ ಮೂಲಕ ದಾಳಿಯ ಪರೋಕ್ಷ ಸುಳಿವು ನೀಡಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಯಾರಿಸಿದ್ದ 20 ಅಂಶಗಳ ಗಾಜಾ ಶಾಂತಿ ಯೋಜನೆಯನ್ನು ಪಾಲಿಸುವುದಾಗಿ ಇಸ್ರೇಲ್ ಹಾಗೂ ಹಮಾಸ್ ಒಪ್ಪಿದ್ದರಿಂದ ಅ.10ರಿಂದ ಕದನವಿರಾಮ ಜಾರಿಯಾಗಿತ್ತು.