ನೀಟ್‌ ಹಗರಣ: ಸಿಬಿಐ ತನಿಖೆ ಆರಂಭ

| Published : Jun 24 2024, 01:30 AM IST / Updated: Jun 24 2024, 04:12 AM IST

ಸಾರಾಂಶ

ಮೇ 5ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್‌’ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದೆ.

 ನವದೆಹಲಿ : ಮೇ 5ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್‌’ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಶನಿವಾರ ರಾತ್ರಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಸಿಬಿಐ ಅತ್ಯಂತ ತ್ವರಿತಗತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಈಗಾಗಲೇ ಗುಜರಾತ್‌, ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶ, ಹರ್ಯಾಣ, ಮಹಾರಾಷ್ಟ್ರ ಸೇರಿ ಕೆಲವು ರಾಜ್ಯಗಳಲ್ಲಿ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಜಾಲ ಇರುವುದು ಪತ್ತೆ ಆಗಿದ್ದು, ಆಯಾ ರಾಜ್ಯಗಳಲ್ಲಿ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ‘ಈಗ ಸಿಬಿಐ, ವಿವಿಧ ರಾಜ್ಯಗಳಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣಗಳನ್ನು ತನ್ನ ವ್ಯಾಪ್ತಿಯ ಅಡಿಯಲ್ಲಿ ತರಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊದಲು ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು ಎನ್ನಲಾದ ಗುಜರಾತ್‌ನ ಗೋಧ್ರಾ ಹಾಗೂ ಬಿಹಾರಕ್ಕೆ ತೆರಳಿ ತನಿಖೆ ಆರಂಭಿಸುವ ಇರಾದೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ವಿಶೇಷ ತಂಡಗಳನ್ನೂ ರಚಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವಾಲಯದ ಉಲ್ಲೇಖದ ಮೇರೆಗೆ ಸಂಸ್ಥೆಯು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 420 (ವಂಚನೆ) ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ವಿವಾದ ಏನು?:

ನೀಟ್‌ ಪರೀಕ್ಷೆ 4,750 ಕೇಂದ್ರಗಳಲ್ಲಿ ನಡೆದಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಈ ಪೈಕಿ ಸುಮಾರು 1500 ವಿದ್ಯಾರ್ಥಿಗಳು ಗ್ರೇಸ್‌ ಅಂಕ ಪಡೆದಿದ್ದರು. ಅಲ್ಲದೆ, ಅನೇಕ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದಿತ್ತು. ತತ್ಪರಿಣಾಮ ಹಿಂದೆಂದೂ ಕಂಡು ಕೇಳರಿಯದ ರೀತಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದರು. ಈ ಅಂಶಗಳು ವಿವಾದಕ್ಕೆ ಕಾರಣವಾಗಿದ್ದವು. ಹೀಗಾಗಿ ನೀಟ್‌ ಅಕ್ರಮಗಳ ತನಿಖೆಗೆ ಆಗ್ರಹಿಸಿ ದೇಶವ್ಯಾಪಿ ಹೋರಾಟ ಆರಂಭವಾಗಿದ್ದವು. ಅನೇಕರು ಸುಪ್ರೀಂ ಕೋರ್ಟ್‌ಗೂ ಹೋಗಿದ್ದು, ಅಲ್ಲಿ ವಿಚಾರಣೆ ನಡೆಯುತ್ತಿದೆ.

ಈ ನಡುವೆ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಶನಿವಾರ ರಾತ್ರಿ ಸಿಬಿಐ ತನಿಖೆಗೆ ಆದೇಶಿಸಿತ್ತು ಹಾಗೂ ಪರೀಕ್ಷೆ ನಡೆಸುವ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮುಖ್ಯಸ್ಥರನ್ನು ಹುದ್ದೆಯಿಂದ ಕಿತ್ತುಹಾಕಿತ್ತು.