ಪಾಕ್‌ ಸೇನೆಗಾಗಿ ಚೀನಾ ಕೊಟ್ಟ ಮೊಬೈಲ್‌ ಸಾಧನ ಉಗ್ರರ ಕೈಗೆ

| Published : Jun 24 2024, 01:30 AM IST / Updated: Jun 24 2024, 04:13 AM IST

ಪಾಕ್‌ ಸೇನೆಗಾಗಿ ಚೀನಾ ಕೊಟ್ಟ ಮೊಬೈಲ್‌ ಸಾಧನ ಉಗ್ರರ ಕೈಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನ ಸೇನೆಯ ಸಂವಹನ ಉದ್ದೇಶಕ್ಕಾಗಿ ಚೀನಾ ಕಂಪನಿಗಳು ವಿಶೇಷವಾಗಿ ತಯಾರಿಸಿಕೊಟ್ಟಿರುವ ಟೆಲಿಕಾಂ ಉಪಕರಣಗಳು ಭಾರತದ ಮೇಲೆ ದಾಳಿಗೆ ಬರುತ್ತಿರುವ ಉಗ್ರರ ಕೈ ಸೇರುತ್ತಿರುವ ಆತಂಕಕಾರಿ ಸಂಗತಿ ಪತ್ತೆಯಾಗಿದೆ.

 ಶ್ರೀನಗರ : ಪಾಕಿಸ್ತಾನ ಸೇನೆಯ ಸಂವಹನ ಉದ್ದೇಶಕ್ಕಾಗಿ ಚೀನಾ ಕಂಪನಿಗಳು ವಿಶೇಷವಾಗಿ ತಯಾರಿಸಿಕೊಟ್ಟಿರುವ ಟೆಲಿಕಾಂ ಉಪಕರಣಗಳು ಭಾರತದ ಮೇಲೆ ದಾಳಿಗೆ ಬರುತ್ತಿರುವ ಉಗ್ರರ ಕೈ ಸೇರುತ್ತಿರುವ ಆತಂಕಕಾರಿ ಸಂಗತಿ ಪತ್ತೆಯಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಸದೆಬಡಿದಾಗ ಚೀನಾ ನಿರ್ಮಿತ ಮೊಬೈಲ್‌ ಸಾಧನವಾಗಿರುವ ‘ಅಲ್ಟ್ರಾಸೆಟ್’ ಭಯೋತ್ಪಾದಕರ ಬಳಿ ಪತ್ತೆಯಾಗಿವೆ.

ಭಾರತದಲ್ಲಿ ದಾಳಿ ನಡೆಸುತ್ತಿರುವ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ಬಳಿ ಈ ಸಾಧನಗಳು ಪತ್ತೆಯಾಗುವುದರೊಂದಿಗೆ ಭಯೋತ್ಪಾದಕ ಸಂಘಟನೆಗಳು ಪಾಕ್‌ ಸೇನೆಯಿಂದಲೇ ತರಬೇತಿ, ಶಸ್ತ್ರಾಸ್ತ್ರ ಹಾಗೂ ಇನ್ನಿತರೆ ವಸ್ತುಗಳನ್ನು ಪಡೆಯುತ್ತಿರುವುದಕ್ಕೆ ಮತ್ತೊಮ್ಮೆ ಸಾಕ್ಷ್ಯ ಸಿಕ್ಕಂತಾಗಿದೆ.

ಏನಿದು ಅಲ್ಟ್ರಾಸೆಟ್‌?:

ಪಾಕಿಸ್ತಾನ ಸೇನೆಯ ಉದ್ದೇಶಕ್ಕಾಗಿ ಚೀನಾದ ಕಂಪನಿಗಳು ವಿಶೇಷವಾಗಿ ವಿನ್ಯಾಸ ಮಾಡಿಕೊಟ್ಟಿರುವ ಮೊಬೈಲ್‌ ಸಾಧನಗಳು ಇವು. ಸಾಮಾನ್ಯ ಮೊಬೈಲ್‌ ಫೋನ್‌ಗಳಂತೆ ಜಿಎಸ್‌ಎಂ ಅಥವಾ ಸಿಡಿಎಂಎ ತಂತ್ರಜ್ಞಾನದ ಮೇಲೆ ಅವಲಂಬಿತವಾಗದೆ ಕಾರ್ಯನಿರ್ವಹಿಸುತ್ತವೆ.

ರೇಡಿಯೋ ತರಂಗಾಂತರಗಳ ಮೂಲಕ ಸಂದೇಶ ರವಾನೆ ಹಾಗೂ ಸ್ವೀಕಾರಕ್ಕೆ ಇವು ಬಳಕೆಗೆ ಬರುತ್ತವೆ. ಪ್ರತಿ ಅಲ್ಟ್ರಾಸೆಟ್‌ ಕೂಡ ಗಡಿಯಾಚೆಗಿನ ನಿಯಂತ್ರಣ ಕೊಠಡಿ ಜತೆ ಲಿಂಕ್‌ ಆಗಿರುತ್ತದೆ. ನೇರವಾಗಿ ಎರಡು ಅಲ್ಟ್ರಾಸೆಟ್‌ಗಳ ನಡುವೆ ಸಂವಹನ ನಡೆಸಲು ಆಗದು. ಈ ಅಲ್ಟ್ರಾಸೆಟ್‌ಗಳ ಸಂದೇಶವನ್ನು ಚೀನಾದ ಉಪಗ್ರಹಗಳು ರವಾನೆ ಮಾಡುತ್ತವೆ. ಇವು ಗೂಢ ಲಿಪಿಯ ಮೂಲಕ ವರ್ಗವಾಗುತ್ತವೆ.

ಕಳೆದ ವರ್ಷ ಜು.17, 18ರಂದು ಜಮ್ಮುವಿನ ಪೂಂಛ್‌ ಜಿಲ್ಲೆಯ ಸುರನ್‌ಕೋಟ್‌ನಲ್ಲಿ ನಡೆದ ಎನ್‌ಕೌಂಟರ್‌ ಹಾಗೂ ಇದೇ ವರ್ಷ ಏ.26ರಂದು ಉತ್ತರ ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆ ವೇಳೆ ಈ ಅಲ್ಟ್ರಾಸೆಟ್‌ಗಳು ಉಗ್ರರ ಬಳಿ ಪತ್ತೆಯಾಗಿರುವುದು ಭದ್ರತಾ ಪಡೆಗಳ ಆತಂಕಕ್ಕೆ ಕಾರಣವಾಗಿದೆ.