ಸಾರಾಂಶ
ನವದೆಹಲಿ: ಇತ್ತೀಚೆಗೆ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮತಪತ್ರಗಳನ್ನು ವಿರೂಪಗೊಳಿಸಿದ ಆರೋಪದ ಕುರಿತು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿದೆ.
ಜೊತೆಗೆ ಮತಪತ್ರಗಳು ಮತ್ತು ಚುನಾವಣಾ ಪ್ರಕ್ರಿಯೆಗಳ ವಿಡಿಯೋಗಳನ್ನು ಸಂರಕ್ಷಿಸುವಂತೆ ಆದೇಶಿಸಿದೆ.ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆಪ್ ಕೌನ್ಸಿಲರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಇದೇ ವೇಲೇ ಚುನಾವಣೆಯ ವಿಡಿಯೋಗಳನ್ನು ಕೂಡಾ ವೀಕ್ಷಿಸಿತು.
ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ, ಚುನಾವಣಾಧಿಕಾರಿ ಮತಪತ್ರ ವಿರೂಪಗೊಳಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿ, ಗಮನಿಸಿದ ನ್ಯಾಯಾಲಯ, ಚಂಡೀಗಢ ಮಹಾನಗರ ಪಾಲಿಕೆ ಸೇರಿದಂತೆ ಇತರ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಇದು ಪ್ರಜಾಪ್ರಭುತ್ವವನ್ನು ಅಣಕಿಸುವ ಪ್ರಕ್ರಿಯೆಯಾಗಿದೆ. ಇದನ್ನು ನೋಡಿ ನಾವು ದಿಗ್ಭ್ರಮೆಗೊಂಡಿದ್ದೇವೆ. ಪ್ರಜಾಪ್ರಭುತ್ವವನ್ನು ಈ ರೀತಿ ಕೊಲೆ ಮಾಡಲು ನಾವು ಬಿಡುವುದಿಲ್ಲ ಎಂದು ಸಿಜೆ ಹೇಳಿದ್ದಾರೆ.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ಕಾರಣ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.