ತೆಲಂಗಾಣ ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳೇ ಬಲ

| Published : Mar 31 2024, 02:03 AM IST / Updated: Mar 31 2024, 09:08 AM IST

Congress flag

ಸಾರಾಂಶ

ಕಳೆದ ವರ್ಷದ ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ತೆಲಂಗಾಣ ಕಾಂಗ್ರೆಸ್‌, ತಾನು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು 2024ರ ಲೋಕಸಭಾ ಚುನಾವಣೆಯಲ್ಲೂ ತನ್ನ ಕೈಹಿಡಿಯಲಿದೆ

ಹೈದ್ರಾಬಾದ್‌: ಕಳೆದ ವರ್ಷದ ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ತೆಲಂಗಾಣ ಕಾಂಗ್ರೆಸ್‌, ತಾನು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು 2024ರ ಲೋಕಸಭಾ ಚುನಾವಣೆಯಲ್ಲೂ ತನ್ನ ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿದೆ. ಮೇಲ್ನೋಟಕ್ಕೆ ಇದು ಒಂದಷ್ಟು ನಿಜ ಎಂಬಂತೆ ಕಂಡುಬರುತ್ತಿರುವುದು ಹೌದು. ಅಷ್ಟರಮಟ್ಟಿಗೆ ಇತರೆ ಪಕ್ಷಗಳಿಗಿಂತ ರಾಜ್ಯದಲ್ಲಿ ಕಾಂಗ್ರೆಸ್‌ ಮುನ್ನಡೆಯಲ್ಲಿದೆ.

ಇನ್ನೊಂದೆಡೆ ವರ್ಷದಿಂದ ವರ್ಷಕ್ಕೆ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ, ಮೇ 13ರಂದು ಒಂದೇ ಹಂತದ ಚುನಾವಣೆಯಲ್ಲಿ ರಾಜ್ಯದ 17 ಲೋಕಸಭಾ ಕ್ಷೇತ್ರಗಳ ಪೈಕಿ 12 ಸ್ಥಾನ ಗೆಲ್ಲುವ ದೊಡ್ಡ ಗುರಿ ಹಾಕಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೆ.14ರಷ್ಟು ಮತ ಪಡೆದಿದ್ದು ಮಾತ್ರವಲ್ಲದೇ 8 ಸ್ಥಾನಗಳನ್ನು ಗೆದ್ದಿತ್ತು.

ಇನ್ನೊಂದೆಡೆ ದಶಕದ ಕಾಲ ರಾಜ್ಯವನ್ನಾಳಿದ ಮಾಜಿ ಸಿಎಂ ಚಂದ್ರಶೇಖರ್‌ ರಾವ್‌ ಅವರ ಪಕ್ಷ ಸರಣಿಯಾಗಿ ಹಿನ್ನಡೆ ಅನುಭವಿಸುತ್ತಿದೆ. ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿಂದ ಪಕ್ಷ ಇನ್ನೂ ಚೇತರಿಸಿಕೊಂಡಿಲ್ಲ. ಹಲವು ನಾಯಕರು ಇತ್ತೀಚೆಗೆ ಪಕ್ಷ ತೊರೆದಿದ್ದಾರೆ. ಟೆಲಿಫೋನ್‌ ಕದ್ಧಾಲಿಕೆ ಹಗರಣ ಮಾಜಿ ಸಿಎಂ ರಾವ್‌ ಅವರ ಪಕ್ಷವನ್ನು ಆವರಿಸಿಕೊಂಡಿದೆ. ದೆಹಲಿ ಲಿಕ್ಕರ್ ಹಗರಣದಲ್ಲಿ ರಾವ್‌ ಪುತ್ರಿ ಕವಿತಾ ಬಂಧನ, ಪಕ್ಷದ ಹುಮ್ಮಸ್ಸನ್ನು ಮತ್ತಷ್ಟು ಕುಗ್ಗಿಸಿದೆ.

ಪ್ರಮುಖ ಕ್ಷೇತ್ರಗಳು: ಕರೀಂನಗರ, ಮೇದಕ್‌, ಮಲ್ಕಾಜ್‌ಗಿರಿ, ನಿಜಾಮಾಬಾದ್‌, ಹೈದ್ರಾಬಾದ್‌, ನಲ್ಗೊಂಡ, ಅದಿಲಾಬಾದ್‌, ವಾರಂಗಲ್‌.

ಪ್ರಮುಖ ಅಭ್ಯರ್ಥಿಗಳು: ನೀಲಂ ಮಧು, ಕಿರಣ್‌ ಕುಮಾರ್‌ ರೆಡ್ಡಿ, ಅಸಾಸುದ್ದೀನ್‌ ಒವೈಸಿ, ಕಿಶನ್‌ ರೆಡ್ಡಿ, ಕೆ.ಅರುಣಾ, ಮಾಧವಿ ಲತಾ, ಗದ್ದಂ ಶ್ರೀನಿವಾಸ್‌ ಯಾದವ್‌, ನಮ ನಾಗೇಶ್ವರ ರಾವ್‌.ಪಕ್ಷಗಳ ಬಲಾಬಲ:ಕಾಂಗ್ರೆಸ್‌ ಹಾಲಿ ರಾಜ್ಯದಲ್ಲಿ ಆಡಳಿತಾರೂಢ ಪಕ್ಷ, ವಿಧಾನಸಭೆಯ ಗೆಲುವಿನ ಹುಮ್ಮಸ್ಸು ಪಕ್ಷದ ಕಾರ್ಯಕರ್ತರು, ನಾಯಕರಲ್ಲಿದೆ. ಇದರ ಜೊತೆಗೆ ವಿಧಾನಭಾ ಚುನಾವಣೆ ಮುನ್ನ ಘೋಷಿಸಿದ ಗ್ಯಾರಂಟಿ ಯೋಜನೆಗಳ ಜಾರಿ ಪಕ್ಷದ ಪಾಲಿಗೆ ದೊಡ್ಡ ಬೋನಸ್‌. ಇನ್ನು ಯುವನಾಯಕ, ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರ ಜನಪ್ರಿಯತೆ ಕೂಡಾ ಪಕ್ಷದ ಪಾಲಿಗೆ ಲಾಭ ಗರುವ ನಿರೀಕ್ಷೆ ಇದೆ. ಬಿಆರ್‌ಎಸ್ ಶಕ್ತಿ ಪತನಗೊಂಡು, ಹೋರಾಟಕ್ಕಿರುವುದು ಬಿಜೆಪಿ ಮಾತ್ರ ಎಂಬ ಅಂಶವೂ ಕಾಂಗ್ರೆಸ್‌ಗೆ ಪ್ಲಸ್‌.ಇನ್ನು ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣವು ಹಿಂದೂ ಮತಗಳನ್ನು ಬಿಜೆಪಿ ಕಡೆಗೆ ಸೆಳೆಯುವ ಸಾಧ್ಯತೆ. ಪ್ರಧಾನಿ ಮೋದಿ ಜನಪ್ರಿಯತೆ ಬಿಜೆಪಿಗೆ ನೆರವಾಗಲಿದೆ. ಇದನ್ನು ಪೂರ್ಣವಾಗಿ ತಡೆವುದು ಕಾಂಗ್ರೆಸ್‌ಗೆ ಆಗದು.

ಸ್ಪರ್ಧೆ ಹೇಗೆ?: ಮೇಲ್ನೋಟಕ್ಕೆ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದಿದ್ದರೂ, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಸಾಧ್ಯತೆ ದಟ್ಟವಾಗಿದೆ. ಕಳೆದ ಬಾರಿ 9 ಸ್ಥಾನ ಗೆದ್ದಿದ್ದ ಬಿಆರ್‌ಎಸ್‌ನ ಶಕ್ತಿ ಈ ಬಾರಿ ಕುಂದಿದೆ. ಇನ್ನೊಂದೆಡೆ ವಿಧಾನಸಭೆಯಲ್ಲಿ ಅಭೂತವೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಲೋಕಸಭೆಯಲ್ಲೂ ಅದೇ ಫಲಿತಾಂಶ ಮರುಕಳಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಗ್ಯಾರಂಟಿ ಯೋಜನೆಗಳು ತನ್ನ ಕೈಬಿಡಲ್ಲ ಎಂದು ಪಕ್ಷ ನಂಬಿದೆ.

 ಇನ್ನೊಂದೆಡೆ ಕಳೆದ ಬಾರಿ 4 ಸ್ಥಾನ ಗೆದ್ದು ಎರಡನೇ ಸ್ಥಾನದಲ್ಲಿದ್ದ ಬಿಜೆಪಿ, ಈ ಬಾರಿ ಮೋದಿ ಅಲೆ, ರಾಮಮಂದಿರ, ಸಿಎಎ ಜಾರಿ ಮೊದಲಾದ ಯೋಜನೆಗಳನ್ನು ಮುಂದಿಟ್ಟುಕೊಂಡು ಕನಿಷ್ಠ 12 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿದೆ. ಅಸಾಸುದ್ದೀನ್‌ ಒವೈಸಿ ನೇತೃತ್ವದ ಎಂಐಎಂ ಏನೇ ಮಾಡಿದರೂ ಲೋಕಸಭೆಯಲ್ಲಿ ಒಂದು ಸ್ಥಾನಕ್ಕಿಂತ ಹೆಚ್ಚು ಗೆಲ್ಲಲಾಗುತ್ತಿಲ್ಲ. ಇನ್ನು ಪಕ್ಷದ ನಾಯಕ ಅಸಾಸುದ್ದೀನ್‌ ಒವೈಸಿ ಗೆಲ್ಲುತ್ತಿದ್ದ ಒಂದು ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿಯ ಮಾಧವಿ ಲತಾ ತೀವ್ರ ಸ್ಪರ್ಧೆ ನೀಡುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿ: ಭ್ರಷ್ಟಾಚಾರ ವಿಷಯದಲ್ಲಿ ಪಕ್ಷಕ್ಕಿರುವ ಕ್ಲಿನ್‌ ಇಮೇಜ್‌ ಬಿಜೆಪಿಗೆ ದೊಡ್ಡ ಪ್ಲಸ್‌ ಪಾಯಿಂಟ್‌. ಕೇಂದ್ರದಲ್ಲಿನ ಪ್ರಬಲ ನಾಯಕತ್ವ ಮತ್ತು ಹಿಂದುತ್ವದ ಮತ ಸೆಳೆಯುವಲ್ಲಿ ಸಂಘ ಪರಿವಾರ ಸಂಘಟನೆಗಳ ಬಲ ಬಿಜೆಪಿಗೆ ಲಾಭ ತರಬಹುದು. ಆದರೆ ಅರ್ಹ ಅಭ್ಯರ್ಥಿಗಳ ಕೊರತೆ ಕಾರಣ, ಹಲವು ಕ್ಷೇತ್ರಗಳಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕಿರುವುದು. ಪ್ರತಿಯೊಂದಕ್ಕೆ ಕೇಂದ್ರದ ನಾಯಕರ ಮೊರೆ ಹೋಗಬೇಕಾದ ಅನಿವಾರ್ಯತೆ ಪಕ್ಷದ ಪಾಲಿಗೆ ಹಿನ್ನಡೆ.

ಬಿಆರ್‌ಎಸ್‌: ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳು, ಜಾತಿವಾರು ಘೋಷಣೆಗಳನ್ನೇ ಬಿಆರ್‌ಎಸ್‌ ಪಕ್ಷ ನಂಬಿಕೂತಿದೆ. ಇಂಡಿಯಾ ಅಥವಾ ಎನ್‌ಡಿಎ ಸೇರಿದಂತೆ ಯಾವುದೇ ಮೈತ್ರಿಕೂಟದ ಭಾಗವಾಗದೇ ಇರುವ ಕಾರಣ ಮಾಜಿ ಸಿಎಂ ಚಂದ್ರಶೇಖರ್‌ ರಾವ್‌ ಅವರ ಭಾರತ್‌ ರಾಷ್ಟ್ರೀಯ ಸಮಿತಿ ಏಕಾಂಗಿಯಾಗಿ ಹೋರಾಡಬೇಕಿದೆ.ಈ ನಡುವೆ ದೆಹಲಿ ಲಿಕ್ಕರ್‌ ಹಗರಣದಲ್ಲಿ ಮಾಜಿ ಸಿಎಂ ರಾವ್‌ ಪುತ್ರಿ ಕವಿತಾ ಬಂಧನ, ಟೆಲಿಫೋನ್‌ ಹಗರಣದಲ್ಲಿ ಬಿಆರ್‌ಎಸ್‌ ಪಕ್ಷದ ಹೆಸರು ಕೇಳಿಬಂದಿರುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಹಲವು ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದು ಪಕ್ಷದ ಪಾಲಿಗೆ ಹಿನ್ನಡೆ.