ಸಾರಾಂಶ
ರಾಮಭಕ್ತ ಹನುಮಂತನ ಜನ್ಮಸ್ಥಳ ಎಂದೇ ಪರಿಗಣಿತವಾಗಿರುವ ಕರ್ನಾಕಟದ ಕಿಷ್ಕಿಂಧೆ(ಹಂಪಿ)ಯಿಂದ ರಥಯಾತ್ರೆಗೆ ಹೊರಟಿದ್ದ ಹನುಮರಥ ವಿವಿಧ ದಿವ್ಯ ಕ್ಷೇತ್ರಗಳ ಮೂಲಕ ಅಯೋಧ್ಯೆಗೆ ಬಂದು ತಲುಪಿದೆ
ಅಯೋಧ್ಯೆ: ರಾಮಭಕ್ತ ಹನುಮಂತನ ಜನ್ಮಸ್ಥಳ ಎಂದೇ ಪರಿಗಣಿತವಾಗಿರುವ ಕರ್ನಾಕಟದ ಕಿಷ್ಕಿಂಧೆ(ಹಂಪಿ)ಯಿಂದ ರಥಯಾತ್ರೆಗೆ ಹೊರಟಿದ್ದ ಹನುಮರಥ ವಿವಿಧ ದಿವ್ಯ ಕ್ಷೇತ್ರಗಳ ಮೂಲಕ ಅಯೋಧ್ಯೆಗೆ ಬಂದು ತಲುಪಿದೆ.
ಈ ಕುರಿತು ಮಾತನಾಡಿದ ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಭಿಷೇಕ್ ಕೃಷ್ಣಶಾಸ್ತ್ರಿ, ‘ಎರಡು ತಿಂಗಳ ಕಾಲ ಸೀತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಿಯೂ ಸೇರಿದಂತೆ ಭಾರತದ ಹಲವು ದಿವ್ಯಕ್ಷೇತ್ರಗಳ ಮೂಲಕ ರಥಯಾತ್ರೆಯಲ್ಲಿ ಟ್ರಸ್ಟ್‌ನಿಂದ 100 ಸ್ವಯಂಸೇವಕರು ಅಯೋಧ್ಯೆಗೆ ಆಗಮಿಸಿದ್ದೇವೆ.
ದಾರಿಯಲ್ಲಿ ಭಕ್ತಾದಿಗಳು ನೀಡಿದ ದೇಣಿಗೆಯನ್ನು ಕಿಷ್ಕಿಂಧೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹನುಮ ಗುಡಿ ಮತ್ತು 215 ಮೀ. ಎತ್ತರದ ಹನುಮನ ಮೂರ್ತಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.
ಏನಿದು ಹನುಮರಥ?
ಹನುಮರಥವನ್ನು ದೇಗುಲದಂತೆಯೇ ವಿನ್ಯಾಸಗೊಳಿಸಲಾಗಿದ್ದು, ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಂತ, ಹಂಪಿ ವಿರೂಪಾಕ್ಷ ಮತ್ತು ಅಂಜನಿಯ ವಿಗ್ರಹಗಳನ್ನು ಇರಿಸಲಾಗಿದೆ.
ಇದರ ಸುತ್ತಲೂ ರಥಯಾತ್ರೆಯ ಅಪೂರ್ವ ಕ್ಷಣಗಳ ಭಾವಚಿತ್ರಗಳಿವೆ. ಈ ರಥವನ್ನು ಹನುಮಾನ್ ತೀರ್ಥಕ್ಷೇತ್ರ ಟ್ರಸ್ಟ್ 40 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪ್ರಸ್ತುತ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಜ.25ರವರೆಗೆ ನಿಲ್ಲಿಸಲಾಗಿರುತ್ತದೆ.
ಈ ರಥಯಾತ್ರೆಯಲ್ಲಿ , ಇಲ್ಲಿ ಬಂದ ದೇಣಿಗೆಯನ್ನು ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಭವ್ಯ ಹನುಮ ದೇಗುಲ ಸಂಕೀರ್ಣಕ್ಕೆ ಬಳಸಿಕೊಳ್ಳಲಾಗುವುದು.
ಅಯೋಧ್ಯೆ ತಾತ್ಕಾಲಿಕ ರಾಮಮಂದಿರವೂ 4 ದಿನ ಬಂದ್
ರಾಮಲಲ್ಲಾ ವಿರಾಜ್‌ಮಾನ್ ಮೂಲ ಪುಟ್ಟ ವಿಗ್ರಹ ಇರಿಸಲಾಗಿರುವ ಅಯೋಧ್ಯೆಯ ತಾತ್ಕಾಲಿಕ ರಾಮಮಂದಿರವನ್ನೂ ಶುಕ್ರವಾರದಿಂದ ಜ.22ರ ಸೋಮವಾರದವರೆಗೆ ಭಕ್ತರ ದರ್ಶನಕ್ಕೆ ಮುಚ್ಚಲಾಗಿದೆ.
ಇಲ್ಲಿರುವ ವಿಗ್ರಹಗಳನ್ನು ಜ.22ರಂದು ಅಯೋಧ್ಯೆಯ ನೂತನ ರಾಮಮಂದಿರದ ಗರ್ಭಗುಡಿಯಲ್ಲಿ ನೂತನ ರಾಮಲಲ್ಲಾನನ್ನು ಪ್ರತಿಷ್ಠಾಪಿಸುವ ಪೀಠದ ಮುಂದೆಯೇ ಇರಿಸಲಾಗುವುದು.