ಸಾರಾಂಶ
ಕೇಂದ್ರ ಸರ್ಕಾರದ ಪ್ರಸ್ತಾವಿತ ‘ಒಂದು ದೇಶ, ಒಂದು ಚುನಾವಣೆ’ಯ ವಿಷಯವನ್ನು ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಮೂಲ ರಚನೆಗೆ ವಿರುದ್ಧವಾದುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ‘ಒಂದು ದೇಶ, ಒಂದು ಚುನಾವಣೆ’ಯ ವಿಷಯವನ್ನು ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಮೂಲ ರಚನೆಗೆ ವಿರುದ್ಧವಾದುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಅಲ್ಲದೆ ಈ ಸಂಬಂಧ ವರದಿ ನೀಡಲು ರಚಿಸಲಾಗಿರುವ ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಈ ಕುರಿತು ಸಮಿತಿಯ ಕಾರ್ಯದರ್ಶಿ ನಿತೇನ್ ಚಂದ್ರ ಅವರಿಗೆ ಪತ್ರ ಬರೆದಿರುವ ಖರ್ಗೆ, ‘ಒಂದು ದೇಶ, ಚುನಾವಣೆ ನೀತಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತದೆ.
ದೃಢ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವದ ಘನತೆ ಕಾಪಾಡುವ ನಿಟ್ಟಿನಲ್ಲಿ ಇಡೀ ಯೋಜನೆಯನ್ನೆ ಕೈಬಿಡಬೇಕು ಮತ್ತು ಈ ಸಂಬಂಧ ವರದಿ ನೀಡಲು ರಚಿಸಲಾಗಿರುವ ಸಮಿತಿಯನ್ನು ವಿಸರ್ಜಿಸಬೇಕು’ ಎಂದು ಕೋರಿದ್ದಾರೆ.
ಸಂವಿಧಾನದ ಮೂಲ ರಚನೆಗೆ ಒಂದು ದೇಶ ಒಂದು ಕಾಂಗ್ರೆಸ್ ಪರಿಕಲ್ಪನೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇದನ್ನು ಜಾರಿಗೆ ತರಬಾರದೆಂದು ಸಮಿತಿ ಅಧ್ಯಕ್ಷ ರಾಷ್ಟ್ರಪತಿ ಕೋವಿಂದ್‌ಗೆ ಖರ್ಗೆ ಪತ್ರ ಬರೆದಿದ್ದಾರೆ.
ಜೊತೆಗೆ, ‘ದೇಶದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನವನ್ನು ಮಟ್ಟಹಾಕಲು ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿಗಳ ಕಾರ್ಯಾಲಯ ಮತ್ತು ವೈಯಕ್ತಿಕವಾಗಿ ನಿಮ್ಮನ್ನು ಬಳಸಿಕೊಳ್ಳಲು ಅವಕಾಶ ನೀಡಬಾರದು ಎಂದು ಈ ಮೂಲಕ ಕಾಂಗ್ರೆಸ್ ಮತ್ತು ದೇಶದ ಪರವಾಗಿ ನಾವು ಮನವಿ ಮಾಡಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಖರ್ಗೆ ಉಲ್ಲೇಖಿಸಿದ್ದಾರೆ.
ಒಂದು ದೇಶ, ಒಂದು ಚುನಾವಣೆ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೋವಿಂದ್ ಅಧ್ಯಕ್ಷತೆಯ ಸಮಿತಿಯು ಕಳೆದ ಅ.18ರಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರಿಗೆ ಪತ್ರ ಬರೆದಿತ್ತು. ಆ ಪತ್ರಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಖರ್ಗೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.