ಸಾರಾಂಶ
ನವದೆಹಲಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಭಾರತವು ಅಮೆರಿಕದ ಕೆಲ ಉತ್ಪನ್ನಗಳ ಮೇಲಿನ ತೆರಿಗೆ ಕಡಿತ ಮಾಡುವ ಕುರಿತು ಚಿಂತನೆ ನಡೆಸಿದೆ. ಅಮೆರಿಕದಿಂದ ಆಮದು ಮಾಡುವ ವಿಶೇಷ ಸ್ಟೀಲ್, ದುಬಾರಿ ಮೋಟಾರ್ ಬೈಕ್‌ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ತೆರಿಗೆಯನ್ನು ಬಜೆಟ್‌ನಲ್ಲಿ ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ವಸ್ತುಗಳ ಮೇಲಿನ ತೆರಿಗೆ ಕಡಿತದಿಂದ ದೇಶೀ ಉದ್ಯಮಗಳ ಮೇಲೆ ಹೇಳಿಕೊಳ್ಳುವಂಥ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದ್ದು, ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್‌ನಲ್ಲಿ ಈ ಕುರಿತು ಸ್ಪಷ್ಟಮಾಹಿತಿ ಸಿಗಬಹುದು ಎಂದು ಹೇಳಲಾಗಿದೆ.
ಸದ್ಯ ಭಾರತವು ಅಮೆರಿಕದಿಂದ 20 ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಆ ಉತ್ಪನ್ನಗಳ ಮೇಲೆ ಶೇ.100ಕ್ಕಿಂತ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ.
ಡೊನಾಲ್ಡ್ ಟ್ರಂಪ್ ಅವರು ಮಂಗಳವಾರವಷ್ಟೇ ಚೀನಾ, ಭಾರತ ಮತ್ತು ಬ್ರೆಜಿಲ್ ಮತ್ತಿತರ ದೇಶಗಳ ಮೇಲೆ ಭಾರೀ ತೆರಿಗೆ ಹಾಕುವ ಬೆದರಿಕೆ ಹಾಕಿದ್ದರು. ಈ ದೇಶಗಳು ಅಮೆರಿಕದ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ಹಾಕಿ ತೊಂದರೆ ಕೊಡುತ್ತಿವೆ. ಹೀಗಾಗಿ ಆ ದೇಶಗಳಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೂ ಭಾರೀ ತೆರಿಗೆ ಹಾಕುವುದಾಗಿ ಅವರು ಗುಡುಗಿದ್ದರು. ಅದರ ಬೆನ್ನಲ್ಲೇ ಭಾರತದಿಂದ ತೆರಿಗೆ ಕಡಿತದ ಚಿಂತನೆ ನಡೆದಿದೆ.
ಭಾರತ ಮತ್ತು ಅಮೆರಿಕದ ನಡುವಿನ ತೆರಿಗೆ ಅಂತರವು ಶೇ.11.9ರಷ್ಟಿದೆ. ಭಾರತಕ್ಕೆ ಹೋಲಿಸಿದರೆ ಇತರೆ ದೇಶಗಳ ಜತೆಗಿನ ಅಮೆರಿಕದ ತೆರಿಗೆ ಅಂತರವು ಕಂಡಿಮೆ ಇದೆ. ಚೀನಾ-ಅಮೆರಿಕದ ತೆರಿಗೆ ಅಂತರ ಶೇ.3.5, ವಿಯೆಟ್ನಾಂ ಶೇ.8, ಇಂಡೋನೇಷ್ಯಾ ಶೇ.7.2 ಮತ್ತು ಮೆಕ್ಸಿಕೋ ಜತೆಗಿನ ತೆರಿಗೆ ಅಂತರ ಶೇ.6.8ರಷ್ಟಿದೆ ಎಂದು ವಿಶ್ವಬ್ಯಾಂಕ್‌ನ ಅಂಕಿ-ಅಂಶಗಳು ಹೇಳುತ್ತಿವೆ.