ನವದೆಹಲಿ : ಕರ್ತವ್ಯಪಥದ ಗಣರಾಜ್ಯೋತ್ಸವ ಪರೇಡ್ - ಯುಪಿ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ

| N/A | Published : Jan 30 2025, 12:33 AM IST / Updated: Jan 30 2025, 05:30 AM IST

ಸಾರಾಂಶ

ಇಲ್ಲಿನ ಕರ್ತವ್ಯಪಥದಲ್ಲಿ ಜ.26ರಂದು ನಡೆದಿದ್ದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ರಕ್ಷಣಾ ಇಲಾಖೆ ಬಹುಮಾನ ಘೋಷಿಸಿದೆ.

ನವದೆಹಲಿ: ಇಲ್ಲಿನ ಕರ್ತವ್ಯಪಥದಲ್ಲಿ ಜ.26ರಂದು ನಡೆದಿದ್ದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ರಕ್ಷಣಾ ಇಲಾಖೆ ಬಹುಮಾನ ಘೋಷಿಸಿದೆ.

ಮಹಾಕುಂಭ ಮೇಳದ ಕುರಿತು ಉತ್ತರ ಪ್ರದೇಶ ಪ್ರದರ್ಶಿಸಿದ್ದ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ ದೊರಕಿದ್ದು, ‘ಶಾಶ್ವತ ಗೌರವ’ ಥೀಮ್‌ನಲ್ಲಿ ತ್ರಿಪುರಾ ಪ್ರದರ್ಶಿಸಿದ ಸ್ತಬ್ಧಚಿತ್ರ 2ನೇ ಸ್ಥಾನ ಪಡೆದಿದೆ. ಪರಿಸರಸ್ನೇಹಿ ಮರದ ಆಟಿಕೆಗಳನ್ನು ಪ್ರದರ್ಶಿಸಿದ ಆಂಧ್ರಪ್ರದೇಶದ ಸ್ತಬ್ಧಚಿತ್ರ 3ನೇ ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡಿದೆ.

ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸ್ತಬ್ಧಚಿತ್ರವನ್ನು ಅತ್ಯುತ್ತಮವೆಂದು ಘೋಷಿಸಲಾಗಿದೆ. ಸೇನಾಪಡೆಗಳ ಪಥಸಂಚಲನದಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ ಮೊದಲ ಸ್ಥಾನ ಪಡೆದಿದೆ. ಇನ್ನು ಸಶಸ್ತ್ರಪಡೆಗಳ ಪೈಕಿ ದೆಹಲಿ ಪೊಲೀಸರು ಪ್ರಥಮ ಸ್ಥಾನ ಪಡೆದಿದ್ದಾರೆ.

ಇದಲ್ಲದೆ, ಕೇಂದ್ರ ಸರ್ಕಾರ ಜ.26ರಿಂದ 28ರವರೆಗೆ MyGov ಪೋರ್ಟಲ್‌ನಲ್ಲಿ ನಾಗರಿಕರು ತಮ್ಮ ನೆಚ್ಚಿನ ಸ್ತಬ್ಧಚಿತ್ರ ಮತ್ತು ಕವಾಯತು ತುಕಡಿಗೆ ಮತ ಚಲಾಯಿಸಿ, ಆಯ್ಕೆ ಮಾಡುವಂತೆ ಅವಕಾಶ ಕಲ್ಪಿಸಿತ್ತು. ಇದರಲ್ಲಿ ಗುಜರಾತ್‌ನ ಸ್ತಬ್ಧಚಿತ್ರ (ಸ್ವರ್ಣಿಮ ಭಾರತ:ಪರಂಪರೆ ಮತ್ತು ವಿಕಾಸ) ಮೊದಲ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶ (ಮಹಾಕುಂಭ ಮೇಳ) ಮತ್ತು ಉತ್ತರಾಖಂಡ (ಸಾಂಸ್ಕೃತಿಕ ಪರಂಪರೆ ಮತ್ತು ಸಾಹಸ ಕ್ರೀಡೆಗಳು) ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಪಡೆದಿವೆ. ಅತ್ಯುತ್ತಮ ಕವಾಯತು ತುಕಡಿಗೆ ಕೊಡುವ ‘ಪಾಪ್ಯುಲರ್ ಚಾಯ್ಸ್’ ಪ್ರಶಸ್ತಿ ಸಿಗ್ನಲ್ಸ್ ತುಕಡಿಗೆ ಸಂದಿದೆ. ಸಿಆರ್‌ಪಿಎಫ್‌ನ ತುಕಡಿ ‘ಅತ್ಯುತ್ತಮ ತುಕಡಿ’ ಎಂದು ಘೋಷಿಸಲ್ಪಟ್ಟಿದೆ.