16 ಭಾರತೀಯ ನಾವಿಕರು ಶೀಘ್ರ ಬಿಡುಗಡೆ: ಇರಾನ್‌

| Published : Apr 28 2024, 01:21 AM IST / Updated: Apr 28 2024, 05:01 AM IST

ಸಾರಾಂಶ

ಕೊನೆಗೂ ಫಲಿಸಿದ ಭಾರತ ಸರ್ಕಾರದ ಪ್ರಯತ್ನದಿಂದಾಗಿ 16 ನಾವಿಕರನ್ನು ಬಿಡುಗಡೆ ಮಾಡುವುದಾಗಿ ಇರಾನ್‌ ತಿಳಿಸಿದೆ. ಇದಕ್ಕೂ ಮೊದಲು ಓರ್ವ ಮಹಿಳಾ ಸಿಬ್ಬಂದಿಯನ್ನು ಬಿಡುಗಡೆ ಮಾಡಿತ್ತು.

ನವದೆಹಲಿ: ತಾನು ವಶಪಡಿಸಿಕೊಂಡಿರುವ ಇಸ್ರೇಲ್‌ನ ಸರಕು ಸಾಗಣೆ ಹಡಗಿನಲ್ಲಿದ್ದ 16 ಭಾರತೀಯ ನಾವಿಕರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಇರಾನ್‌ ಸರ್ಕಾರ ಹೇಳಿದೆ. ಅದರೊಂದಿಗೆ, ಏ.13ರಿಂದ ಇರಾನ್‌ನ ವಶದಲ್ಲಿರುವ ಭಾರತೀಯ ನಾವಿಕರು ನಿಟ್ಟುಸಿರು ಬಿಡುವಂತಾಗಿದೆ.

ಇರಾನ್‌ ಹಾಗೂ ಇಸ್ರೇಲ್‌ ನಡುವೆ ಪ್ಯಾಲೆಸ್ತೀನ್‌ ವಿಚಾರವಾಗಿ ಸಂಘರ್ಷ ನಡೆಯುತ್ತಿದೆ. ಅದರ ಪರಿಣಾಮ ಹೊರ್ಮುಜ್‌ ಕೊಲ್ಲಿಯಲ್ಲಿ ಏ.13ರಂದು ಇರಾನ್‌ ನೌಕಾಪಡೆಯು ಇಸ್ರೇಲ್‌ ಮೂಲದ ‘ಎಂಎಸ್‌ಸಿ ಏರೀಸ್‌’ ಎಂಬ ಸರಕು ಹಡಗನ್ನು ವಶಪಡಿಸಿಕೊಂಡಿತ್ತು. 

ಅದು ಪೋರ್ಚುಗಲ್‌ನ ಸರಕನ್ನು ಸಾಗಣೆ ಮಾಡುತ್ತಿತ್ತು. ಆ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿಯಿದ್ದರು. ಅವರ ಪೈಕಿ ಒಬ್ಬ ಮಹಿಳಾ ನಾವಿಕಳನ್ನು ಇರಾನ್‌ ಈಗಾಗಲೇ ಬಿಡುಗಡೆ ಮಾಡಿದ್ದು, ಏ.18ರಂದು ಆಕೆ ಕೇರಳಕ್ಕೆ ಬಂದಿದ್ದಾರೆ. ಭಾರತ ಸರ್ಕಾರದ ಸತತ ಪ್ರಯತ್ನದ ಫಲವಾಗಿ ಇದೀಗ ಇನ್ನುಳಿದ 16 ನಾವಿಕರನ್ನು ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಇರಾನ್‌ ಪ್ರಕಟಿಸಿದೆ. ಈ ಕುರಿತು ಪೋರ್ಚುಗಲ್‌ನ ವಿದೇಶಾಂಗ ಸಚಿವರಿಗೆ ಇರಾನ್‌ನ ವಿದೇಶಾಂಗ ಸಚಿವರು ಶನಿವಾರ ಮಾಹಿತಿ ನೀಡಿದ್ದಾರೆ.