ಸಾರಾಂಶ
ವಾಷಿಂಗ್ಟನ್: ಸಿರಿಯಾದಲ್ಲಿನ ತನ್ನ ರಾಯಭಾರ ಕಚೇರಿ ಮೇಲೆ ಇತ್ತೀಚೆಗೆ ನಡೆದ ವೈಮಾನಿಕ ದಾಳಿಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಶಂಕಿಸಿರುವ ಇರಾನ್, ಇಸ್ರೇಲ್ ವಿರುದ್ಧ ದಾಳಿಗೆ ಸಿದ್ಧತೆ ಆರಂಭಿಸಿದೆ. ಅಲ್ಲದೆ ತಮ್ಮಿಬ್ಬರ ವಿಷಯದಲ್ಲಿ ಮಧ್ಯಪ್ರವೇಶ ಮಾಡದಂತೆ ಅಮೆರಿಕಕ್ಕೆ ಪತ್ರ ಬರೆದು ಎಚ್ಚರಿಕೆ ನೀಡಿದೆ.
ಮತ್ತೊಂದೆಡೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರು ಕೂಡಾ ಇಸ್ರೇಲ್ ಮೇಲೆ ತಾನು ಯುದ್ಧಕ್ಕೆ ಸಿದ್ಧ ಎಂದು ಘೋಷಿಸಿದೆ. ಹೀಗಾಗಿ ಮುಂದಿನ ಕೆಲ ದಿನಗಳಲ್ಲಿ ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧ ಮತ್ತೆ ತೀವ್ರಗೊಳ್ಳುವ ಆತಂಕ ಎದುರಾಗಿದೆ.
ವೈಮಾನಿಕ ದಾಳಿ:
ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್‌ನ ಗುಪ್ತಚರ ವಿಭಾಗವಾದ ‘ಖಡ್ಸ್ ಫೋರ್ಸ್’ನ ಹಲವರು ಸಿರಿಯಾದಲ್ಲಿನ ಇರಾನ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಶಂಕೆ ಮೇರೆಗೆ ಇತ್ತೀಚೆಗೆ ಅಲ್ಲಿ ಇಸ್ರೇಲ್ ದಾಳಿ ನಡೆಸಿತ್ತು. ಅದರಲ್ಲಿ 13 ಜನರು ಸಾವನ್ನಪ್ಪಿದ್ದರು. ದಾಳಿ ಹೊಣೆಯನ್ನು ಇಸ್ರೇಲ್ ಹೊತ್ತಿಲ್ಲವಾದರೂ, ಇರಾನ್‌ಗೆ ಇಸ್ರೇಲ್ ಮೇಲೆ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಅದು ಇಸ್ರೇಲ್ ಮೇಲೆ ದಾಳಿಗೆ ಸಜ್ಜಾಗುತ್ತಿದೆ. ಆದರೆ ಇಂಥದ್ದೊಂದು ದಾಳಿಯ ಸಾಧ್ಯತೆ ಊಹಿಸಿ ಅಮೆರಿಕ ಇಸ್ರೇಲ್ ಆಸುಪಾಸಿನ ಪ್ರದೇಶಗಳಿಗೆ ತನ್ನ ಯುದ್ಧನೌಕೆಗಳನ್ನು ರವಾನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡದಂತೆ ಇರಾನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.