ಸಾರಾಂಶ
ಪಿಟಿಐ ಬೆಂಗಳೂರು
ಪ್ರತಿಕೂಲ ಹವಾಮಾನ ಅಥವಾ ಇನ್ನಾವುದೇ ಆಪತ್ತಿನಿಂದಾಗಿ ಸಮುದ್ರದಲ್ಲಿ ಸಿಲುಕುವ ಮೀನುಗಾರರ ರಕ್ಷಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಎರಡನೇ ತಲೆಮಾರಿನ ‘ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್‌ಮಿಟರ್’ (ಡಾಟ್) ಎಂಬ ಉಪಕರಣವನ್ನು ಅಭಿವೃದ್ಧಿಪಡಿಸಿದೆ.
ಇದನ್ನು ಬಳಸಿ ಮೀನುಗಾರರು ಉಪಗ್ರಹದ ಮೂಲಕ ಸಮುದ್ರದಿಂದ ತುರ್ತು ಸಂದೇಶ ರವಾನಿಸಬಹುದು ಮತ್ತು ಅವರಿಗೆ ತಕ್ಷಣ ಪ್ರತಿಕ್ರಿಯೆ ಲಭಿಸುತ್ತದೆ.ಈಗಾಗಲೇ ಇರುವ ಡಾಟ್ ವ್ಯವಸ್ಥೆಯನ್ನು ಇಸ್ರೋ ಮೇಲ್ದರ್ಜೆಗೇರಿಸಿದೆ.
ತಮ್ಮ ಮೊಬೈಲ್‌ನಲ್ಲೇ ಮೀನುಗಾರರು ಈ ಸೌಕರ್ಯವನ್ನು ಬಳಸಬಹುದು. ಅವರು ಕಳುಹಿಸಿದ ಸಂದೇಶವು ಇಂಡಿಯನ್ ಮಿಷನ್ ಕಂಟ್ರೋಲ್ ಸೆಂಟರ್‌ಗೆ ಬರುತ್ತದೆ. ಅಲ್ಲಿಂದ ಕರಾವಳಿ ರಕ್ಷಣಾ ಪಡೆಗೆ ಅದನ್ನು ರವಾನಿಸಲಾಗುತ್ತದೆ.
ಅವರಿಗೆ ಮೀನುಗಾರರಿರುವ ಸ್ಥಳ ತಿಳಿಯುತ್ತದೆ. ತಕ್ಷಣ ಅವರು ರಕ್ಷಣೆಗೆ ಧಾವಿಸುತ್ತಾರೆ ಎಂದು ಇಸ್ರೋ ತಿಳಿಸಿದೆ.ಇದೇ ವ್ಯವಸ್ಥೆಯನ್ನು ಬಳಸಿ ಮೀನುಗಾರರು ಸುರಕ್ಷಿತ ಸ್ಥಳಕ್ಕೆ ತಾವೇ ತೆರಳುವ ಅಥವಾ ಮರಳಿ ತಮ್ಮ ಸ್ಥಳಕ್ಕೆ ಬರುವ ಅವಕಾಶವೂ ಇದೆ.
ಹಾಗೆಯೇ, ಚೆನ್ನಾಗಿ ಮೀನುಗಳು ಸಿಗುವ ಜಾಗವನ್ನೂ ಡಾಟ್ ಬಳಸಿ ಕಂಡುಕೊಳ್ಳಬಹುದು. ಅದರಿಂದ ಸಮಯ ಹಾಗೂ ಇಂಧನ ಉಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಆಪತ್ತಿನ ಸಂದರ್ಭದಲ್ಲಿ ಮೀನುಗಾರರು ಕಳುಹಿಸುವ ತುರ್ತು ಸಂದೇಶಕ್ಕೆ ತಕ್ಷಣ ಪ್ರತ್ಯುತ್ತರ ಬರುವುದರಿಂದ ತಮ್ಮನ್ನು ರಕ್ಷಿಸಲು ಯಾರೋ ಬರುತ್ತಿದ್ದಾರೆ ಎಂಬ ಸುರಕ್ಷತಾ ಭಾವನೆ ಅವರಲ್ಲಿ ಮೂಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ಡಾಟ್-ಎಸ್‌ಜಿ ವ್ಯವಸ್ಥೆಯನ್ನು ಇಸ್ರೋ ಚೇರ್ಮನ್ ಎಸ್.ಸೋಮನಾಥ್ ಉದ್ಘಾಟಿಸಿದರು. ಇದು ದಿನದ 24 ಗಂಟೆ ಲಭ್ಯವಿರುವ ತುರ್ತು ಸಂದೇಶ ವ್ಯವಸ್ಥೆಯಾಗಿದೆ.